ನವದೆಹಲಿ(ಡಿ.10): ಎಲ್ಲ ಕಡಿತಗಳನ್ನು ಕಳೆದು ಉದ್ಯೋಗಿಗಳ ಕೈಗೆ ಸಿಗುತ್ತಿರುವ ಸಂಬಳ ಬರುವ ಏಪ್ರಿಲ್‌ನಿಂದ ಇನ್ನಷ್ಟುಕಡಿಮೆಯಾಗುವ ಸಾಧ್ಯತೆ ಇದೆ. ಹೊಸ ವೇತನ ನಿಯಮದಡಿ ಕೇಂದ್ರ ಸರ್ಕಾರ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಅದರ ಪ್ರಕಾರ ಭತ್ಯೆಗಳು ಸಂಬಳದ ಶೇ.50ರಷ್ಟುಮಿತಿ ಮೀರುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇದರಿಂದಾಗಿ ಮೂಲವೇತನ ಕಡಿಮೆ ಇದ್ದರೂ ಭತ್ಯೆಗಳ ರೂಪದಲ್ಲಿ ಹೆಚ್ಚು ಹಣ ಗಳಿಸುತ್ತಿದ್ದ ನೌಕರರಿಗೆ ಇನ್ನು ಕಷ್ಟವಾಗಲಿದೆ.

ತಿಂಗಳ ಸಂಪಾದನೆ ಬಡವರ ಊಟಕ್ಕೆ ನೀಡಿದ ವಾಚ್‌ಮನ್

2019ರ ವೇತನ ಸಂಹಿತೆಯ ಭಾಗವಾಗಿರುವ ಹೊಸ ವೇತನ ನಿಯಮಗಳು ಮುಂದಿನ ಹಣಕಾಸು ವರ್ಷ ಅಂದರೆ ಏಪ್ರಿಲ್‌ 1ರಿಂದ ಜಾರಿಗೆ ಬರುವ ನಿರೀಕ್ಷೆ ಇದೆ. ಒಟ್ಟಾರೆ ಸಂಬಳ ಅಥವಾ ಪರಿಹಾರದ ಶೇ.50ರಷ್ಟನ್ನು ಭತ್ಯೆಗಳು ಮೀರುವಂತಿಲ್ಲ ಎಂದು ಇದರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದರರ್ಥ ಮೂಲವೇತನ ಒಟ್ಟು ಸಂಬಳದಲ್ಲಿ ಶೇ.50ರಷ್ಟುಇರಬೇಕು ಎಂಬುದೇ ಆಗಿದೆ.

ಮೂಲವೇತನ ಹೆಚ್ಚಾದಷ್ಟೂಗ್ರಾಚ್ಯುಯಿಟಿ, ಭವಿಷ್ಯ ನಿಧಿ ಪಾವತಿಯೂ ಅಧಿಕವಾಗುವುದರಿಂದ ಉದ್ಯೋಗಿಗಳಿಗೆ ಈಗ ಕೈಗೆ ಸಿಗುತ್ತಿರುವ ಸಂಬಳ ಏಪ್ರಿಲ್‌ನಿಂದ ದೊರೆಯುವುದಿಲ್ಲ. ಆದರೆ ಅವರ ನಿವೃತ್ತಿ ನಿಧಿಗಳಲ್ಲಿ ಹೂಡಿಕೆ ಹೆಚ್ಚಾಗಲಿದ್ದು, ನಿವೃತ್ತಿ ನಂತರ ಅನುಕೂಲಕ್ಕೆ ಬರಲಿದೆ.

ಕೊರೋನಾ ವಿರುದ್ಧ ಹೋರಾಟ: ಸಿಎಂ ಪರಿಹಾರ ನಿಧಿಗೆ DCC ಬ್ಯಾಂಕ್‌ 1 ಕೋಟಿ ದೇಣಿಗೆ

ಬಹುತೇಕ ಕಂಪನಿಗಳು ಮೂಲವೇತನವನ್ನು ಕಡಿಮೆ ಇಟ್ಟು, ಭತ್ಯೆಗಳನ್ನು ಹೆಚ್ಚಾಗಿ ನೀಡುತ್ತವೆ. ಅದರಲ್ಲೂ ಖಾಸಗಿ ಕಂಪನಿಗಳಲ್ಲಿ ಸಂಬಳಕ್ಕಿಂತ ಅಧಿಕ ಭತ್ಯೆ ನೀಡುವ ಪದ್ಧತಿ ಇದ್ದು, ಆ ವಲಯದವರಿಗೆ ಹೆಚ್ಚಿನ ಪರಿಣಾಮವಾಗಲಿದೆ.

ಕೇಂದ್ರ ಸರ್ಕಾರದ ಈ ಕ್ರಮದಿಂದ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ಹಾಗೂ ನಿವೃತ್ತಿ ನಂತರದ ಅನುಕೂಲಗಳು ಉತ್ತಮವಾಗಿ ದೊರೆಯಲಿವೆ ಎಂದು ತಜ್ಞರು ತಿಳಿಸಿದ್ದಾರೆ.