ಬೆಂಗಳೂರಿನ ಯುವತಿಯೊಬ್ಬರು ತಾನು ಆರ್ಡರ್ ಮಾಡದ 'ಕ್ಯಾಶ್-ಆನ್-ಡೆಲಿವರಿ' ಪಾರ್ಸೆಲ್‌ವೊಂದನ್ನು ಸ್ವೀಕರಿಸಲು ನಿರಾಕರಿಸಿ, ವಂಚನೆಯ ಜಾಲವನ್ನು ಬಯಲಿಗೆಳೆದಿದ್ದಾರೆ. ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ಆನ್‌ಲೈನ್ ಶಾಪಿಂಗ್ ವಂಚನೆಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ.

ಆನ್‌ಲೈನ್ ಶಾಪಿಂಗ್ ಇಂದಿನ ದಿನಗಳಲ್ಲಿ ಜನರ ಜೀವನದ ಭಾಗವಾಗಿಬಿಟ್ಟಿದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ಈಗ ಸಾರ್ವಜನಿಕರ ಮನೆ ಬಾಗಿಲಿಗೇ ಬಂದು ಹಣ ದೋಚುವ ಹೊಸ ತಂತ್ರ ರೂಪಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಇಂತಹದ್ದೇ ಒಂದು 'ಕ್ಯಾಶ್-ಆನ್-ಡೆಲಿವರಿ' ಹಗರಣವು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಡಿಜಿಟಲ್ ಲೋಕದಲ್ಲಿ ಸಾರ್ವಜನಿಕರು ಎಷ್ಟು ಜಾಗರೂಕರಾಗಿರಬೇಕು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಡೆಲಿವರಿ ಬಾಯ್‌ಗೆ ಕಟು ಪ್ರಶ್ನೆ!

ಬೆಂಗಳೂರಿನ ಯುವತಿಯೊಬ್ಬರ ಮನೆ ಬಾಗಿಲಿಗೆ ಡೆಲಿವರಿ ಬಾಯ್ ಒಬ್ಬ ಪಾರ್ಸೆಲ್ ಹಿಡಿದು ಬಂದಿದ್ದ. "ನಿಮ್ಮ ಹೆಸರಿಗೆ 500 ರೂಪಾಯಿ ಕ್ಯಾಶ್-ಆನ್-ಡೆಲಿವರಿ ಪಾರ್ಸೆಲ್ ಬಂದಿದೆ, ಹಣ ನೀಡಿ ಸ್ವೀಕರಿಸಿ" ಎಂದು ಆತ ಕೇಳಿದ. ಆದರೆ, ತಾನು ಯಾವುದೇ ವಸ್ತುವನ್ನು ಆರ್ಡರ್ ಮಾಡೇ ಇಲ್ಲ ಎಂಬುದನ್ನು ತಕ್ಷಣವೇ ಅರಿತುಕೊಂಡ ಆ ಯುವತಿ, ಪಾರ್ಸೆಲ್ ಸ್ವೀಕರಿಸಲು ಮತ್ತು ಹಣ ನೀಡಲು ನಿರಾಕರಿಸಿದಳು. ಅಲ್ಲಿಗೆ ಸುಮ್ಮನಾಗದ ಯುವತಿ, "ನಾನು ಈ ರೀತಿ ಯಾವುದೇ ವಸ್ತುವನ್ನು ಆರ್ಡರ್ ಮಾಡಿಲ್ಲ. ಖರೀದಿಸದೇ ಇರುವ ವಸ್ತುವಿಗೆ ನಾನು ಏಕೆ 500 ರೂಪಾಯಿ ನೀಡಬೇಕು? ನಿಮ್ಮನ್ನು ಕಳುಹಿಸಿದವರು ಯಾರು? ನಿಮ್ಮ ಮೇಲಧಿಕಾರಿಗೆ ಕರೆ ಮಾಡಿ" ಎಂದು ಡೆಲಿವರಿ ಬಾಯ್ ಅನ್ನು ಕಟುವಾಗಿ ಪ್ರಶ್ನಿಸಿದಳು.

ಎಚ್ಚರಿಕೆ ನೀಡಿದ ಯುವತಿ!

ಯುವತಿ ತೀವ್ರ ತರಾಟೆಗೆ ತೆಗೆದುಕೊಂಡಾಗ, ಡೆಲಿವರಿ ಬಾಯ್ ತನ್ನ ಮೇಲಧಿಕಾರಿಗೆ ಕರೆ ಮಾಡಿ ಫೋನ್ ಅನ್ನು ಯುವತಿಗೆ ನೀಡಿದ. ಫೋನ್‌ನಲ್ಲಿ ಮಾತನಾಡಿದ ವ್ಯಕ್ತಿ, "ನೀವು ಇನ್‌ಸ್ಟಾಗ್ರಾಮ್ ಮೂಲಕ ಈ ವಸ್ತುವನ್ನು ಆರ್ಡರ್ ಮಾಡಿದ್ದೀರಿ" ಎಂದು ವಾದಿಸಲು ತೊಡಗಿದ. ಆದರೆ ಯುವತಿ ಆತನ ಮಾತನ್ನು ಸಂಪೂರ್ಣವಾಗಿ ತಳ್ಳಿಹಾಕಿ, "ನೀವು ಗ್ರಾಹಕರನ್ನು ನಕಲಿ ಡೆಲಿವರಿಗಳ ಮೂಲಕ ಮೋಸಗೊಳಿಸಲು ಯತ್ನಿಸುತ್ತಿದ್ದೀರಿ. ನಾನು ಪರಿಶೀಲಿಸದೆ ಕೇವಲ 500 ರೂಪಾಯಿ ಪಾವತಿಸಿದ್ದರೆ ನನ್ನ ಹಣ ಪೋಲಾಗುತ್ತಿತ್ತು. ನಾನು ಈ ಇಡೀ ಘಟನೆಯನ್ನು ವೀಡಿಯೊ ರೆಕಾರ್ಡ್ ಮಾಡುತ್ತಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತೇನೆ. ಜನರೊಂದಿಗೆ ಹೀಗೆ ವಂಚಿಸುವುದನ್ನು ನಿಲ್ಲಿಸಿ" ಎಂದು ಆತನಿಗೆ ಎಚ್ಚರಿಕೆ ನೀಡಿ ಫೋನ್ ಸಂಪರ್ಕ ಕಡಿತಗೊಳಿಸಿದಳು.

