ಮಹೀಂದ್ರ ಎಕ್ಸ್‌ಯುವಿ 400 ಎಲೆಕ್ಟ್ರಿಕ್ ಕಾರು 456 ಕಿ.ಮೀ ರೇಂಜ್ ಮತ್ತು ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದ್ದರೂ, ಇದರ ಮಾರಾಟದಲ್ಲಿ ಶೇ.84ರಷ್ಟು ಭಾರಿ ಕುಸಿತ ಕಂಡಿದೆ. ಇವಿ ಮಾರುಕಟ್ಟೆಯಲ್ಲಿ ಮಹೀಂದ್ರ ಕಂಪನಿ ಉತ್ತಮ ಸಾಧನೆ ಮಾಡುತ್ತಿದ್ದರೂ, ಈ ನಿರ್ದಿಷ್ಟ ಎಸ್‌ಯುವಿ ಕಾರನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.

ಮಹೀಂದ್ರ ಎಕ್ಸ್‌ಯುವಿ 400 (Mahindra XUV400) ಎಲೆಕ್ಟ್ರಿಕ್ ಎಸ್‌ಯುವಿ ಕಾರು ಸಿಂಗಲ್ ಚಾರ್ಜ್ ಮಾಡಿದರೆ ಬರೋಬ್ಬರಿ 456 ಕಿಲೋಮೀಟರ್‌ವರೆಗೆ ಓಡುತ್ತದೆ. ಈ ಕಾರಿನಲ್ಲಿ ಐಷಾರಾಮಿ ಇಂಟೀರಿಯರ್ ಜೊತೆಗೆ ಹಲವು ಮಾಡರ್ನ್ ಫೀಚರ್‌ಗಳಿವೆ. ಆದರೆ, ಮಾರುಕಟ್ಟೆಯಲ್ಲಿ ಇದರ ಸೇಲ್ಸ್ ಮಾತ್ರ ಪಾತಾಳಕ್ಕೆ ಕುಸಿದಿದೆ. ಗ್ರಾಹಕರು 2026ರ ಆಗಸ್ಟ್ ತಿಂಗಳಲ್ಲಿ ಕೇವಲ 10 ಮಹೀಂದ್ರ ಎಕ್ಸ್‌ಯುವಿ 400 ಕಾರುಗಳನ್ನು ಮಾತ್ರ ಖರೀದಿಸಿದ್ದಾರೆ. ಒಂದು ವರ್ಷದ ಹಿಂದೆ, ಅಂದರೆ 2025ರ ಆಗಸ್ಟ್‌ನಲ್ಲಿ ಕಂಪನಿ 66 ಕಾರುಗಳನ್ನು ಮಾರಾಟ ಮಾಡಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಕಂಪನಿ 56 ಕಾರುಗಳನ್ನು ಕಡಿಮೆ ಮಾರಾಟ ಮಾಡಿದೆ. ವಾರ್ಷಿಕ ಲೆಕ್ಕಾಚಾರದಲ್ಲಿ ನೋಡಿದರೆ ಕಾರಿನ ಮಾರಾಟದಲ್ಲಿ ಶೇ.84ಕ್ಕಿಂತ ಹೆಚ್ಚು ಕುಸಿತ ದಾಖಲಾಗಿದೆ. ಕಂಪನಿಯ ಒಟ್ಟು ಮಾರುಕಟ್ಟೆ ಪಾಲಿನಲ್ಲಿ ಎಕ್ಸ್‌ಯುವಿ 400 ಕಾರಿನ ಕೊಡುಗೆ ಕೇವಲ ಶೇ.0.02ರಷ್ಟು ಮಾತ್ರ ಇದೆ.

ಇವಿ ಮಾರುಕಟ್ಟೆಯಲ್ಲಿ ಮಹೀಂದ್ರ ಹವಾ

ಎಲೆಕ್ಟ್ರಿಕ್ ಫೋರ್ ವೀಲರ್ ವಿಭಾಗದಲ್ಲಿ ಮಹೀಂದ್ರ ಕಂಪನಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ವಿಶೇಷವಾಗಿ ಬಿಇ 6 (BE 6) ಮತ್ತು ಎಕ್ಸ್‌ಇವಿ 9ಎಸ್ (XEV 9S) ಮಾಡೆಲ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮೇಲೆ ಕಂಪನಿಯ ಇವಿ ಲೈನ್‌ಅಪ್‌ಗೆ ಆನೆಬಲ ಬಂದಿದೆ. ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ಎಂಜಿ ಮೋಟಾರ್ಸ್ (MG Motors) ಕಂಪನಿಯನ್ನು ಹಿಂದಿಕ್ಕಿರುವ ಮಹೀಂದ್ರ, ಟಾಟಾ ಮೋಟಾರ್ಸ್ (Tata Motors) ನಂತರದ ಎರಡನೇ ಅತಿದೊಡ್ಡ ಕಂಪನಿಯಾಗಿ ಬೆಳೆದು ನಿಂತಿದೆ. ಆದರೆ, ಇದೇ ಕಂಪನಿಯ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಎಸ್‌ಯುವಿ ಎಕ್ಸ್‌ಯುವಿ 400 ಸೇಲ್ಸ್ ಮಾತ್ರ ಸತತವಾಗಿ ನೆಲಕಚ್ಚುತ್ತಿದೆ.

10.25 ಇಂಚಿನ ಡಿಸ್‌ಪ್ಲೇ, 6 ಏರ್‌ಬ್ಯಾಗ್‌ಗಳು

ಗ್ರಾಹಕರಿಗೆ ಎಕ್ಸ್‌ಯುವಿ 400 ಕಾರು ಇಸಿ ಪ್ರೊ (EC Pro) ಮತ್ತು ಇಎಲ್ ಪ್ರೊ (EL Pro) ಎಂಬ ಎರಡು ವೇರಿಯೆಂಟ್‌ಗಳಲ್ಲಿ ಸಿಗುತ್ತದೆ. ಹೊಸ ಡ್ಯಾಶ್‌ಬೋರ್ಡ್, ಡ್ಯುಯಲ್-ಟೋನ್ ಇಂಟೀರಿಯರ್ ಹಾಗೂ ಅಪ್‌ಡೇಟ್ ಆದ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ಈ ಕಾರು ಹೊಂದಿದೆ. 10.25 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 10.25 ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಇದರ ಪ್ರಮುಖ ಹೈಲೈಟ್ಸ್. ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ರಿವರ್ಸ್ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಅನ್ನು ಕಂಪನಿ ಒದಗಿಸಿದೆ.

456 ಕಿ.ಮೀ ವರೆಗೆ ಭರ್ಜರಿ ರೇಂಜ್

ಈ ಕಾರಿನ 34.5 kWh ಬ್ಯಾಟರಿ ಪ್ಯಾಕ್ ಮಾಡೆಲ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ 375 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. ಹಾಗೆಯೇ 39.4 kWh ಬ್ಯಾಟರಿ ಪ್ಯಾಕ್ ಇರುವ ಮಾಡೆಲ್ 456 ಕಿಲೋಮೀಟರ್‌ವರೆಗೆ ರೇಂಜ್ ನೀಡಲಿದೆ ಎಂದು ಕಂಪನಿ ಭರವಸೆ ನೀಡಿದೆ. ಡ್ಯುಯಲ್ ಝೋನ್ ಎಸಿ, ಹಿಂದಿನ ಸೀಟಿನ ಪ್ರಯಾಣಿಕರಿಗೆ ಟೈಪ್-ಸಿ ಯುಎಸ್‌ಬಿ ಚಾರ್ಜರ್, ರಿಯರ್ ಎಸಿ ವೆಂಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ಸನ್‌ರೂಫ್, ಪುಶ್-ಬಟನ್ ಸ್ಟಾರ್ಟ್-ಸ್ಟಾಪ್, ಎತ್ತರ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಹಾಗೂ ಪನೋರಮಿಕ್ ಸನ್‌ರೂಫ್‌ನಂತಹ ಭರ್ಜರಿ ಫೀಚರ್‌ಗಳು ಈ ಕಾರಿನಲ್ಲಿವೆ. ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಇವಿ (Tata Nexon EV) ಕಾರು ಎಕ್ಸ್‌ಯುವಿ 400 ಕಾರಿಗೆ ನೇರ ಪೈಪೋಟಿ ನೀಡುತ್ತಿದೆ.