ಮುಂಬೈ[ಮಾ.19]: ಆರ್ಥಿಕ ಸಂಕ​ಷ್ಟದಿಂದಾಗಿ ಕಳೆದ 13 ದಿನ​ಗ​ಳಿಂದ ಗ್ರಾಹ​ಕ​ರ ವಹಿ​ವಾ​ಟಿಗೆ ನಿರ್ಬಂಧ ವಿಧಿ​ಸಿದ್ದ ಖಾಸಗಿ ವಲ​ಯದ ಯಸ್‌ ಬ್ಯಾಂಕ್‌ ತನ್ನ ಸೇವೆ​ಯನ್ನು ಬುಧ​ವಾ​ರ​ ಸಂಜೆ 6 ಗಂಟೆ​ಯಿಂದ ಪುನಃ ಆರಂಭಿ​ಸಿದೆ. ಯಸ್‌ ಬ್ಯಾಂಕ್‌ ಮೇಲಿನ ನಿಷೇಧ ಸಂಪೂರ್ಣ ತೆರ​ವಾದ ಹಿನ್ನೆ​ಲೆ​ಯಲ್ಲಿ ಗುರು​ವಾ​ರದಿಂದ ಬ್ಯಾಂಕ್‌ ಎಂದಿ​ನಂತೆ ಕಾರ್ಯ​ನಿ​ರ್ವ​ಹಿ​ಸಿದೆ.

ನಮ್ಮ ಎಲ್ಲಾ ಎಟಿ​ಎಂಗಳಿಗೆ ಹಣ ತುಂಬ​ಲಾ​ಗಿದೆ. ಬ್ಯಾಂಕಿನ ಶಾಖೆ​ಗ​ಳಲ್ಲಿ ಸಾಕಷ್ಟುಹಣದ ಪೂರೈಕೆ ಮಾಡ​ಲಾ​ಗಿದೆ. ಯಸ್‌ ಬ್ಯಾಂಕ್‌ ಕಡೆ​ಯಿಂದ ಗ್ರಾಹ​ಕರ ವ್ಯವ​ಹಾ​ರಕ್ಕೆ ತೊಂದರೆ ಆಗ​ದಂತೆ ಎಲ್ಲ ಕ್ರಮ​ಗಳನ್ನು ಕೈಗೊ​ಳ್ಳ​ಲಾ​ಗಿದೆ ಎಂದು ಯಸ್‌ ಬ್ಯಾಂಕ್‌ ನಿಯೋ​ಜಿತ ಸಿಇಒ ಪ್ರಶಾಂತ್‌ ಕುಮಾರ್‌ ತಿಳಿ​ಸಿ​ದ್ದಾ​ರೆ. ಆದರೆ, ಇಂಟ​ರ್‌​ನೆಟ್‌ ಹಾಗೂ ಮೊಬೈಲ್‌ ಬ್ಯಾಂಕಿಂಗ್‌ ಸೇವೆ​ಗಳು ಸಮ​ರ್ಪ​ಕ​ವಾಗಿ ಕಾರ್ಯ​ನಿ​ರ್ವ​ಹಿ​ಸು​ತ್ತಿಲ್ಲ ಎಂದು ಕೆಲವು ಗ್ರಾಹ​ಕರು ಟ್ವೀಟರ್‌ ಮೂಲಕ ದೂರು ದಾಖ​ಲಿ​ಸಿ​ದ್ದಾರೆ. ಇದಕ್ಕೆ ಪ್ರತಿ​ಕ್ರಿಯೆ ನೀಡಿ​ರುವ ಯಸ್‌ ಬ್ಯಾಂಕ್‌ ಅಡ​ಚ​ಣೆಗೆ ಕ್ಷಮೆ ಯಾಚಿ​ಸಿದೆ.

ಬ್ಯಾಂಕಿನ ಅವಧಿ ವಿಸ್ತ​ರ​ಣೆ:

ಗ್ರಾಹ​ಕ​ರಿಗೆ ಅಡ​ಚಣೆ ರಹಿತ ಸೇವೆ ಒದ​ಗಿ​ಸುವ ಸಲು​ವಾಗಿ ಗುರು​ವಾ​ರ​ದಿ​ಂದ ಮೂರು ದಿನಗಳ ವರೆಗೆ ಬ್ಯಾಂಕಿನ ಅವ​ಧಿ​ಯನ್ನು ವಿಸ್ತ​ರಣೆ ಮಾಡ​ಲಾ​ಗಿದೆ. ಮಾ.19ರಿಂದ ಮಾ.21ರ ವರೆಗೆ ಮುಂಜಾನೆ 08:30ರಿಂದ​ಲೇ ಬ್ಯಾಂಕ್‌ ತೆರೆ​ಯ​ಲಿದೆ. ಅಲ್ಲ​ದೇ ಮಾ.27ರ ವರೆಗೆ ಸಂಜೆ 4.30ರ ಬದಲು ಸಂಜೆ 5.30ರ ವರೆಗೂ ಬ್ಯಾಂಕ್‌ ಕಾರ್ಯ​ನಿ​ರ್ವ​ಹಿ​ಸ​ಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2019 ಡಿ.31ರಂದು 2.09 ಲಕ್ಷ ಕೋಟಿ ರು. ಇದ್ದ ಯಸ್‌ ಬ್ಯಾಂಕ್‌ ಠೇವಣಿ ಹಣ ಮಾ.5ರ ವೇಳೆಗೆ 1.37 ಲಕ್ಷ ಕೋಟಿ ರು.ಗೆ ಇಳಿ​ದಿತ್ತು. ಈ ಹಿನ್ನೆ​ಲೆ​ಯಲ್ಲಿ ಆರ್‌​ಬಿಐ ಮಾ.5ರಂದು ಯಸ್‌ ಬ್ಯಾಂಕ್‌ ಮೇಲೆ ನಿಷೇಧ ಹೇರಿ ಆಡ​ಳಿತ ಮಂಡ​ಳಿ​ಯನ್ನು ಅಮಾ​ನತುಗೊಳಿ​ಸಿತ್ತು.

ಆತಂಕ: ಇದೇ ವೇಳೆ ಆತಂಕಕ್ಕೆ ಗುರಿಯಾಗಿರುವ ಯಸ್‌ ಬ್ಯಾಂಕ್‌​ನಿಂದ ಗ್ರಾಹ​ಕರು ಗಣ​ನೀಯ ಪ್ರಮಾ​ಣದ ಬಂಡ​ವಾ​ಳ​ವನ್ನು ಹಿಂಪ​ಡೆ​ದು​ಕೊ​ಳ್ಳ​ಬ​ಹುದು ಎಂಬ ಆತಂಕ ಕೆಲವು ವಲ​ಯ​ಗ​ಳಲ್ಲಿ ಕೇಳಿಬಂದಿ​ದೆ.