ಕಾರು ಡಿಜಿಟಲ್ ಆಗ್ತಿದೆ. ಬಟನ್ ಹೋಗಿ ಟಚ್ ಸ್ಕ್ರೀನ್ ಬಂದಾಗಿದೆ. ಆದ್ರೆ ಇದ್ರಲ್ಲೂ ಈಗ ಸಮಸ್ಯೆ ಕಾಣ್ತಿದೆ. ಕಾರು ಕಂಪನಿಗಳು ಚಾಲಕರ ಸುರಕ್ಷತೆಗೆ ಆದ್ಯತೆ ನೀಡಲು ಮಹತ್ವದ ನಿರ್ಧಾರ ಕೈಗೊಳ್ತಿವೆ.
ಕಳೆದ ಕೆಲವು ವರ್ಷಗಳಲ್ಲಿ ಕಾರಿನ ಇಂಟಿರಿಯರ್ ಸಂಪೂರ್ಣ ರೂಪಾಂತರಗೊಂಡಿದೆ. ಹಿಂದೆ ಡ್ಯಾಶ್ಬೋರ್ಡ್ ಸ್ಪಷ್ಟ ಫಿಜಿಕಲ್ ಬಟನ್, ಸ್ವಿಚ್ ಗಳಿರ್ತಾ ಇದ್ವು. ಈಗ ಅವುಗಳನ್ನು ದೊಡ್ಡ ಟಚ್ಸ್ಕ್ರೀನ್ಗಳಲ್ಲಿ ನೀಡಲಾಗಿದೆ. ಕಾರು ಕಂಪನಿಗಳು ಇದನ್ನು ಡ್ರೈವಿಂಗ್ ಭವಿಷ್ಯ ಅಂತ ಕರೀತಾರೆ. ಟಚ್ ಸ್ಕ್ರೀನ್ ಐಷಾರಾಮಿ ಲುಕ್ ಹಾಗೂ ಡಿಜಿಟಲ್ ಅನುಭವ ನೀಡುತ್ತದೆ.
ಕಾರಿಗೆ ಅಪಾಯಕಾರಿಯೇ ಟಚ್ ಸ್ಕ್ರೀನ್ (Touch screen) ?
ಕಾರು ಕಂಪನಿಗಳಿಗೆ ಟಚ್ ಸ್ಕ್ರೀನ್ ನಿಂದ ಸಾಕಷ್ಟು ಲಾಭ ಇದೆ. ಆದ್ರೆ ಡ್ರೈವಿಂಗ್ ಗೆ ಇದು ಹಾನಿಕಾರಕವಾಗಿದೆ. ಟಚ್ ಸ್ಕ್ರೀನ್ ನಲ್ಲಿ ಕಡಿಮೆ ಬಟನ್, ಹೆಚ್ಚು ಸ್ಕ್ರೀನ್ ಹಾಗೂ ಸಂಪೂರ್ಣ ಡಿಜಿಟಲ್ ಸೌಲಭ್ಯವಿರುತ್ತದೆ. ಇದ್ರಲ್ಲಿ ಉತ್ಪಾದನಾ ವೆಚ್ಚ ಕೂಡ ಕಡಿಮೆ. ಸಾಫ್ಟ್ವೇರ್ ಅಪ್ಡೇಟ್ ಮೂಲಕ ಹೊಸ ಫೀಚರ್ ಗಳನ್ನು ಸೇರಿಸಬಹುದು. ಹೆಚ್ಚುವರಿಯಾಗಿ, ಟಚ್ ಸ್ಕ್ರೀನ್ ಕಾರಿಗೆ ಪ್ರೀಮಿಯಂ ಮತ್ತು ಹೈಟೆಕ್ ಲುಕ್ ನೀಡುತ್ತದೆ. ಇದು ಗ್ರಾಹಕರನ್ನು ಆಕರ್ಷಿಸೋದು ಸಹಜ. ಆರಂಭದಲ್ಲಿ, ಈ ಬದಲಾವಣೆ ಆಧುನಿಕ ಮತ್ತು ರೋಮಾಂಚಕಾರಿ ಅನ್ನಿಸಿತ್ತು ಸತ್ಯವಾದ್ರೂ ಕ್ರಮೇಣ ಅದರ ಅನಾನುಕೂಲಗಳು ಹೊರ ಬರಲು ಶುರುವಾದ್ವು.
