ಬೆಂಗಳೂರು(ಜ.13): ಸ್ವಂತ ಉದ್ಯಮಕ್ಕಿಂತ ಸುಖಕರ ಕ್ಷೇತ್ರ ಮತ್ತೊಂದಿಲ್ಲ ಅಂತಾ ತಿಳಿದವರು ಹೇಳ್ತಾರೆ. ಇಲ್ಲಿ ನೀವೇ ಬಾಸ್, ನೀವೇ ಕಾರ್ಮಿಕ, ನೀವೇ ಬಂಡವಾಳದಾರ, ನೀವೇ ಲಾಭ ಉಣ್ಣುವ ಅದೃಷ್ಟವಂತ.

ಸ್ವಂತ ಉದ್ಯಮ ಹೊಂದಲು ಇಂದು ಅನೇಕ ದಾರಿಗಳಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೂ ಕೂಡ ಸ್ವಂತ ಉದ್ಯಮಕ್ಕೆ ನೆರವಾಗುತ್ತಿವೆ. ಬ್ಯಾಂಕ್‌ಗಳ ಮೂಲಕ ಹಣಕಾಸಿನ ನೆರವನ್ನೂ ಒದಗಿಸುತ್ತಿವೆ. ಇದರಿಂದ ಸಣ್ಣ ಪ್ರಮಾಣದ ಸ್ವಂತ ಉದ್ಯಮ ಹೊಂದುವ ಅನೇಕರ ಕನಸು ಕೂಡ ನನಸಾಗುತ್ತಿದೆ.

ಅದರಂತೆ ಕೋಳಿ ಸಾಕಾಣಿಕೆ ಕೂಡ ಅತ್ಯಂತ ಲಾಭದ ಸ್ವಂತ ಉದ್ಯಮ ಎಂದು ಪರಿಗಣಿತವಾಗಿದೆ. ಕೇವಲ 5 ರಿಂದ 10 ಲಕ್ಷ ರೂ. ಮೂಲ ಬಂಡವಾಳದೊಂದಿಗೆ ಪ್ರಾರಂಭಿಸಬಹುದಾದ ಈ ಉದ್ಯಮ ನಿಜಕ್ಕೂ ಗಮನಾರ್ಹ ಲಾಭ ತರಬಲ್ಲದು.

ಕೋಳಿ ಸಾಕಾಣಿಕೆ ಹೇಗೆ?:

1,500 ಕೋಳಿಗಳ ಫಾರ್ಮ್ ಪ್ರಾರಂಭಿಸಲು ಹಲವು ಉತ್ತಮ ದಾರಿಗಳಿವೆ. ಈ ಮೇಲೆ ಹೇಳಿದಂತೆ 5 ರಿಂದ 10 ಲಕ್ಷ ರೂ. ಮೂಲ ಬಂಡವಾಳದ ಸಹಾಯದಿಂದ ನಿರ್ದಿಷ್ಟ ಜಾಗದಲ್ಲಿ ಕೋಳಿ ಸಾಕಾಣಿಕೆ ಮಾಡಬಹುದು.

ಅದರಂತೆ ಪೇರೆಂಟ್ ಬರ್ಡ್ ಅಂದೆ ಜೋಡಿ ಕೋಳಿಗಳ ಬೆಲೆ 30 ರಿಂದ 35 ಸಾವಿರ ರೂ. ಆಗುತ್ತದೆ. ಇವುಗಳನ್ನು ಕನಿಷ್ಟ 6 ತಿಂಗಳವರೆಗೆ ಸಾಕಲು 1 ರಿಂದ 1.5 ಲಕ್ಷ ರೂ.ವೆರೆಗೆ ಖರ್ಚು ಬರುತ್ತದೆ. ಆದರೆ ಆರೋಗ್ಯವಂತ ಜೋಡಿ ಕೋಳಿ ವರ್ಷವೊಂದಕ್ಕೆ ಕಮ್ಮಿಯೆಂದರೂ 300 ಮೊಟ್ಟೆಗಳನ್ನು ಇಡುತ್ತದೆ. 

ಕೋಳಿಗಳು ಕೇವಲ 20 ವಾರಗಳಿಂದಲೇ ಮೊಟ್ಟೆ ಇಡಲು ಪ್ರಾರಂಭಿಸುತ್ತವೆ. ಮತ್ತು ಒಂದು ವರ್ಷ ನಿರಂತರವಾಗಿ ಮೊಟ್ಟೆ ಇಡುತ್ತವೆ. ಅದರಂತೆ 1,500 ಕೋಳಿಗಳಿಂದ ವರ್ಷಕ್ಕೆ ಏನಿಲ್ಲವೆಂದರೂ 4,35,000 ಮೊಟ್ಟೆಗಳು ಸಿಗುತ್ತವೆ.

ಕೇವಲ ಮೊಟ್ಟೆಗಳನ್ನಷ್ಟೇ ಮಾರುವುದರಿಂದ ವರ್ಷಕ್ಕೆ ಉದ್ಯಮಿಯೋರ್ವ 14 ಲಕ್ಷ ರೂ. ಗಳಿಸಬಹುದಾಗಿದೆ. ಆದರೂ ಈ ಉದ್ಯಮ ಪ್ರಾರಂಭಿಸುವ ಮೊದಲು ಉತ್ತಮ ತರಬೇತಿ ಪಡೆಯವುದು ಒಳ್ಳೆಯದು.