ರಿಲ್ಯಾಕ್ಸ್ ಆಗಲು ಸ್ಟಾರ್ ಬಕ್ಸ್ ಕಾಫಿ ಕುಡಿದ ದಂಪತಿ,ಬಿಲ್ ನೋಡಿ ಶಾಕ್!
ಅದೆಷ್ಟೇ ಟೆನ್ಷನ್ ಇದ್ರೂ ಕಾಫಿ ಕುಡಿದ ತಕ್ಷಣ ಎಲ್ಲವೂ ಮಾಯ. ಆದ್ರೆ ಅಮೆರಿಕದಲ್ಲಿ ಸ್ಟಾರ್ ಬಕ್ಸ್ ಶಾಪ್ ನಲ್ಲಿ ಕಾಫಿ ಕುಡಿದ ದಂಪತಿಗೆ ಮಾತ್ರ ಟೆನ್ಷನ್ ತಗ್ಗುವ ಬದಲು ಹೆಚ್ಚಿತ್ತು. ಇದಕ್ಕೆ ಕಾರಣ ಬಿಲ್. ಎರಡು ಕಪ್ ಕಾಫಿಗೆ ಬರೋಬರಿ 3.6 ಲಕ್ಷ ರೂ. ಚಾರ್ಜ್ ಮಾಡಲಾಗಿತ್ತು.
ನ್ಯೂಯಾರ್ಕ್ (ಫೆ.10): ಮನಸ್ಸು, ದೇಹ ಎರಡೂ ಬಳಲಿರುವಾಗ ಒಂದು ಕಪ್ ಕಾಫಿ ಬೇಕೆಂಬ ಬಯಕೆ ಮೂಡುವುದು ಸಹಜ. ಕಾಫಿ ಮನಸ್ಸು ಹಾಗೂ ದೇಹದ ಜಡವನ್ನು ಕ್ಷಣ ಮಾತ್ರದಲ್ಲಿ ದೂರ ಮಾಡಿ ಆಹ್ಲಾದ ಭಾವ ಮೂಡಿಸಬಲ್ಲದು. ಆದರೆ, ಆತ್ಮೀಯರ ಜೊತೆಗೂಡಿ ಕಾಫಿ ಶಾಪ್ ಗೆ ಹೋಗಿ ಕುಡಿದ ಎರಡು ಕಾಫಿಗೆ ಲಕ್ಷಾಂತರ ರೂಪಾಯಿ ಚಾರ್ಜ್ ಮಾಡಿದ್ರೆ ಹೇಗಾಗಬೇಡ? ಇಂಥದೊಂದು ಅನುಭವ ಅಮೆರಿಕದ ದಂಪತಿಗೆ ಆಗಿದೆ. ಜನಪ್ರಿಯ ಕಾಫಿ ಶಾಪ್ ಸ್ಟಾರ್ ಬಕ್ಸ್ ನಲ್ಲಿ ಎರಡು ಕಾಫಿ ಆರ್ಡರ್ ಮಾಡಿ ಕುಡಿದ ಜೆಸ್ಸೆ ಹಾಗೂ ಡೀಡಿ ಒ ಡೆಲ್ ಬಿಲ್ ನೋಡಿ ದಂಗಾಗಿದ್ದಾರೆ. ಬರೋಬರಿ 3.6 ಲಕ್ಷ ರೂ.($4,456.27) ಚಾರ್ಜ್ ಮಾಡಲಾಗಿತ್ತು! ಈ ದಂಪತಿಗೆ ಸ್ಟಾರ್ ಬಕ್ಸ್ ಕಾಫಿ ಬೆಲೆಗಿಂತ ಹೆಚ್ಚಿನ ಟಿಪ್ಸ್ ಚಾರ್ಜ್ ಮಾಡಿತ್ತು. ಹೀಗಾಗಿ ಈ ದಂಪತಿಗೆ ಕಾಫಿ ಕುಡಿದು ಟೆನ್ಷನ್ ಕಡಿಮೆಯಾಗುವ ಬದಲಿಗೆ ಹೆಚ್ಚಾಗಿದೆ. ಇಲ್ಲ ಅಂದ್ರೆ ನೀವೇ ಯೋಚಿಸಿ ಅಮೆರಿಕದಲ್ಲಿ ಒಂದು ಕಪ್ ಕಾಫಿ ಬೆಲೆ ಹೆಚ್ಚೆಂದ್ರೆ 10 ಡಾಲರ್ ಇರಬಹುದು. ಹೀಗಿರುವಾಗ ಎರಡು ಕಪ್ ಕಾಫಿಗೆ 4 ಸಾವಿರ ಡಾಲರ್ ಗಿಂತ ಹೆಚ್ಚು ಬಿಲ್ ಮಾಡಿದ್ರೆ ಹೇಗಾಗಬೇಡ? ಒಕ್ಲಹೋಮ ನಿವಾಸಿಗಳಾಗಿರುವ ಡೀಡಿ ಖಾತೆಯಿಂದ ದೊಡ್ಡ ಮೊತ್ತದ ಹಣ ಖಾಲಿಯಾದಾಗಲೇ ಅವರಿಗೆ ಇದು ಅರಿವಾಗಿದ್ದು.
ಡೀಡಿ ದಂಪತಿ ಐಸ್ಡ್ ಅಮೆರಿಕನೋ (iced americano) ಹಾಗೂ ಕ್ಯಾರಮೆಲ್ ಫ್ರಪ್ಪುಸ್ಸಿನೋ (caramel frappuccino) ಕಾಫಿ ಆರ್ಡರ್ ಮಾಡಿದ್ದರು. ಇದಕ್ಕೆ 10 ಡಾಲರ್ ಅಥವಾ 820ರೂ. ಬೆಲೆ. ಈ ದುಬಾರಿ ಶುಲ್ಕದ ಬಗ್ಗೆ ಜೆಸ್ಸೆ ಸ್ಟಾರ್ ಬಕ್ಸ್ ಫ್ರಾಂಚೈಸಿ ಜಿಲ್ಲಾ ವ್ಯವಸ್ಥಾಪಕರನ್ನು ಸಂಪರ್ಕಿಸಿದರು. ಸ್ಥಳೀಯ ಟುಸ್ಲ ಸ್ಟಾರ್ ಬಕ್ಸ್ ಶಾಪ್ ನಲ್ಲಿ ಎರಡು ಕಪ್ ಕಾಫಿಗೆ ತಪ್ಪಾಗಿ 4,444.44 ಡಾಲರ್ ಚಾರ್ಜ್ ಮಾಡಿರುವುದನ್ನು ಅವರ ಗಮನಕ್ಕೆ ತಂದಿದ್ದಾರೆ. ಕಾಫಿ ಶಾಪ್ ನಲ್ಲಿ ನೆಟ್ ವರ್ಕ್ ಸಮಸ್ಯೆಯಿಂದ ಹೀಗಾಗಿದೆ ಎಂಬ ಮಾಹಿತಿಯನ್ನು ಆ ಸಂದರ್ಭದಲ್ಲಿ ಅವರಿಗೆ ನೀಡಲಾಗಿತ್ತು. ಅಲ್ಲದೆ, ತಪ್ಪನ್ನು ಸರಿಪಡಿಸಲು ಅವರಿಗೆ 4,444.44 ಡಾಲರ್ ಮೊತ್ತದ ಎರಡು ಚೆಕ್ ಗಳನ್ನು ನೀಡಲಾಗಿತ್ತು. ಆದರೆ, ಚೆಕ್ ನಲ್ಲಿ ಬರೆಯುವಾಗ ತಪ್ಪಾದ ಹಿನ್ನೆಲೆಯಲ್ಲಿ ಎರಡೂ ಚೆಕ್ ಗಳು ಬೌನ್ಸ್ ಆಗಿದ್ದವು.
ಭಾರತದಲ್ಲಿ ಟ್ವಿಟರ್ ಬ್ಲೂ ಟಿಕ್ ಲಾಂಚ್, ಇನ್ಮುಂದೆ ಬಳಕೆದಾರರು ತಿಂಗಳಿಗೆ ಪಾವತಿಸಬೇಕು ಇಂತಿಷ್ಟು!
ಇನ್ನು ಇದೇ ಕಾರಣದಿಂದ ಥೈಲ್ಯಾಂಡ್ ನಲ್ಲಿರುವ ಡೀಡಿ ಹುಟ್ಟೂರಿಗೆ ಹೋಗುವ ಪ್ರವಾಸವನ್ನು ರದ್ದುಗೊಳಿಸಲಾಗಿತ್ತು ಕೂಡ. ಆರು ಸದಸ್ಯರ ಇವರ ಕುಟುಂಬಕ್ಕೆ ಸ್ಟಾರ್ ಬಕ್ಸ್ ವಿಧಿಸಿದ ಬಿಲ್ ದೊಡ್ಡ ಹೊರೆಯಾಗಿ ಪರಿಣಮಿಸಿತ್ತು. ನ್ಯೂ ಯಾರ್ಕ್ ಪೋಸ್ಟ್ ನೀಡಿರುವ ಮಾಹಿತಿ ಪ್ರಕಾರ ಸಮಸ್ಯೆ ಬಗೆಹರಿಸಿಕೊಳ್ಳಲು ದಂಪತಿ 30-40 ಬಾರಿ ಕಸ್ಟಮರ್ ಸರ್ವೀಸ್ ಸಂಪರ್ಕಿಸಬೇಕಾಗಿ ಬಂದಿತ್ತು. ಆದರೆ, ಸ್ಟಾರ್ ಬಕ್ಸ್ ಉದ್ಯೋಗಿ ಜೆಸ್ಸೆ ದೊಡ್ಡ ಮೊತ್ತದ ಟಿಪ್ ನೀಡಿದ್ದರು ಎಂದು ಆರೋಪಿಸಿದ್ದಾರೆ. ಅಲ್ಲದೆ, ಇದರಲ್ಲಿ ದಂಪತಿಯದ್ದೇ ತಪ್ಪು ಎಂದಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಜೆಸ್ಸೆ ಈ ಆರೋಪ ತಳ್ಳಿ ಹಾಕಿದ್ದು, ನಾನು'ನೋ ಟಿಪ್' ಆಯ್ಕೆ ಮಾಡಿಕೊಂಡಿದ್ದೆ. ನೆಟ್ ವರ್ಕ್ ಸಮಸ್ಯೆಯೇ ಇದಕ್ಕೆಲ್ಲ ಕಾರಣ ಎಂದು ಹೇಳಿದ್ದಾರೆ.
ಅದಾನಿ ಪವರ್ ಜೊತೆಗೆ 6 ಅಂಗಸಂಸ್ಥೆಗಳ ವಿಲೀನಕ್ಕೆ NCLT ಅನುಮತಿ
ಒಟ್ಟಾರೆ ಈ ಪ್ರಕರಣ ಇನ್ಮುಂದೆ ಕಾಫಿ ಶಾಪ್ ಗೆ ಹೋಗಿ ಕಾಫಿ ಕುಡಿಯಲು ಕೂಡ ಆಲೋಚಿಸುವಂತೆ ಮಾಡಿದೆ. ಈ ರೀತಿ ಕಾಫಿ ಶಾಪ್ ಗಳು ಗ್ರಾಹಕರಿಗೆ ಬಿಲ್ ಮೂಲಕ ಶಾಕ್ ನೀಡಿದ್ರೆ ಕಾಫಿ ನಾಲಿಗೆಯ ರುಚಿಯನ್ನೇ ಕೆಡಿಸಿ ಮುಂದೆಂದೂ ಕಾಫಿ ಹೀರದಂತೆ ಮಾಡುವುದಂತೂ ಗ್ಯಾರಂಟಿ.