ಚೀನಾದ CATL ಕಂಪನಿಯು ವಿಶ್ವದ ಅತಿ ವೇಗದ 'ಬ್ಯಾಟರಿ ಸ್ವಾಪ್' ನೆಟ್‌ವರ್ಕ್ ಅನ್ನು ಪ್ರಾರಂಭಿಸಿದೆ, ಇದು 'ಚೋಕೋ-ಸ್ವಾಪ್' ತಂತ್ರಜ್ಞಾನದ ಮೂಲಕ ಎಲೆಕ್ಟ್ರಿಕ್ ಟ್ರಕ್‌ಗಳ ಬ್ಯಾಟರಿಯನ್ನು ಕೇವಲ 2 ನಿಮಿಷಗಳಲ್ಲಿ ಬದಲಾಯಿಸುತ್ತದೆ.

ಬೀಜಿಂಗ್(ಮೇ.30): ಎಲೆಕ್ಟ್ರಿಕ್ ವಾಹನಗಳ (EV) ಚಾರ್ಜಿಂಗ್ ಸಮಸ್ಯೆಗೆ ಮತ್ತು ಗಂಟೆಗಟ್ಟಲೆ ಕಾಯುವ ಕಿರಿಕಿರಿಗೆ ಈಗ ಜಾಗತಿಕ ಮಾರುಕಟ್ಟೆಯಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ. ಬ್ಯಾಟರಿ ತಯಾರಿಕಾ ವಲಯದ ವಿಶ್ವದ ಪ್ರಮುಖ ಮತ್ತು ಹೆಸರಾಂತ ಸಂಸ್ಥೆಯಾದ CATL ಚೀನಾದಲ್ಲಿ ಜಗತ್ತಿನ ಮೊದಲ ಹಾಗೂ ಅತ್ಯಂತ ವೇಗದ ‘ಬ್ಯಾಟರಿ ಸ್ವಾಪ್’ (Battery Swap) ನೆಟ್‌ವರ್ಕ್ ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಈ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಎಲೆಕ್ಟ್ರಿಕ್ ಟ್ರಕ್‌ಗಳ ಬ್ಯಾಟರಿಯನ್ನು ಕೇವಲ 2 ನಿಮಿಷಗಳಲ್ಲಿ ಬದಲಾಯಿಸಿ, ಮರುಬಳಕೆಗೆ ಸಿದ್ಧಗೊಳಿಸಬಹುದಾಗಿದೆ. ಇದರಿಂದಾಗಿ ಚಾಲಕರು ಚಾರ್ಜಿಂಗ್‌ಗಾಗಿ ಗಂಟೆಗಟ್ಟಲೆ ಸಮಯ ವ್ಯರ್ಥ ಮಾಡುವುದು ಸಂಪೂರ್ಣವಾಗಿ ತಪ್ಪಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಂತು ‘ಚೋಕೋ-ಸ್ವಾಪ್’ ಇಕೋಸಿಸ್ಟಮ್!

EV ರಂಗದಲ್ಲಿ ತನ್ನದೇ ಆದ ದರ್ಬಾರ್ ಹೊಂದಿರುವ CATL ಕಂಪನಿಯು ತನ್ನ ನೂತನ ‘ಚೋಕೋ-ಸ್ವಾಪ್’ (Choco-swap) ಸಿಸ್ಟಮ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನಗರ ಪ್ರದೇಶದ ಲಾಜಿಸ್ಟಿಕ್ಸ್ ಸಾರಿಗೆಯನ್ನು ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಿ ಪರಿವರ್ತಿಸುವ ಮತ್ತು ನಿರ್ವಹಣಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ‘ಲೈಟ್ ಟ್ರಕ್ ಬ್ಯಾಟರಿ-ಸ್ವಾಪ್ ಇಕೋಸಿಸ್ಟಮ್’ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಸಿಸ್ಟಮ್ ಅಡಿಯಲ್ಲಿ ಕೇವಲ 120 ಸೆಕೆಂಡುಗಳಲ್ಲಿ (2 ನಿಮಿಷ) ಇವಿ ಟ್ರಕ್‌ನ ಬ್ಯಾಟರಿಯನ್ನು ಬದಲಾಯಿಸಬಹುದು.