ಪಾರ್ಸೆಲ್‌ ತೆರೆದರೆ ಕಾದಿತ್ತು ಶಾಕ್!

ಅನುಮಾನಗೊಂಡ ಯುವತಿ ನಂತರ ಆ ಪಾರ್ಸೆಲ್ ಅನ್ನು ತೆರೆದು ನೋಡಿದಾಗ ಆಕೆಗೆ ಭಾರಿ ಶಾಕ್ ಕಾದಿತ್ತು. ಆ ಹಾನಿಗೊಳಗಾದ ಪೆಟ್ಟಿಗೆಯೊಳಗೆ ಇದ್ದದ್ದು ಕೇವಲ ಒಂದು ಅರ್ಧ ಬಾರ್ 'ರಿನ್' ಬಟ್ಟೆ ತೊಳೆಯುವ ಸಾಬೂನು. ಕೇವಲ ಹತ್ತು-ಇಪ್ಪತ್ತು ರೂಪಾಯಿ ಬೆಲೆಯ ಸಾಬೂನಿನ ಚೂರನ್ನು ಇಟ್ಟು, ಜನರಿಂದ 500 ರೂಪಾಯಿ ದೋಚುವ ಭಾರಿ ಸಂಚು ಇದಾಗಿತ್ತು ಎಂಬುದು ಇದರಿಂದ ಸಂಪೂರ್ಣವಾಗಿ ಸಾಬೀತಾಯಿತು. ಮನೆಗೆ ಯಾರಾದರೂ ವೃದ್ಧರು ಅಥವಾ ಸತ್ಯ ತಿಳಿಯದವರು ಇದ್ದರೆ, ಮಕ್ಕಳು ಆರ್ಡರ್ ಮಾಡಿರಬಹುದು ಎಂದು ಭಾವಿಸಿ ಹಣ ಕೊಟ್ಟು ಪಾರ್ಸೆಲ್ ಪಡೆದುಕೊಳ್ಳುತ್ತಾರೆ ಎಂಬ ಬಲವಾದ ನಂಬಿಕೆಯಿಂದ ಈ ಹಗರಣವನ್ನು ರೂಪಿಸಲಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ವೈರಲ್!

ಯುವತಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆ ಭಾರಿ ವೈರಲ್ ಆಗಿದೆ. ವೀಡಿಯೊ ಗಮನಿಸಿದ ಬೆಂಗಳೂರು ನಗರ ಪೊಲೀಸರು ತಮ್ಮ ಅಧಿಕೃತ 'X' ಖಾತೆಯಿಂದ ಪ್ರತಿಕ್ರಿಯಿಸಿದ್ದು, ಘಟನೆ ನಡೆದ ಸ್ಥಳವನ್ನು ನಮೂದಿಸುವಂತೆ ಕೋರಿದ್ದಾರೆ. ಇನ್ನು ಈ ವಿಡಿಯೋಗೆ ನೆಟ್ಟಿಗರಿಂದಲೂ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಅನೇಕರು ತಮಗೂ ಇಂತಹ ಅನುಭವಗಳಾಗಿವೆ ಎಂದು ಹೇಳಿಕೊಂಡಿದ್ದಾರೆ. ಆನ್‌ಲೈನ್ ಪಾರ್ಸೆಲ್ ಬಂದ ನಂತರ ಅದರ ಮೇಲಿರುವ ಹೆಸರು ಮತ್ತು ವಿಳಾಸದ ಲೇಬಲ್‌ಗಳನ್ನು ಹರಿದು ಹಾಕುವುದು, ಮನೆಗೆ ಅನಿರೀಕ್ಷಿತವಾಗಿ ಯಾವುದೇ ಕ್ಯಾಶ್ ಆನ್ ಡೆಲಿವರಿ ಬಂದಾಗ ಕುಟುಂಬದವರನ್ನು ವಿಚಾರಿಸದೇ ಹಣ ಪಾವತಿಸದಿರುವುದು ಹಾಗೂ ಆಪ್‌ಗಳಲ್ಲಿ ಆರ್ಡರ್ ಹಿಸ್ಟರಿ ಪರಿಶೀಲಿಸುವುದು ಇಂತಹ ವಂಚನೆಗಳಿಂದ ಪಾರಾಗಲು ಉತ್ತಮ ಮಾರ್ಗ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.