ಟಾಟಾ ಮಾಲೀಕತ್ವದ ರೇಂಜ್ ರೋವರ್ ಸ್ಪೋರ್ಟ್ ಎಲೆಕ್ಟ್ರಿಕ್ ಕಾರು ಅನಾವರಣಗೊಂಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 609 ಕಿಲೋಮೀಟರ್ ಮೈಲೇಜ್ ನೀಡಲಿದೆ. ಹೊಸ ಕಾರಿನ ಬುಕಿಂಗ್ ಆರಂಭಗೊಂಡಿದೆ.
ನವದೆಹಲಿ (ಸೆ.30) ಟಾಟಾ ಮಾಲೀಕತ್ವದ ರೇಂಜ್ ರೋವರ್ ಅತ್ಯಂತ ಜನಪ್ರಿಯ ಕಾರು. ದೇಶ ವಿದೇಶಗಳಲ್ಲಿ ರೇಂಜ್ ರೋವರ್ ಕಾರಿಗೆ ಭಾರಿ ಬೇಡಿಕೆ ಇದೆ. ಇದೀಗ ರೋಂಜ್ ರೋವರ್ ಸ್ಪೋರ್ಟ್ ಕಾರು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 609 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇದರಿಂದ ಸುದೀರ್ಘ ಪ್ರಯಾಣ, ಸಿಟಿ ಲೈಫ್ ಯಾವುದೇ ಪ್ರಯಾಣಕ್ಕೂ ರೇಂಜ್ ರೋವರ್ ಸ್ಪೋರ್ಟ್ ಇವಿ ಉತ್ತಮ ಆಯ್ಕೆಯಾಗಿದೆ.
ಜಾಗತಿಕ ಮಟ್ಟದಲ್ಲಿ ರೇಂಜ್ ರೋವರ್ ಸ್ಪೋರ್ಟ್ ಇವಿ ಕಾರು ಅನಾವರಣಗೊಂಡಿದೆ. ಶೀಘ್ರದಲ್ಲೇ ಈ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ. ಹೊಸ ಇವಿ ಕಾರಿನಲ್ಲಿ ಹಲವು ವಿಶೇಷತೆಗಳಿವೆ. ರೇಂಜ್ ರೋವರ್ ಸ್ಪೋರ್ಟ್ ಕಾರಿನಲ್ಲಿ 118.5kWh ಬ್ಯಾಟರಿ ಪ್ಯಾಕ್ ಬಳಸಲಾಗಿದೆ. ಡ್ಯುಯೆಲ್ ಮೋಟಾರ್, ಆಲ್ ವ್ಹೀಲ್ ಡ್ರೈವ್ ಹೊಂದಿದೆ. ಹೀಗಾಗಿ ಬರೋಬ್ಬರಿ 550hp ಪವರ್ ಹಾಗೂ 850Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. 0 ರಿಂದ 100 ಕಿ.ಮಿ ವೇಗವನ್ನು ಕೇವಲ 4.5 ಸೆಕೆಂಡ್‌ನಲ್ಲಿ ತಲುಪಲಿದೆ.
22 ನಿಮಿಷದಲ್ಲಿ ಚಾರ್ಜ್
ರೇಂಜ್ ರೋವರ್ ಸ್ಪೋರ್ಟ್ ಕಾರು 350kW DC ಚಾರ್ಜ್ ಸಪೋರ್ಟ್ ಮಾಡಲಿದೆ. ಮತ್ತೊಂದು ವಿಶೇಷ ಅಂದರೆ ರೇಂಜ್ ರೋವರ್ ಸ್ಪೋರ್ಟ್ ಇವಿ ಕಾರು ಚಾರ್ಜ್ ಮಾಡಲು ಹೆಚ್ಚಿನ ಸಮಯಬೇಕಿಲ್ಲ, ಕಾಯಬೇಕಿಲ್ಲ. 350kW DC ಚಾರ್ಜ್ ಮೂಲಕ ಕಾರು ಶೇಕಡಾ 10 ರಿಂದ 80 ರಷ್ಟು ಚಾರ್ಜ್ ಆಗಲು ಕೇವಲ 22 ನಿಮಿಷ ತೆಗೆದುಕೊಳ್ಳಲಿದೆ. ಫಾಸ್ಟ್ ಚಾರ್ಜಿಂಗ್ ಮೂಲಕ 10 ನಿಮಿಷ ಚಾರ್ಜ್ ಮಾಡಿದರೆ 220 ಕಿಲೋಮೀಟರ್ ಮೈಲೇಜ್ ನೀಡಲಿದೆ. ಹೀಗಾಗಿ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸಿಕೊಳ್ಳುವಷ್ಟು ಸಮಯದಲ್ಲಿ ಈ ಕಾರು ಚಾರ್ಜ್ ಮಾಡಿ 220 ಕಿಲೋಮೀಟರ್ ಪ್ರಯಾಣ ಮಾಡಬಹುದು.
ಕಾರಿನ ಬೆಲೆ
LED ಹೆಡ್‌ಲೈಟ್ಸ್, ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್ಸ್, 13.1 ಇಂಟಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ, 13.7 ಇಂಚಿನ ಡ್ರೈವರ್ ಡಿಸ್‌ಪ್ಲೇ, ವೈಯರ್‌ಲೆಸ್ ಫೋನ್ ಚಾರ್ಜಿಂಗ್, ಹೀಟೆಡ್ ಹಾಗೂ ವೆಂಟಿಲೇಟೆಡ್ ಸೀಟ್, ನಾಲ್ಕು ಹಂತದ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ. ಸದ್ಯ ಕಾರಿನ ಬೆಲ ಬಹಿರಂಗವಾಗಿಲ್ಲ. ಶೀಘ್ರದಲ್ಲೇ ಕಾರಿನ ಬೆಲೆ ಸೇರಿದಂತೆ ಸಂಪೂರ್ಣ ಮಾಹಿತಿ ಹೊರಬೀಳಲಿದೆ.