ಕಂಪನಿಯ ಅಧಿಕೃತ ಮಾರುಕಟ್ಟೆ ವರದಿಯ ಪ್ರಕಾರ, ವಾಹನದ 8 ವರ್ಷಗಳ ಜೀವಿತಾವಧಿಯಲ್ಲಿ (Life Cycle) ಈ ತಂತ್ರಜ್ಞಾನವು ಇಂಧನ ತುಂಬಿಸುವ ಅಥವಾ ಚಾರ್ಜಿಂಗ್ ಮಾಡುವ ಬರೋಬ್ಬರಿ 2,000 ಕ್ಕೂ ಹೆಚ್ಚು ಗಂಟೆಗಳನ್ನು ಉಳಿಸಲಿದೆ. ಇದು ಉದ್ಯಮಿಗಳಿಗೆ ಹಾಗೂ ವಾಹನ ಮಾಲೀಕರಿಗೆ ಭಾರಿ ಲಾಭ ತಂದುಕೊಡಲಿದೆ.

‘ಚೋಕೋ-ಸ್ವಾಪ್’ ತಂತ್ರಜ್ಞಾನದ ಪ್ರಮುಖ ವೈಶಿಷ್ಟ್ಯಗಳು

ಅಪ್ರತಿಮ ಸಮಯದ ಉಳಿತಾಯ: ಸಾಂಪ್ರದಾಯಿಕ ಇಂಧನ ತುಂಬಿಸುವಿಕೆ ಅಥವಾ ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್‌ಗೆ ಹೋಲಿಸಿದರೆ, ಈ ವ್ಯವಸ್ಥೆಯು ಲಾಜಿಸ್ಟಿಕ್ಸ್ ಫ್ಲೀಟ್‌ಗಳ ಡೌನ್‌ಟೈಮ್ (ವಾಹನ ನಿಲ್ಲುವ ಸಮಯ) ಅನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಅರ್ಧದಷ್ಟು ವೆಚ್ಚದ ಉಳಿತಾಯ: ಇಂಧನ ದರಕ್ಕೆ ಹೋಲಿಸಿದರೆ, ಈ ನೂತನ ಬ್ಯಾಟರಿ ಸ್ವಾಪಿಂಗ್ ವ್ಯವಸ್ಥೆಯಲ್ಲಿನ ಶಕ್ತಿಯ ವೆಚ್ಚವು ಸಾಂಪ್ರದಾಯಿಕ ಡೀಸೆಲ್ ಲೈಟ್ ಟ್ರಕ್‌ಗಳಿಗಿಂತ ಸುಮಾರು ಅರ್ಧದಷ್ಟು (ಶೇ. 50 ರಷ್ಟು) ಕಡಿಮೆಯಾಗಲಿದೆ.

ಕಮರ್ಷಿಯಲ್ ಮತ್ತು ಪ್ಯಾಸೆಂಜರ್ ಎರಡಕ್ಕೂ ಲಭ್ಯ: CATL ನ ಈ ಮಾಡ್ಯುಲರ್ ಬ್ಯಾಟರಿ ಸ್ವಾಪಿಂಗ್ ಸ್ಟೇಷನ್‌ಗಳು ಕೇವಲ ಟ್ರಕ್‌ಗಳಿಗೆ ಮಾತ್ರವಲ್ಲದೆ, ಸಾಮಾನ್ಯ ಪ್ರಯಾಣಿಕರ ಕಾರುಗಳಿಗೂ (2.7 ಮೀಟರ್‌ನಿಂದ 3.75 ಮೀಟರ್ ವೀಲ್‌ಬೇಸ್ ಹೊಂದಿರುವ ವಾಹನಗಳು) ಸೂಕ್ತವಾಗಿವೆ. ಈ ಸ್ಟೇಷನ್‌ಗಳು ಕಂಪನಿಯ 25 kWh ಮತ್ತು 35 kWh ಬ್ಯಾಟರಿ ಪ್ಯಾಕ್‌ಗಳೊಂದಿಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತವೆ.

