Asianet Suvarna News Asianet Suvarna News

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ ಈಗ ಈ ಬ್ಯಾಂಕ್ ಗಳಲ್ಲೂ ಲಭ್ಯ

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಕೇಂದ್ರ ಸರ್ಕಾರ ಇದೀಗ ಸಾರ್ವಜನಿಕ ಹಾಗೂ  ಖಾಸಗಿ  ವಲಯದ ಬ್ಯಾಂಕ್ ಗಳಿಗೆ ವಿಸ್ತರಿಸಿದೆ. ಹೀಗಾಗಿ ಈ ಯೋಜನೆ ಖಾತೆಗಳನ್ನು ಈಗ 12 ಸಾರ್ವಜನಿಕ ಹಾಗೂ 4 ಖಾಸಗಿ ವಲಯದ ಬ್ಯಾಂಕ್ ಗಳಲ್ಲಿ ತೆರೆಯಬಹುದಾಗಿದೆ. 

You can soon open Mahila Samman Savings Account at these PSU private banks anu
Author
First Published Jun 30, 2023, 4:24 PM IST

ನವದೆಹಲಿ (ಜೂ.30):  2023-24ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಪರಿಚಯಸಿದ್ದರು. 
ಇದು ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗಾಗಿ ರೂಪಿಸಿರುವ ಯೋಜನೆಯಾಗಿದೆ. ಅಂಚೆ ಕಚೇರಿಯಲ್ಲಿ ಲಭ್ಯವಿದ್ದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಇದೀಗ ಸಾರ್ವಜನಿಕ ಹಾಗೂ  ಖಾಸಗಿ  ವಲಯದ ಬ್ಯಾಂಕ್ ಗಳಿಗೆ ವಿಸ್ತರಿಸಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಮಹಿಳೆಯರಲ್ಲಿ ಉಳಿತಾಯದ ಗುಣವನ್ನು ಪ್ರೋತ್ಸಾಹಿಸಲು ಹಾಗೂ ಅವರಿಗೆ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ರೂಪಿಸಲಾಗಿದೆ. 2023ರ ಏಪ್ರಿಲ್ 1ರಿಂದ ಜಾರಿಗೆ ಬಂದ ಈ ಯೋಜನೆಯನ್ನು ಮೊದಲಿಗೆ ಅಂಚೆ ಕಚೇರಿಯಲ್ಲಿ ಪರಿಚಯಿಸಲಾಗಿತ್ತು. ಈಗ ಇದರ ಖಾತೆಗಳನ್ನು 12 ಸಾರ್ವಜನಿಕ ವಲಯದ ಬ್ಯಾಂಕ್ ಗಳು ಹಾಗೂ 4 ಖಾಸಗಿ ವಲಯದ ಬ್ಯಾಂಕ್ ಗಳಲ್ಲಿ ತೆರೆಯಬಹುದು ಎಂದು ಕೇಂದ್ರ ಸರ್ಕಾರ ತನ್ನ ಅಧಿಕೃತ ಗಜೆಟ್ ಅಧಿಸೂಚನೆಯಲ್ಲಿ ತಿಳಿಸಿದೆ. 2023ರ ಜೂನ್ 27ರಂದು ಈ ಅಧಿಸೂಚನೆ ಹೊರಡಿಸಿದೆ.

ಯಾವ ಖಾಸಗಿ ಬ್ಯಾಂಕ್ ಗಳಲ್ಲಿ ಲಭ್ಯ?
ಈಗ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆ ಖಾತೆಯನ್ನು ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಐಡಿಬಿಐ ಬ್ಯಾಂಕ್ ಗಳಲ್ಲಿ ಕೂಡ ತೆರೆಯಬಹುದಾಗಿ ಎಂದು ಹಣಕಾಸು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ. ಹಾಗೆಯೇ ಈ ಬ್ಯಾಂಕ್ ಗಳು ತಮ್ಮ ಶಾಖೆಗಳಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಖಾತೆಗಳನ್ನು ತೆರೆಯಲು ಅವಕಾಶ ನೀಡುವ ಮುನ್ನ ಕೆಲವೊಂದು ಅವಶ್ಯಕತೆಗಳನ್ನು ಪೂರೈಕೆ ಮಾಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇನ್ನು ಅಧಿಸೂಚನೆ ಹೊರಡಿಸಿದ ದಿನಾಂಕದಿಂದಲೇ ಈ ಬ್ಯಾಂಕ್ ಗಳು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯನ್ನು ನಿರ್ವಹಿಸಲು ಅಧಿಕಾರ ಹೊಂದಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ರುಪೇ ಕ್ರೆಡಿಟ್ ಕಾರ್ಡ್ ಬಳಸಿ ಯುಪಿಐ ಪಾವತಿ ಸೌಲಭ್ಯ ಪ್ರಾರಂಭಿಸಿದ ಕೆನರಾ ಬ್ಯಾಂಕ್

