ಹುಂಡೈ ಇಂಡಿಯಾ ತನ್ನ ಕ್ರೆಟಾ ಇವಿ ಮೇಲೆ 'ಖಚಿತ ಮರುಖರೀದಿ' ಆಫರ್ ಘೋಷಿಸಿದೆ. ಈ ಯೋಜನೆಯಡಿ, ಗ್ರಾಹಕರು 3 ವರ್ಷಗಳ ಬಳಿಕ ಕಾರನ್ನು ಹಿಂತಿರುಗಿಸಿ, ಹಣವನ್ನು ಮರಳಿ ಪಡೆಯಬಹುದು, ಇದು ಇವಿ ಮರುಮಾರಾಟ ಮೌಲ್ಯದ ಚಿಂತೆಯನ್ನು ದೂರಮಾಡುತ್ತದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ದೇಶದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ ಹುಂಡೈ ಇಂಡಿಯಾ, ತನ್ನ ಜನಪ್ರಿಯ ಎಲೆಕ್ಟ್ರಿಕ್ ಎಸ್‌ಯುವಿ 'ಕ್ರೆಟಾ ಇವಿ' ಮಾರಾಟವನ್ನು ಹೆಚ್ಚಿಸಲು ಮತ್ತು ಎಲೆಕ್ಟ್ರಿಕ್ ವಾಹನ ಖರೀದಿದಾರರ ಪ್ರಮುಖ ಆತಂಕವನ್ನು ದೂರಮಾಡಲು ಅತ್ಯಾಕರ್ಷಕ 'ಖಚಿತ ಮರುಖರೀದಿ' ಯೋಜನೆಯನ್ನು ಪ್ರಕಟಿಸಿದೆ. ಸಾಮಾನ್ಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಮುಂದೆ ಈ ಕಾರನ್ನು ಮಾರಾಟ ಮಾಡಿದರೆ ಸೂಕ್ತ ಮರುಮಾರಾಟ ಮೌಲ್ಯ ಸಿಗುತ್ತದೆಯೇ ಇಲ್ಲವೇ ಎಂಬ ದೊಡ್ಡ ಚಿಂತೆ ಇರುತ್ತದೆ. ಗ್ರಾಹಕರ ಈ ಭಯವನ್ನು ಹೋಗಲಾಡಿಸಲು ಮುಂದಾಗಿರುವ ಹುಂಡೈ, ಹೊಸ ಮಾಸ್ಟರ್ ಪ್ಲಾನ್ ಒಂದನ್ನು ಹೆಣೆದಿದೆ.

ಯಾವುದು ಆ ಕಾರ್‌?

ಈ ನೂತನ ಯೋಜನೆಯಡಿಯಲ್ಲಿ ಕ್ರೆಟಾ ಎಲೆಕ್ಟ್ರಿಕ್ ಕಾರನ್ನು ಖರೀದಿಸುವ ಗ್ರಾಹಕರಿಗೆ ಕಂಪನಿಯು ಮೂರು ವರ್ಷಗಳವರೆಗೆ ಅಥವಾ 45,000 ಕಿಲೋಮೀಟರ್‌ಗಳವರೆಗೆ ಶೇಕಡಾ 60 ರಷ್ಟು ಖಚಿತ ಮರುಖರೀದಿ ಮೌಲ್ಯದ ಗ್ಯಾರಂಟಿ ನೀಡಲಿದೆ. ಅಂದರೆ, ಕಾರನ್ನು ಖರೀದಿಸಿ ಮೂರು ವರ್ಷ ಬಳಸಿದ ನಂತರವೂ ಗ್ರಾಹಕರು ಅದನ್ನು ಕಂಪನಿಗೆ ವಾಪಸ್ ನೀಡಿ ಅದರ ಶೇಕಡಾ 60 ರಷ್ಟು ಮೂಲ ಮೌಲ್ಯವನ್ನು ಮರಳಿ ಪಡೆಯಬಹುದಾಗಿದೆ. ಇದಕ್ಕೂ ಮುನ್ನ ಕಂಪನಿಯು 'ಬ್ಯಾಟರಿ-ಆಸ್-ಎ-ಸರ್ವಿಸ್' ಎಂಬ ವಿಶಿಷ್ಟ ಯೋಜನೆಯನ್ನೂ ಜಾರಿಗೆ ತಂದಿತ್ತು. ಈ ಯೋಜನೆಯಡಿ ಕಾರಿನ ಬ್ಯಾಟರಿಯನ್ನು ಹೊರತುಪಡಿಸಿ, ಕ್ರೆಟಾ ಇವಿ ಆರಂಭಿಕ ಬೆಲೆ 10.99 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ ಹಾಗೂ ಬ್ಯಾಟರಿ ಬಳಕೆಗೆ ಪ್ರತ್ಯೇಕವಾಗಿ ಪ್ರತಿ ಕಿಲೋಮೀಟರ್‌ಗೆ 3.9 ರೂಪಾಯಿಯಂತೆ ಇಎಂಐ ಶುಲ್ಕ ಅನ್ವಯಿಸುತ್ತದೆ. ಈ ಆಫರ್‌ಗಳ ಮೂಲಕ ಕಂಪನಿಯು ಕ್ರೆಟಾ ಇವಿ ಮಾರಾಟದಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆಯಲ್ಲಿದೆ.

ಹೊಸ ಅಪ್ಡೇಟ್!

ಡಿಸೈನ್‌ ವಿಚಾರಕ್ಕೆ ಬರುವುದಾದರೆ, ಕ್ರೆಟಾ ಎಲೆಕ್ಟ್ರಿಕ್ ಕಾರು ತನ್ನ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳನ್ನೇ ಹೋಲುತ್ತದೆಯಾದರೂ, ಇವಿ ಮಾದರಿಗಾಗಿ ಹಲವು ನವೀನ ಬದಲಾವಣೆಗಳನ್ನು ಮಾಡಲಾಗಿದೆ. ಮುಂಭಾಗದಲ್ಲಿ ಪಿಕ್ಸಲೇಟೆಡ್ ಗ್ರಾಫಿಕ್ ಗ್ರಿಲ್, ಅಂತರ್ನಿರ್ಮಿತ ಚಾರ್ಜಿಂಗ್ ಪೋರ್ಟ್, ಆಟೋಮ್ಯಾಟಿಕ್ ಏರ್ ಫ್ಲಾಪ್‌ಗಳು ಹಾಗೂ 17-ಇಂಚಿನ ಏರೋ ಅಲ್ಟ್ರಾ-ಅಲಾಯ್ ಚಕ್ರಗಳನ್ನು ಒದಗಿಸಲಾಗಿದೆ. ಹಿಂಭಾಗದಲ್ಲೂ ಪಿಕ್ಸಲೇಟೆಡ್ ಬಂಪರ್ ಮತ್ತು ಎಲ್‌ಇಡಿ ಲೈಟಿಂಗ್ ನೀಡಲಾಗಿದ್ದು, ಕಾರಿನ ಗ್ರೌಂಡ್ ಕ್ಲಿಯರೆನ್ಸ್ 200 ಮಿಮೀ ಇದೆ.

ಅತ್ಯಾಕರ್ಷಕ ಲುಕ್!

ಅಷ್ಟೇ ಅಲ್ಲದೆ, ಕಾರಿನ ಒಳಾಂಗಣವು ಡ್ಯುಯಲ್-ಟೋನ್ ಬೂದು ಮತ್ತು ನೇವಿ ಬಣ್ಣದ ಅತ್ಯಾಕರ್ಷಕ ಲುಕ್ ಹೊಂದಿದೆ. ಡ್ಯಾಶ್‌ಬೋರ್ಡ್‌ನಲ್ಲಿ ಇನ್ಫೋಟೈನ್‌ಮೆಂಟ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡ್ಯುಯಲ್ 10.25-ಇಂಚಿನ ಕರ್ವ್ಡ್ ಸ್ಕ್ರೀನ್‌ಗಳು, ಶಿಫ್ಟ್-ಬೈ-ವೈರ್ ಗೇರ್ ವ್ಯವಸ್ಥೆ ಮತ್ತು ವಿಶಾಲವಾದ ಕ್ಯಾಬಿನ್ ಜಾಗವಿದೆ. ಕಾರಿನಲ್ಲಿ 433 ಲೀಟರ್ ಬೂಟ್ ಸ್ಪೇಸ್ ಹಾಗೂ ಮುಂಭಾಗದಲ್ಲಿ 22 ಲೀಟರ್ ಫ್ರಂಕ್ ಜಾಗವನ್ನು ಕಲ್ಪಿಸಲಾಗಿದೆ. ಇದರೊಂದಿಗೆ ಪನೋರಮಿಕ್ ಸನ್‌ರೂಫ್, ವಾತಾಯನ ಸೌಲಭ್ಯವುಳ್ಳ ಚಾಲಿತ ಸೀಟುಗಳು, 8-ಸ್ಪೀಕರ್ ಬೋಸ್ ಆಡಿಯೋ ಸಿಸ್ಟಮ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್, ಡಿಜಿಟಲ್ ಕೀ ಮತ್ತು ಸಿಂಗಲ್-ಪೆಡಲ್ ಡ್ರೈವ್ ತಂತ್ರಜ್ಞಾನಗಳು ಗ್ರಾಹಕರಿಗೆ ಪ್ರೀಮಿಯಂ ಚಾಲನಾ ಅನುಭವ ನೀಡಲಿವೆ.