ದೊಡ್ಡ ಟಾಟಾ ಹ್ಯಾರಿಯರ್ ಕಾರು ಇದೀಗ ಕಡಿಮೆ ಬೆಲೆಯಲ್ಲಿ, ಪೆಟ್ರೋಲ್ ಎಂಜಿನ್ ಬಿಡುಗಡೆ
ಯುಕೆಯಲ್ಲಿ 2020 ರಲ್ಲಿ ಈ ಬಗ್ಗೆ ಅಧ್ಯಯನ ಒಂದು ನಡೆದಿದೆ. ಸಂಶೋಧನೆ ಪ್ರಕಾರ, ಡ್ರೈವಿಂಗ್ ಮಾಡುವಾಗ ಟಚ್ಸ್ಕ್ರೀನ್ ಬಳಸುವುದರಿಂದ ಚಾಲಕನ ಪ್ರತಿಕ್ರಿಯೆ ಸಮಯವನ್ನು ಶೇಕಡಾ 57 ರಷ್ಟು ವಿಳಂಬಗೊಳಿಸಬಹುದು. ಇದರರ್ಥ ಅಪಘಾತವಾಗುವ ಸಾಧ್ಯತೆ ಗುರುತಿಸಿ ಬ್ರೇಕ್ ಒತ್ತಲು ಅರ್ಧಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮೊಬೈಲ್ ಫೋನ್ ಬಳಸಿ ಡ್ರೈವಿಂಗ್ ಮಾಡಿದ್ರೆ ಎಷ್ಟು ಅಪಾಯಕಾರಿಯೋ ಅಷ್ಟೇ ಟಚ್ ಸ್ಕ್ರೀನ್ ಬಳಸೋದು ಅಪಾಯಕಾರಿ. ಮೊಬೈಲ್ ಫೋನ್ ಜೇಬಿನಲ್ಲಿದ್ದರೆ, ಟಚ್ಸ್ಕ್ರೀನ್ ಡ್ಯಾಶ್ಬೋರ್ಡ್ನಲ್ಲಿರುತ್ತದೆ.
ಡ್ರೈವರ್ ಗಳಿಂದ ಹೆಚ್ಚುತ್ತಿರುವ ದೂರಿನ ಕಾರಣ ಹಾಗೂ ಸಂಶೋಧನಾ ಫಲಿತಾಂಶದ ನಂತ್ರ ನಿಯಂತ್ರಕ ಸಂಸ್ಥೆಗಳು ಹೆಚ್ಚು ಜಾಗರೂಕವಾಗಿವೆ. ಕಾರು ತಯಾರಿಸೋ ನಿಯಮಗಳು ಸಾರ್ವಜನಿಕ ಹಿತಾಸಕ್ತಿಯಲ್ಲಿರಬೇಕು. ಯುರೋಪಿಯನ್ ಒಕ್ಕೂಟದ ಸ್ವತಂತ್ರ ಕಾರು ಸುರಕ್ಷತಾ ಸಂಸ್ಥೆಗಳು ಕಾರು ತಯಾರಕರಿಗೆ ಸ್ಪಷ್ಟ ಸಂದೇಶ ನೀಡಿವೆ. ಇಂಡಿಕೇಟರ್, ವೈಪರ್ಗಳು, ಹಾರ್ನ್ಗಳು, ಹೆಡ್ಲೈಟ್ಗಳು ಮತ್ತು ತುರ್ತು ವ್ಯವಸ್ಥೆಗಳಂತಹ ಅಗತ್ಯ ಕಾರ್ಯಗಳಿಗೆ ಫಿಜಿಕಲ್ ಬಟನ್ ನೀಡಿದ್ರೆ ಮಾತ್ರ ಫೈವ್ ಸ್ಟಾರ್ ಸುರಕ್ಷತಾ ರೇಟಿಂಗ್ ನೀಡೋದಾಗಿ ಹೇಳಿದೆ.
