ಬೆಂಗಳೂರು(ಮೇ. 19): ಜರ್ಮನಿಯ ಐಷಾರಾಮಿ ಕಾರು ಉತ್ಪಾದಕ ಕಂಪನಿ ಆಡಿ ಇದೀಗ ಭಾರತದಲ್ಲಿ ತನ್ನ ಸ್ಟಾಂಡರ್ಡ್ ವಾರೆಂಟಿ, ಎಕ್ಸ್‌ಟೆಂಡೆಡ್ ವಾರೆಂಟಿ ಮತ್ತು ಸರ್ವೀಸ್ ಪ್ಲಾನ್‍ಗಳ ವಿಸ್ತರಣೆಯನ್ನು ಪ್ರಕಟಿಸಿದೆ. ಲಾಕ್‍ಡೌನ್ ಅವಧಿಯಲ್ಲಿ ಏಪ್ರಿಲ್, ಮೇ ಮತ್ತು ಜೂನ್ 2021ರ ಅವಧಿಯಲ್ಲಿ ಸ್ಟಾಂಡರ್ಡ್ ವಾರೆಂಟಿ, ಎಕ್ಸ್‌ಟೆಂಡೆಡ್ ವಾರೆಂಟಿ ಮತ್ತು ಸರ್ವೀಸ್ ಪ್ಲಾನ್‍ಗಳ ಅವಧಿ ಮೀರುವ ಎಲ್ಲ  ಗ್ರಾಹಕರಿಗೆ ಜೂನ್ 30, 2021ರವರೆಗೆ ಅವರ ಪಾಲಿಸಿಯ ವಿಸ್ತರಣೆ ಅನ್ವಯಿಸುತ್ತದೆ. 

ಭಾರತದಲ್ಲಿ ಹೊಸ ತಂತ್ರಜ್ಞಾನದ ಆಡಿ A4 ಫೇಸ್‌ಲಿಫ್ಟ್ ಕಾರು ಬಿಡುಗಡೆ!.

ಆಡಿ ಇಂಡಿಯಾಗೆ ಸುರಕ್ಷತೆ ಅತ್ಯಂತ ಆದ್ಯತೆಯಾಗಿದೆ. ಮನೆಯಲ್ಲಿಯೇ ಇರುವ ಹಾಗೂ ಸುರಕ್ಷಿತವಾಗಿರುವ ಪ್ರಸ್ತುತದ ಅಗತ್ಯದ ಹಿನ್ನೆಲೆಯಲ್ಲಿ ನಾವು ಜೂನ್ 30, 2021ರವರೆಗೆ ಸ್ಟಾಂಡರ್ಡ್ ವಾರೆಂಟಿ, ವಿಸ್ತರಿಸಿದ ವಾರೆಂಟಿ ಮತ್ತು ಸರ್ವೀಸ್ ಪ್ಲಾನ್‍ಗಳನ್ನು ವಿಸ್ತರಿಸಿದ್ದೇವೆ. ಆಡಿ ಗ್ರಾಹಕರು ತಮ್ಮ ಕಾರುಗಳಿಗೆ ತಮ್ಮ ಪ್ಲಾನ್‍ಗಳ ವಿಸ್ತರಣೆಯ ಮೂಲಕ ಸರಿಸಾಟಿ ಇರದ ಸೇವೆಗಳನ್ನು ಪಡೆಯಬಹುದು ಎಂದು ಆಡಿ ಇಂಡಿಯಾದ ಮುಖ್ಯಸ್ಥ  ಬಲ್‌ಬೀರ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.

ಲಾಕ್‍ಡೌನ್‍ನಿಂದ ಸವಾಲುಗಳನ್ನು ಎದುರಿಸುತ್ತಿರುವ ಗ್ರಾಹಕರಿಗೆ ಆಡಿ ನೀಡಿದ ಪ್ಲಾನ್ ನೆರವಾಗಲಿದೆ. ದೇಶದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಸೇರಿದಂತೆ ಕಠಿಣ ನಿಯಮಗಳು ಜಾರಿಯಲ್ಲಿದೆ. ಹೀಗಾಗಿ ಜೊತೆಗೆ ಉದ್ಯೋಗ ಕಡಿತ, ವೇತನ ಕಡಿತ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದೆ. ಇದರ ನಡುವೆ ಆಡಿ ಗ್ರಾಹಕರಿಗೆ ನೆರವಾಗುತ್ತಿದೆ.