ವಿಭಿನ್ನ ಬ್ಯಾಟರಿ ಪ್ಯಾಕ್ ಲಭ್ಯ!

ಕಾರಿನ ಕಾರ್ಯಕ್ಷಮತೆ ಮತ್ತು ಬ್ಯಾಟರಿಗೆ ಸಂಬಂಧಿಸಿದಂತೆ, ಕ್ರೆಟಾ ಇವಿ ಎರಡು ವಿಭಿನ್ನ ಬ್ಯಾಟರಿ ಪ್ಯಾಕ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರ 42 kWh ಬ್ಯಾಟರಿ ಆವೃತ್ತಿಯು 135 bhp ಶಕ್ತಿ ಉತ್ಪಾದಿಸಿ, ಒಮ್ಮೆ ಚಾರ್ಜ್ ಮಾಡಿದರೆ 420 ಕಿಮೀ ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ. ಇನ್ನು ದೊಡ್ಡದಾದ 51.4 kWh ಬ್ಯಾಟರಿ ಆವೃತ್ತಿಯು 171 bhp ಶಕ್ತಿ ಉತ್ಪಾದಿಸುವುದಲ್ಲದೆ, ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 510 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಈ ಕಾರು ಕೇವಲ 7.9 ಸೆಕೆಂಡುಗಳಲ್ಲಿ 0 ಯಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳಲಿದ್ದು, ಡಿಸಿ ಫಾಸ್ಟ್ ಚಾರ್ಜರ್ ಬಳಸಿ ಕೇವಲ 39 ನಿಮಿಷಗಳಲ್ಲಿ ಶೇಕಡಾ 10 ರಿಂದ 80 ರಷ್ಟು ಚಾರ್ಜ್ ಮಾಡಿಕೊಳ್ಳಬಹುದು.

ಸುರಕ್ಷತೆ ಆದ್ಯತೆ!

ಪ್ರಯಾಣಿಕರ ಸುರಕ್ಷತೆಗೆ ಹುಂಡೈ ಮೊದಲ ಆದ್ಯತೆ ನೀಡಿದ್ದು, ಕಾರಿನಲ್ಲಿ 6 ಏರ್‌ಬ್ಯಾಗ್‌ಗಳು, ನಾಲ್ಕೂ ಚಕ್ರಗಳಿಗೆ ಡಿಸ್ಕ್ ಬ್ರೇಕ್‌ಗಳು, ಇಎಸ್‌ಸಿ, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ನೀಡಲಾಗಿದೆ. ಜೊತೆಗೆ, ಕಾರಿನ ಬಾಡಿಗೆಗೆ ಸುಧಾರಿತ ಹೆಚ್ಚಿನ ಸಾಮರ್ಥ್ಯದ ಉಕ್ಕನ್ನು ಬಳಸಲಾಗಿದ್ದು, ಹುಂಡೈ ಸ್ಮಾರ್ಟ್‌ಸೆನ್ಸ್ ಲೆವೆಲ್-2 ಅಡಾಸ್ (ADAS) ತಂತ್ರಜ್ಞಾನದಡಿ ಲೇನ್ ಕೀಪಿಂಗ್, ಕೊಲಿಜನ್ ಎಚ್ಚರಿಕೆ ಹಾಗೂ ಸ್ಮಾರ್ಟ್ ಕ್ರೂಸ್ ಕಂಟ್ರೋಲ್‌ನಂತಹ ಅತ್ಯಾಧುನಿಕ ಸುರಕ್ಷತಾ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಒಟ್ಟಾರೆಯಾಗಿ, ಈ ನೂತನ 'ಬೈಬ್ಯಾಕ್ ಆಫರ್' ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸುವ ಸಾಧ್ಯತೆಯಿದೆ.