ಏನಿದು ಮಹಿಳಾ ಸಮ್ಮಾನ ಉಳಿತಾಯ ಪತ್ರ?
ಮಹಿಳಾ ಸಮ್ಮಾನ ಉಳಿತಾಯ ಪತ್ರ ಯೋಜನೆಯನ್ನು  2023-24ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾಗಿದೆ. ಇದು ನೂತನ ಸಣ್ಣ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಮಹಿಳೆ ಅಥವಾ ಹೆಣ್ಣು ಮಗುವಿನ ಹೆಸರಿನಲ್ಲಿ ಒಂದೇ ಬಾರಿಗೆ 2ಲಕ್ಷ ರೂ. ಹೂಡಿಕೆ ಮಾಡಬಹುದು. ಇದು ಎರಡು ವರ್ಷಗಳ ಅವಧಿಯ ಯೋಜನೆಯಾಗಿದ್ದು, 2025ರ ಮಾರ್ಚ್ ತನಕ ಜಾರಿಯಲ್ಲಿರಲಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಯಾವುದೇ ವಯೋಮಿತಿ ನಿಗದಿಪಡಿಸಿಲ್ಲ. 

ಬಡ್ಡಿದರ ಎಷ್ಟಿದೆ?
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರದಲ್ಲಿ ಮಾಡಿದ ಹೂಡಿಕೆಗೆ ಶೇ.7.5 ಬಡ್ಡಿದರ ನೀಡಲಾಗುತ್ತದೆ. ಬಡ್ಡಿದರವನ್ನು ತ್ರೈಮಾಸಿಕವಾಗಿ ಜಮೆ ಮಾಡಲಾಗುತ್ತದೆ. ಇನ್ನು ಇದರಲ್ಲಿ ಶೇ.40ರಷ್ಟು ಭಾಗಶಃ ವಿತ್ ಡ್ರಾ ಮಾಡಲು ಕೂಡ ಅವಕಾಶ ಕಲ್ಪಿಸಲಾಗಿದೆ.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಖಾತೆ ತೆರೆದ ಸಚಿವೆ ಸ್ಮೃತಿ ಇರಾನಿ; ಈ ಖಾತೆ ತೆರೆಯಲು ಹೀಗೆ ಮಾಡಿ

ಕನಿಷ್ಠ ಠೇವಣಿ ಎಷ್ಟು?
ಈ ಯೋಜನೆಯಡಿಯಲ್ಲಿ 1,000ರೂ. ಕನಿಷ್ಠ ಠೇವಣಿಯಿಡೋದು ಅಗತ್ಯ. ಹಾಗೆಯೇ  2 ಲಕ್ಷ ರೂ. ಗರಿಷ್ಠ ಠೇವಣಿ ಮಿತಿ ವಿಧಿಸಲಾಗಿದೆ. ಈ ಯೋಜನೆಯಡಿ ನೀವು ಒಂದು ಖಾತೆ ತೆರೆದ ಬಳಿಕ ಇನ್ನೊಂದು ಖಾತೆ ತೆರೆಯಲು ಮೂರು ತಿಂಗಳ ಅಂತರ ಕಾಯ್ದುಕೊಳ್ಳುವುದು ಅಗತ್ಯ. 

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಸ್ಥಿರ ಠೇವಣಿಗಳಿಗೆ ಪರ್ಯಾಯವಾದ ಉಳಿತಾಯ ಯೋಜನೆಯಾಗಿದೆ. ಬಡ್ಡಿದರ ಕೂಡ ಉತ್ತಮವಾಗಿರುವ ಕಾರಣ ಹೂಡಿಕೆಗೆ ಮಹಿಳೆಯರಿಗೆ ಇದು ಉತ್ತಮ ಆಯ್ಕೆಯಾಗಿದೆ. ಅಲ್ಲದೆ, ಈ ಯೋಜನೆಯ ಅವಧಿ ಕೂಡ ಕಡಿಮೆಯಿದ್ದು, ಭಾಗಶಃ ವಿತ್ ಡ್ರಾ ಸೌಲಭ್ಯ ಸಹ ಇದೆ. 

Latest Videos
Follow Us:
Download App:
  • android
  • ios