ಭವಿಷ್ಯದ ಬೃಹತ್ ವಿಸ್ತರಣಾ ಯೋಜನೆಗಳು

CATL ಕಂಪನಿಯು ಪ್ರಸ್ತುತ ಚೀನಾದ ಗುವಾಂಗ್‌ಡಾಂಗ್-ಹಾಂಗ್ ಕಾಂಗ್-ಮಕಾವೊ ಗ್ರೇಟರ್ ಬೇ ಏರಿಯಾದಲ್ಲಿ 31 ಸ್ವಾಪಿಂಗ್ ಸ್ಟೇಷನ್‌ಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಪ್ರಸ್ತುತ ವರ್ಷದ (2026) ಅಂತ್ಯದ ವೇಳೆಗೆ ಈ ಪ್ರದೇಶದಲ್ಲಿ ಸ್ಟೇಷನ್‌ಗಳ ಸಂಖ್ಯೆಯನ್ನು 140 ಕ್ಕೆ ಹೆಚ್ಚಿಸುವ ಗುರಿಯನ್ನು ಕಂಪನಿ ಹೊಂದಿದೆ.

ಅಷ್ಟೇ ಅಲ್ಲದೆ, ತನ್ನ ಅಂಗಸಂಸ್ಥೆಯಾದ DST ಯೊಂದಿಗೆ ಕೈಜೋಡಿಸಿರುವ CATL, 2026 ರ ಅಂತ್ಯದ ವೇಳೆಗೆ ಗ್ರೇಟರ್ ಬೇ ಏರಿಯಾದಲ್ಲಿ 5,000 ಬ್ಯಾಟರಿ-ಸ್ವಾಪ್ ಲೈಟ್ ಟ್ರಕ್‌ಗಳನ್ನು ರಸ್ತೆಗಿಳಿಸಲು ಯೋಜಿಸಿದೆ. ಕಂಪನಿಯು ಮುಂದಿನ ದಿನಗಳಲ್ಲಿ 3,000 ಕ್ಕೂ ಹೆಚ್ಚು ಪ್ಯಾಸೆಂಜರ್ ಮತ್ತು ಲೈಟ್ ಟ್ರಕ್ ಸ್ವಾಪ್ ಸ್ಟೇಷನ್‌ಗಳನ್ನು ನಿರ್ಮಿಸಲು ಕಾರ್ಯಪ್ರವೃತ್ತವಾಗಿದ್ದು, ದೀರ್ಘಾವಧಿಯಲ್ಲಿ ಇಡೀ ಚೀನಾದಾದ್ಯಂತ ಬರೋಬ್ಬರಿ 30,000 ಸ್ಟೇಷನ್‌ಗಳ ಬೃಹತ್ ನೆಟ್‌ವರ್ಕ್ ನಿರ್ಮಿಸುವ ಅಂತಿಮ ಗುರಿಯನ್ನು ಹೊಂದಿದೆ.

ಇತರ ಕ್ಷೇತ್ರಗಳಿಗೂ ನೆಟ್‌ವರ್ಕ್ ವ್ಯಾಪ್ತಿ

CATL ಸಂಸ್ಥೆಯು ಕೇವಲ ಲೈಟ್ ಟ್ರಕ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಕಂಪನಿಯ ‘ಕಿಜಿ ಎನರ್ಜಿ’ (Qiji Energy) ವಿಭಾಗವು ಇದೇ ವರ್ಷದಲ್ಲಿ 900 ಹೆವಿ-ಟ್ರಕ್ (ಭಾರೀ ಸರಕು ಸಾಗಣೆ ಟ್ರಕ್) ಬ್ಯಾಟರಿ ಸ್ವಾಪ್ ಸ್ಟೇಷನ್‌ಗಳನ್ನು ನಿರ್ಮಿಸುವ ಬೃಹತ್ ಯೋಜನೆಯ ಮೇಲೆ ಕೆಲಸ ಮಾಡುತ್ತಿದೆ. ಇದರ ಜೊತೆಗೆ, ಇತ್ತೀಚೆಗಷ್ಟೇ ಕಂಪನಿಯು ಸಾರ್ವಜನಿಕ ಟ್ಯಾಕ್ಸಿಗಳ ಬ್ಯಾಟರಿ ಸ್ವಾಪ್ ನೆಟ್‌ವರ್ಕ್ ಅಭಿವೃದ್ಧಿಪಡಿಸುವ ಸಲುವಾಗಿ ‘ಗುವಾಂಗ್‌ಝೌ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಗ್ರೂಪ್’ ಜೊತೆ ಪ್ರಮುಖ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದೆ.