ಜೊಮ್ಯಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಗುರುಗ್ರಾಮದಲ್ಲಿ 52.3 ಕೋಟಿ ರೂ.ಗಳಿಗೆ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಈ ಅಪಾರ್ಟ್‌ಮೆಂಟ್ ಡಿಎಲ್‌ಎಫ್ ದಿ ಕ್ಯಾಮೆಲಿಯಾಸ್‌ನಲ್ಲಿದ್ದು, ಐದು ಪಾರ್ಕಿಂಗ್ ಸ್ಥಳಗಳನ್ನು ಹೊಂದಿದೆ.

ನವದೆಹಲಿ (ಜು.10): ಜೊಮೋಟೋ ಸಂಸ್ಥಾಪಕ ದೀಪಿಂದರ್ ಗೋಯಲ್ ಗುರುಗ್ರಾಮ್‌ನಲ್ಲಿರುವ ಡಿಎಲ್‌ಎಫ್‌ನ ದಿ ಕ್ಯಾಮೆಲಿಯಾಸ್‌ನಲ್ಲಿ 52.3 ಕೋಟಿ ರೂ.ಗಳಿಗೆ "ಸೂಪರ್-ಐಷಾರಾಮಿ" ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ರಿಯಲ್ ಎಸ್ಟೇಟ್ ವಿಶ್ಲೇಷಣಾ ಸಂಸ್ಥೆಯಾದ ಜ್ಯಾಪ್ಕಿ ನೀಡಿರುವ ದಾಖಲೆಗಳ ಪ್ರಕಾರ, ಗೋಯಲ್ ಅವರು ಮಾರ್ಚ್‌ನಲ್ಲಿ 3.66 ಕೋಟಿ ರೂ.ಗಳ ಸ್ಟಾಂಪ್ ಡ್ಯೂಟಿಯನ್ನು ಪಾವತಿಸುವ ಮೂಲಕ ಆಸ್ತಿಯ ಕನ್ವೀನಿಯನ್ಸ್‌ ಡೀಡ್‌ ಕಾರ್ಯಗತಗೊಳಿಸಿದ್ದಾರೆ.

ಈ ಅಪಾರ್ಟ್‌ಮೆಂಟ್ 10,813 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದು, ಐದು ಪಾರ್ಕಿಂಗ್ ಸ್ಥಳಗಳನ್ನು ಹೊಂದಿದೆ. 2022 ರಲ್ಲಿ ಬಿಲ್ಡರ್ ಡಿಎಲ್ಎಫ್ ಲಿಮಿಟೆಡ್‌ನಿಂದ ನೇರವಾಗಿ ಖರೀದಿಯನ್ನು ಮಾಡಲಾಗಿತ್ತು, ಆದರೆ ಕನ್ವೀನಿಯನ್ಸ್‌ ಡೀಡ್‌ 2025 ಮಾರ್ಚ್ 17ರಂದು ಪೂರ್ಣಗೊಳಿಸಲಾಯಿತು ಎಂದು ದಾಖಲೆಗಳು ತೋರಿಸಿವೆ.

ಗುರುಗ್ರಾಮದ ಡಿಎಲ್‌ಎಫ್ ಹಂತ-5 ರಲ್ಲಿ ಡಿಎಲ್‌ಎಫ್ ದಿ ಕ್ಯಾಮೆಲಿಯಾಸ್ ಒಂದು "ಸೂಪರ್-ಐಷಾರಾಮಿ" ವಸತಿ ಯೋಜನೆಯಾಗಿದ್ದು, ಇದು 5-ಸ್ಟಾರ್ ಹೋಟೆಲ್‌ನಂತಹ ಸೌಲಭ್ಯಗಳಿಗೂ ಹೆಸರುವಾಸಿಯಾಗಿದೆ. ಇದು ಹೆಚ್ಚಾಗಿ ತನ್ನ ಹೆಚ್ಚಿನ ಮೌಲ್ಯದ ರಿಯಲ್ ಎಸ್ಟೇಟ್ ವಹಿವಾಟುಗಳಿಗಾಗಿ ಸುದ್ದಿಯಲ್ಲಿರುತ್ತದೆ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಒಂದು ಪ್ರೇಕ್ಷಣೀಯ ವಿಳಾಸವಾಗಿ ಹೊರಹೊಮ್ಮಿದೆ.

ಫುಡ್‌ ಡೆಲಿವರಿ ಕಂಪನಿಯ ಸಿಇಒ ಕೂಡ ಆಗಿರುವ ಗೋಯಲ್, ಲಂಬೋರ್ಘಿನಿ ಹುರಾಕನ್ ಸ್ಟೆರಾಟೊ, ಆಸ್ಟನ್ ಮಾರ್ಟಿನ್ ಡಿಬಿ 12, ಫೆರಾರಿ ರೋಮಾ, ಪೋರ್ಷೆ 911 ಟರ್ಬೊ ಎಸ್, ಲಂಬೋರ್ಘಿನಿ ಉರಸ್, ಬಿಎಂಡಬ್ಲ್ಯು ಎಂ 8 ಕಾಂಪಿಟಿಷನ್ ಮತ್ತು ಪೋರ್ಷೆ ಕ್ಯಾರೆರಾ ಎಸ್ ಸೇರಿದಂತೆ ಐಷಾರಾಮಿ ಕಾರುಗಳ ಸಂಗ್ರಹವನ್ನೂ ಹೊಂದಿದ್ದಾರೆ.

ಕ್ಯಾಮೆಲಿಯಾಸ್ ಎಂಬುದು NCR ನಲ್ಲಿ ಶ್ರೀಮಂತರು ಮತ್ತು ಪ್ರಸಿದ್ಧರ ಹೊಸ ವಿಳಾಸವಾಗಿದೆ. ಡಿಸೆಂಬರ್ 2024 ರಲ್ಲಿ, ಗುರುಗ್ರಾಮ್ ಮೂಲದ ಇನ್ಫೋ-ಎಕ್ಸ್ ಸಾಫ್ಟ್‌ವೇರ್ ಟೆಕ್ನಾಲಜಿಯ ಸಿಇಒ ಮತ್ತು ಸಂಸ್ಥಾಪಕ ರಿಷಿ ಪಾರ್ಟಿ, ದಿ ಕ್ಯಾಮೆಲಿಯಾಸ್‌ನಲ್ಲಿ 190 ಕೋಟಿ ರೂ.ಗಳಿಗೆ ಪೆಂಟ್‌ಹೌಸ್ ಖರೀದಿಸಿದರು.

ಅದೇ ವರ್ಷದ ಜನವರಿಯಲ್ಲಿ, ವೆಸ್‌ಬಾಕ್ ಲೈಫ್‌ಸ್ಟೈಲ್‌ನ ನಿರ್ದೇಶಕಿ ಮತ್ತು ವಿ ಬಜಾರ್ ಸಿಎಂಡಿ ಹೇಮಂತ್ ಅಗರ್‌ವಾಲ್ ಅವರ ಪತ್ನಿ ಸ್ಮಿತಿ ಅಗರ್‌ವಾಲ್, ದಿ ಕ್ಯಾಮೆಲಿಯಾಸ್‌ನಲ್ಲಿ 95 ಕೋಟಿ ರೂ.ಗಳಿಗೆ ಅಪಾರ್ಟ್‌ಮೆಂಟ್ ಖರೀದಿಸಿದರು. ಅಕ್ಟೋಬರ್ 2023 ರಲ್ಲಿ, 11,000 ಚದರ ಅಡಿ ವಿಸ್ತೀರ್ಣದ ಅಪಾರ್ಟ್ಮೆಂಟ್ ಅನ್ನು ಮರುಮಾರಾಟದಲ್ಲಿ ಸುಮಾರು 114 ಕೋಟಿ ರೂ.ಗೆ ಖರೀದಿಸಲಾಯಿತು.

ಮೇಕ್‌ಮೈಟ್ರಿಪ್ ಸಂಸ್ಥಾಪಕ ದೀಪ್ ಕಲ್ರಾ, ಡೆನ್ ನೆಟ್‌ವರ್ಕ್ಸ್‌ನ ಸಮೀರ್ ಮಂಚಂದ ಮತ್ತು ಅಸ್ಸಾಗೊ ಗ್ರೂಪ್ ಸಂಸ್ಥಾಪಕ ಆಶಿಶ್ ಗುರ್ನಾನಿ ಕೂಡ ದಿ ಕ್ಯಾಮೆಲಿಯಾಸ್‌ನಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದಾರೆ.