ಚೀನಾದ ಬಿವೈಡಿ ಕಾರು ಕಂಪನಿ ಟಾಟಾ ಮಾಲೀಕತ್ವಜ ರೇಂಜ್ ರೋವರ್ ಡಿಫೆಂಡರ್ ಕಾರಿನ ಡಿಸೈನ್ ಕಾಪಿ ಮಾಡಿ ಕಾರು ಬಿಡುಗಡೆ ಮಾಡಿದೆ. ಇದೀಗ ಕೋರ್ಟ್ ಬಿವೈಡಿ Ti7 ಕಾರನ್ನು ಬ್ಯಾನ್ ಮಾಡಿ ಆದೇಶ ನೀಡಿದೆ.
ಯೂರೋಪ್ (ನ.22) ಟಾಟಾ ಮೋಟಾರ್ಸ್ ಮಾಲೀಕತ್ವದ ಜಾಗತಿಕ ಬ್ರ್ಯಾಂಡ್ ಜಾಗ್ವಾರ್ ಲ್ಯಾಂಡ್ ರೋವರ್ ಪ್ರತಿಷ್ಠಿತ ಐಷಾರಾಮಿ ಹಾಗೂ ದುಬಾರಿ ಕಾರು ಸಂಸ್ಥೆ. ಈ ಪೈಕಿ ರೇಂಜ್ ರೋವರ್ ಡಿಫೆಂಡರ್ ಕಾರು ಹಲವು ಸೆಲೆಬ್ರೆಟಿಗಳು ಸೇರಿದಂತೆ ಪ್ರಮಖರು ಬಳಸುವ ಕಾರು. ಇದೇ ಕಾರಿನ ಡಿಸೈನ್ ಕಾಪಿ ಮಾಡಿದ ಚೀನಾದ ಬಿವೈಡಿ ಕಾರು ಕಂಪನಿ Ti7 ಕಾರು ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯಲ್ಲಿ Ti7 ಕಾರು ಯೂರೋಪ್ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈ ಕುರಿತು ಕಾನೂನು ಹೋರಾಟ ಆರಂಭಿಸಿದ ಟಾಟಾ ಮಾಲೀಕತ್ವಜ ಜೆಎಲ್ಆರ್ ಸಂಸ್ಥೆಗೆ ಮಹತ್ವದ ಗೆಲುವು ಸಿಕ್ಕಿದೆ. ಯೂರೋಪ್ನಲ್ಲಿ ಬಿವೈಡಿಯ Ti7 ಕಾರನ್ನು ಬ್ಯಾನ್ ಮಾಡಿ ಕೋರ್ಟ್ ಆದೇಶ ನೀಡಿದೆ.
ನೆದರ್ಲೆಂಡ್ ನ್ಯಾಯಾಲಯದಿಂದ ಆದೇಶ
ಬಿವೈಡಿ ಸಂಸ್ಥೆ ರೇಂಜ್ ರೋವರ್ ಡಿಫೆಂಡರ್ ಕಾರಿನ ಡಿಸೈನ್ ನಕಲು ಮಾಡಿ ಕಾರು ಬಿಡುಗಡೆ ಮಾಡಿದೆ ಎಂದು ಟಾಟಾ ಮಾಲೀಕತ್ವದ ಜೆಎಲ್ಆರ್ ದೂರು ನೀಡಿತ್ತು. ಈ ಪ್ರಕರಣ ಸಂಬಂಧ ನೆದರ್ಲೆಂಡ್ನ ಜಿಲ್ಲಾ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ಬಿವೈಡಿ Ti7 ಕಾರನ್ನು ಯೂರೋಪ್ನಲ್ಲಿ ಉತ್ಪಾದನೆ, ಮಾರಾಟ ಬ್ಯಾನ್ ಮಾಡಲು ಆದೇಶಿಸಿದೆ.
ಬಾಕ್ಸಿ ಶೈಲಿಯ ಕಾರಿನ ಬಾಡಿ, ಕಾರಿನ ರೇರ್ ಪಿಲ್ಲರ್ ಹಾಗೂ ಪ್ಯಾನಲ್, ವೀಲ್ ಆರ್ಚ್, ಸೈಡ್ ವಿಂಡೋ ವಿನ್ಯಾಸ, ಕಾರಿನ ಒಟ್ಟು ಡಿಸೈನ್ ಸೇರಿದಂತೆ ಬಹುತೇಕ ಕಾಪಿ ಮಾಡಿ ಅದೇ ಮಾದರಿಯಲ್ಲಿ ಕಾರು ಬಿಡುಗಡೆ ಮಾಡಿದೆ. ಈ ಕುರಿತು ಟಾಟಾ ಮಾಡಿದ ಕಾನೂನು ಹೋರಾಟಕ್ಕೆ ಆರಂಭಿಕ ಗೆಲುವು ಸಿಕ್ಕಿದೆ. ಬಿವೈಡಿಯ Ti7 ಕಾರಿಗೆ ಕೋರ್ಟ್ ನಿಷೇಧ ಹೇರಿದೆ.
ಬಿವೈಡಿಯ 10 ಅಂಗ ಸಂಸ್ಥೆಗಳಿಗೆ ನ್ಯಾಯಾಲಯದ ಆದೇಶ ಅನ್ವಯವಾಗಲಿದೆ. ಆದೇಶದ ಪ್ರಕಾರ, ಯುರೋಪಿಯನ್ ಒಕ್ಕೂಟದ ದೇಶಗಳಲ್ಲಿ BYD Ti7 ಎಸ್ಯುವಿಯ ಆಮದು, ಮಾರಾಟ, ವಿತರಣೆ ಹಾಗೂ ಉತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಹೀಗಾಗಿ ಹಂಗೇರಿಯಲ್ಲಿರುವ ಬಿವೈಡಿಯ ಹೊಸ ಘಟಕದಲ್ಲೂ ಈ ಕಾರನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಬಿವೈಡಿ ಸಂಸ್ಥೆ ಕೋರ್ಟ್ ಆದೇಶವನ್ನು ಉಲ್ಲಂಘಿಸಿದರೆ ಪ್ರತಿ ದಿನಕ್ಕೆ 1,00,000 ಯುರೋ (ಅಂದಾಜು ₹1 ಕೋಟಿ) ಅಥವಾ ಪ್ರತಿ ವಾಹನಕ್ಕೆ 25,000 ಯುರೋ ದಂಡ (ಗರಿಷ್ಠ 10 ಮಿಲಿಯನ್ ಯುರೋವರೆಗೆ) ತೆರಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಸಿದೆ.
ಈ ಆದೇಶವು ಯುರೋಪಿಯನ್ ಒಕ್ಕೂಟಕ್ಕೆ ಮಾತ್ರ ಸೀಮಿತವಾಗಿದ್ದು, ಬಿವೈಡಿಯ ಯುಕೆ (UK) ಅಂಗಸಂಸ್ಥೆಯ ಮೇಲೆ ತನಗೆ ಅಧಿಕಾರ ವ್ಯಾಪ್ತಿ ಇಲ್ಲ ಎಂದು ಡಚ್ ಕೋರ್ಟ್ ಸ್ಪಷ್ಟಪಡಿಸಿದೆ. ಈ ಆದೇಶ ಕುರಿತು ಬಿವೈಡಿ ಮೇಲ್ಮನವಿ ಸಲ್ಲಿಸಲು ಸಜ್ಜಾಗಿದೆ.
















