ವಾಷಿಂಗ್ಟನ್(ಜೂ.05): ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ, ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬ ಹಣೆಪಟ್ಟಿಯನ್ನು ಕಳಚಿಕೊಂಡಿತ್ತು.

ಭಾರತದಿಂದ ಈ ಹಣೆಪಟ್ಟಿ ಕಸಿದುಕೊಂಡಿರುವ ಚೀನಾ, ಇದೀಗ ತನ್ನ ಜಿಡಿಪಿ ಬೆಳವಣಿಗೆಗೆ ಜಂಭ ಕೊಚ್ಚಿಕೊಳ್ಳುತ್ತಿದೆ. ಆದರೆ ವಿಶ್ವಬ್ಯಾಂಕ್ ಮಾತ್ರ ಭಾರತಕ್ಕೆ ಸಮಾಧಾನಕರ ಸಂಗತಿಯನ್ನು ತಂದಿದೆ.

ಮುಂದಿನ ಮೂರು ವರ್ಷಗಳಲ್ಲಿ ಭಾರತದ ಆರ್ಥಿಕತೆ ಶೇ. 7.5 ರಷ್ಟು ಬೆಳವಣಿಗೆಯಾಗಲಿದೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ. 

ಈ ಮೂಲಕ ಇತ್ತೀಚೆಗೆ ನೂತನವಾಗಿ ರಚಿನೆಯಾಗಿರುವ ಕೇಂದ್ರ ಸರ್ಕಾರಕ್ಕೆ ಅಂತರಾಷ್ಟ್ರೀಯ ಸಂಸ್ಥೆಯಿಂದ ಶುಭ ಸುದ್ದಿ ದೊರಕಿದೆ.

ಮಾರ್ಚ್ 31ಕ್ಕೆ ಕೊನೆಗೊಂಡ 2018/19 ಆರ್ಥಿಕ ವರ್ಷದಲ್ಲಿ ಭಾರತ ಆರ್ಥಿಕತೆ ಶೇ. 7.2ರಷ್ಟು ವೃದ್ದಿಯಾಗಿದೆ ಎಂದು ತನ್ನ ಜಾಗತಿಕ ಆರ್ಥಿಕ ನಿರೀಕ್ಷಣಾ ವರದಿಯಲ್ಲಿ ವಿಶ್ವಬ್ಯಾಂಕ್ ಹೇಳಿದೆ.

ಸರ್ಕಾರದ ಬಳಕೆ ಪ್ರಮಾಣ ಇಳಿಕೆಯಾಗಿದ್ದು, ಹೂಡಿಕೆ ಹೆಚ್ಚಳ ಮತ್ತು ಮೂಲಭೂತ ಸೌಕರ್ಯ ಸುಧಾರಿಸಲು ಈ ಬೆಳವವಣಿಗೆ ಸಹಾಯಕಾರಿ ಎಂದು ವಿಶ್ವಬ್ಯಾಂಕ್ ಹೇಳಿದೆ. 

ಇದರೊಂದಿಗೆ, ಭಾರತ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಸ್ಥಾನವನ್ನು ಉಳಿಸಿಕೊಳ್ಳಲಿದೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ.  2021 ರ ಹೊತ್ತಿಗೆ ಚೀನಾಗಿಂತ ಭಾರತದ ಆರ್ಥಿಕ ಬೆಳವಣಿಗೆ ದರ ಶೇ.1.5 ರಷ್ಟು ಹೆಚ್ಚಳವಾಗಿರಲಿದೆ.