ನಿಮ್ಮ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ, ಹೊಸ ಮಹೀಂದ್ರ 3XO ಇವಿಗೆ ಮುಗಿಬಿದ್ದ ಜನ
ಟಚ್ ಸ್ಕ್ರೀನ್ ಅತಿಯಾಗಿ ಅವಲಂಬಿಸಿರುವ ವಾಹನಗಳು ಉನ್ನತ ಸುರಕ್ಷತಾ ರೇಟಿಂಗ್ಗಳನ್ನು ಪಡೆಯೋದು 2026ರಲ್ಲಿ ಕಷ್ಟವಾಗಲಿದೆ. ಇದು ಟಚ್ಸ್ಕ್ರೀನ್ಗಳ ಮೇಲಿನ ಸಂಪೂರ್ಣ ನಿಷೇಧವಲ್ಲ, ಬದಲಿಗೆ ಅಗತ್ಯ ಚಾಲನಾ ನಿಯಂತ್ರಣಗಳನ್ನು ಮತ್ತೆ ಅರ್ಥಗರ್ಭಿತ ಮತ್ತು ಸುರಕ್ಷಿತವಾಗಿಸುವ ಪ್ರಯತ್ನವಾಗಿದೆ.
ಈ ಎಚ್ಚರಿಕೆ ಕಾಗದಕ್ಕೆ ಸೀಮಿತವಾಗಿಲ್ಲ. ವಿಶ್ವದ ಪ್ರಮುಖ ಕಾರು ಕಂಪನಿಗಳು ಈಗ ತಮ್ಮ ನಿರ್ಧಾರಗಳನ್ನು ಮರುಪರಿಶೀಲಿಸುತ್ತಿವೆ. ವರ್ಷಗಳ ಕಾಲ ಸಂಪೂರ್ಣವಾಗಿ ಟಚ್ ಸ್ಕ್ರೀನ್ ಇಂಟಿರಿಯರ್ ಆಯ್ಕೆ ಮಾಡ್ತಿದ್ದ ಮರ್ಸಿಡಿಸ್-ಬೆನ್ಜ್ ಕೂಡ ತನ್ನ ವಿನ್ಯಾಸ ಬದಲಿಸುವತ್ತ ಕೆಲ್ಸ ಮಾಡ್ತಿದೆ. ಪೋರ್ಷೆ ಮತ್ತು ಹುಂಡೈನಂತಹ ಕಂಪನಿಗಳು ಸಹ ಈ ದಿಕ್ಕಿನಲ್ಲಿ ಸಾಗುತ್ತಿವೆ. ಭವಿಷ್ಯದಲ್ಲಿ ಟಚ್ಸ್ಕ್ರೀನ್ಗಳು ಸಂಪೂರ್ಣವಾಗಿ ಕಣ್ಮರೆಯಾಗುವುದಿಲ್ಲ. ನ್ಯಾವಿಗೇಷನ್, ರಿವರ್ಸ್ ಕ್ಯಾಮೆರಾಗಳು ಮತ್ತು ಇತರ ವಿರಳವಾಗಿ ಬಳಸುವ ವೈಶಿಷ್ಟ್ಯಗಳಿಗೆ ಟಚ್ ಸ್ಕ್ರೀನ್ ಅತ್ಯಗತ್ಯವಾಗಿರುತ್ತವೆ. ಆದ್ರೆ ಎಸಿ, ವಾಲ್ಯೂಮ್ ಮತ್ತು ಲೈಟ್ ಡ್ರೈವರ್ ಕಂಟ್ರೋಲ್ ನಲ್ಲಿರುತ್ತದೆ. ಹಾಗಾಗಿ ಇವುಗಳಿಗೆ ಟಚ್ ಸ್ಕ್ರೀನ್ ಬದಲು ನಾರ್ಮಲ್ ಬಟನ್ ನೀಡುವುದು ಉತ್ತಮ ಆಯ್ಕೆಯಾಗಿದೆ. ಬಟನ್ ನೀಡೋದು ಅಂದ್ರೆ ಹಿಂದಿನ ಕಾಲಕ್ಕೆ ಹಿಂತಿರುಗೋದಲ್ಲ. ಉತ್ತಮ, ಸುರಕ್ಷಿತ ಭವಿಷ್ಯ ನಿರ್ಮಿಸುವುದಾಗಿದೆ.


