WPI Inflation: ಚಿಲ್ಲರೆ ಹಣದುಬ್ಬರ ತಗ್ಗಿದರೂ ಕೆಳಗಿಳಿಯದ WPI;ಮೇನಲ್ಲಿ ಶೇ.15.88ಕ್ಕೆ ಏರಿಕೆಯಾದ ಸಗಟು ಹಣದುಬ್ಬರ
*ಏಪ್ರಿಲ್ ನಲ್ಲಿ ಶೇ.15.08ರಷ್ಟಿದ್ದ ಸಗಟು ಹಣದುಬ್ಬರ
*ಮೇನಲ್ಲಿ ಚಿಲ್ಲರೆ ಹಣದುಬ್ಬರ ಶೇ.7.04ಕ್ಕೆ ಇಳಿಕೆ
*ಸತತ 14 ತಿಂಗಳಿಂದ ಎರಡಂಕಿಯಲ್ಲಿದೆ ಸಗಟು ಹಣದುಬ್ಬರ
ನವದೆಹಲಿ (ಜೂ.14): ಮೇನಲ್ಲಿ ಚಿಲ್ಲರೆ ಹಣದುಬ್ಬರ (Retail inflation) ಕೊಂಚ ಇಳಿಕೆ ಕಂಡಿದ್ದರೆ, ಸಗಟು ಹಣದುಬ್ಬರ (wholesale inflation) ದಾಖಲೆ ಮಟ್ಟಕ್ಕೆ ಏರಿಕೆಯಾಗೋ ಮೂಲಕ ಶಾಕ್ ನೀಡಿದೆ. ಏಪ್ರಿಲ್ ನಲ್ಲಿ ಶೇ.15.08ರಷ್ಟಿದ್ದ ಸಗಟು ಹಣದುಬ್ಬರ ಮೇನಲ್ಲಿ ಶೇ.15.88ಕ್ಕೆ ಏರಿಕೆಯಾಗಿದೆ. ಈ ಮೂಲಕ ಸತತ 14 ತಿಂಗಳಿಂದ ಸಗಟು ಹಣದುಬ್ಬರ ಎರಡಂಕಿಯಲ್ಲಿದೆ.
ಇನ್ನು ಕಳೆದ ಆರ್ಥಿಕ ಸಾಲಿನ ಈ ಅವಧಿಯಲ್ಲಿ ಸಗಟು ಹಣದುಬ್ಬರ ಶೇ. 13.11ರಷ್ಟಿತ್ತು. ಸಗಟು ಹಣದುಬ್ಬರ ಹೆಚ್ಚಳಕ್ಕೆ ತರಕಾರಿ ಹಣದುಬ್ಬರ ಏರಿಕೆಯೇ ಕಾರಣವಾಗಿದ್ದು, ಏಪ್ರಿಲ್ ನಲ್ಲಿ ಶೇ.23.24ರಷ್ಟಿದ್ದ ಹಣದುಬ್ಬರ ಮೇನಲ್ಲಿ ಶೇ.56.36ಕ್ಕೆ ಹೆಚ್ಚಳವಾಗಿದೆ. ಇನ್ನು ಕಚ್ಚಾ ತೈಲಗಳು, ಖನಿಜ ತೈಲಗಳು, ಆಹಾರ ಹಾಗೂ ಆಹಾರೇತರ ವಸ್ತುಗಳು ಹಾಗೂ ರಾಸಾಯನಿಕ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗಿರೋದು ಕೂಡ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
Interest Rate Hike:ಎಫ್ ಡಿ ಹೊಂದಿರೋರಿಗೆ ಗುಡ್ ನ್ಯೂಸ್; ಬಡ್ಡಿದರ ಹೆಚ್ಚಿಸಿದ ಎಸ್ ಬಿಐ, ಪಿಎನ್ ಬಿ
ಏಪ್ರಿಲ್ ನಲ್ಲಿ ಶೇ.8.38ರಷ್ಟಿದ್ದ ಆಹಾರ ಹಣದುಬ್ಬರ (Food inflation) ಮೇನಲ್ಲಿ ಶೇ.7.97ಕ್ಕೆ ಇಳಿಕೆಯಾಗಿದೆ. ಪರಿಣಾಮ ಚಿಲ್ಲರೆ ಹಣದುಬ್ಬರ (Retail inflation) ಕುಸಿತ ಕಂಡಿದೆ. ಏಪ್ರಿಲ್ ನಲ್ಲಿ ಶೇ.7.79ರಷ್ಟಿದ್ದ ಚಿಲ್ಲರೆ ಹಣದುಬ್ಬರ ಮೇನಲ್ಲಿ ಶೇ.7.04ಕ್ಕೆ ಇಳಿಕೆಯಾಗಿದೆ. ಆದರೆ, ಸಗಟು ಹಣದುಬ್ಬರ ಮಾತ್ರ ಏಪ್ರಿಲ್ ಗಿಂತ ಮೇನಲ್ಲಿ ಹೆಚ್ಚಳಗೊಂಡಿದೆ.
ಉತ್ಪಾದನಾ ವಲಯದಲ್ಲಿ ಕುಸಿತ ಕಂಡುಬಂದಿರೋದು ಕೂಡ ಈ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ರಷ್ಯಾ- ಉಕ್ರೇನ್ ಯುದ್ಧದಿಂದ ಸೂರ್ಯಕಾಂತಿ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಇನ್ನು ದೇಶೀಯ ಮಟ್ಟದಲ್ಲಿ ಹಣದುಬ್ಬರ ತಡೆ ಹಾಗೂ ಕೊರತೆ ಎದುರಾಗೋದನ್ನು ತಪ್ಪಿಸಲು ಇಂಡೋನೇಷ್ಯಾ ತಾಳೆ ಎಣ್ಣೆ ರಫ್ತಿನ ಮೇಲೆ ಕೆಲವು ದಿನಗಳ ಕಾಲ ನಿರ್ಬಂಧ ವಿಧಿಸಿತ್ತು. ಇದ್ರಿಂದ ಖಾದ್ಯ ತೈಲ ಬೆಲೆಯಲ್ಲಿ ಏರಿಕೆಯಾಗಿತ್ತು ಕೂಡ.
ಕಚ್ಚಾ ತೈಲ ಹಾಗೂ ಇಂಧನ ವಲಯದಲ್ಲಿ ಸಗಟು ಹಣದುಬ್ಬರ ಸೂಚ್ಯಂಕ ಏಪ್ರಿಲ್ ನಲ್ಲಿ ಶೇ.38.66ರಿಂದ ಮೇನಲ್ಲಿ ಶೇ. 40.62ಕ್ಕೆ ಏರಿಕೆಯಾಗಿದೆ. ಆದರೆ, ಕಲ್ಲಿದ್ದಲು ಹಾಗೂ ವಿದ್ಯುತ್ ಬೆಲೆಯಲ್ಲಿ ಮೇನಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ಸರ್ಕಾರವು ಮೇ ತಿಂಗಳ ಚಿಲ್ಲರೆ ಹಣದುಬ್ಬರ ದರವನ್ನು ಪ್ರಕಟಿಸಿದ ಒಂದು ದಿನದ ಬಳಿಕ ಸಗಟು ಹಣದುಬ್ಬರ ಮಾಹಿತಿಯನ್ನು ಹೊಹಾಕಿದೆ. ಸಗಟು ಹಣದುಬ್ಬರ ಸೂಚ್ಯಂಕದ ಏರಿಕೆಯು ಸಗಟು ಹಣದುಬ್ಬರದ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ.
ಪ್ರಸಕ್ತ ಹಣಕಾಸು ಸಾಲಿನಲ್ಲಿ ಆರ್ ಬಿಐ ಹಣದುಬ್ಬರ ದರ ಶೇ.5.7ರಷ್ಟು ಇರಲಿದೆ ಎಂದು ಅಂದಾಜಿಸಿತ್ತು. ಆದ್ರೆ ಕೆಲವು ದಿನಗಳ ಹಿಂದೆಯಷ್ಟೇ ನಡೆದ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ಶೇ.6.7ಕ್ಕೆ ಹೆಚ್ಚಿಸಿದೆ. ಜಾಗತಿಕ ಮಟ್ಟದಲ್ಲಿ ಸರಕುಗಳ ಬೆಲೆಯಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆರ್ ಬಿಐ ಈ ನಿರ್ಧಾರ ಕೈಗೊಂಡಿತ್ತು.
Retail Inflation:ಮೇನಲ್ಲಿ ಚಿಲ್ಲರೆ ಹಣದುಬ್ಬರ ಶೇ.7.04ಕ್ಕೆ ಇಳಿಕೆ; ಆದ್ರೂ ತಗ್ಗದ ಆತಂಕ
ಮೇನಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆ
ಏಪ್ರಿಲ್ ನಲ್ಲಿ ಶೇ.7.79ರಷ್ಟಿದ್ದ ಚಿಲ್ಲರೆ ಹಣದುಬ್ಬರ ಮೇನಲ್ಲಿ ಶೇ.7.04ಕ್ಕೆ ಇಳಿಕೆಯಾಗಿದೆ. ಏಪ್ರಿಲ್ ನಲ್ಲಿ ಚಿಲ್ಲರೆ (Retail) ಹಣದುಬ್ಬರ (Inflation) 8 ವರ್ಷಗಳ ಗರಿಷ್ಠ ಮಟ್ಟ ಶೇ.7.79 ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಆರ್ ಬಿಐ (RBI) ಮೇ ಪ್ರಾರಂಭದಲ್ಲಿ ರೆಪೋ ದರವನ್ನು ಶೇ.0.40ರಷ್ಟು ಹೆಚ್ಚಳ ಮಾಡಿತ್ತು. ಇನ್ನು ಕೇಂದ್ರ ಸರ್ಕಾರ ಕೂಡ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ತಗ್ಗಿಸಿತ್ತು. ಈ ಎರಡೂ ಕ್ರಮಗಳು ಮೇನಲ್ಲಿ ಚಿಲ್ಲರೆ ಹಣದುಬ್ಬರ (Retail inflation) ದರ ತುಸು ಕಡಿಮೆಯಾಗಲು ನೆರವಾಗಿವೆ. ಆದರೂ ಕೂಡ ಸಿಪಿಐ (CPI) ಆಧಾರಿತ ಚಿಲ್ಲರೆ ಹಣದುಬ್ಬರ ಆರ್ ಬಿಐ ನಿಗದಿಪಡಿಸಿರುವ ಗರಿಷ್ಠ ಸಹನಾ ಮಟ್ಟವನ್ನು ಮೀರುತ್ತಿರೋದು ಇದು ಸತತ ಐದನೇ ಬಾರಿಯಾಗಿದೆ. ಮಾರ್ಚ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.95ಕ್ಕೆ ಏರಿಕೆಯಾಗಿದ್ರೆ, ಫೆಬ್ರವರಿಯಲ್ಲಿ ಶೇ.6.07ಕ್ಕೆ ಹೆಚ್ಚಳವಾಗಿತ್ತು.