ನವದೆಹಲಿ(ಫೆ.01): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮಧ್ಯಂತರ ಬಜೆಟ್ ನ್ನು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯೆಲ್ ಮಂಡಿಸಿದ್ದಾರೆ.

ಇನ್ನು ಮಧ್ಯಂತರ ಬಜೆಟ್ ನಲ್ಲಿ ಕಾರ್ಮಿಕ ವಲಯಕ್ಕೆ ಭರಪೂರ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ಪ್ರಮುಖವಾಗಿ ಅಸಂಘಟಿತ ಕಾರ್ಮಿಕ ವಲಯಕ್ಕೆ ಸಿಹಿ ಸುದ್ದಿ ನೀಡಿದೆ.

ಅಸಂಘಟಿತ ವಲಯದಲ್ಲಿರುವ ಸುಮಾರು 10 ಕೋಟಿ ಕಾರ್ಮಿಕರಿಗೆ ಉಪಯೋಗವಾಗುವ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದು, ಈ ಯೋಜನೆಯಡಿ ಪ್ರತಿ ತಿಂಗಳು 3000 ರೂ. ಪಿಂಚಣಿ ದೊರೆಯಲಿದೆ.

18 ನೇ ವಯಸ್ಸಿಗೆ ಕೆಲಸಕ್ಕೆ ಸೇರುವ ಕಾರ್ಮಿಕರು ಪ್ರತಿ ತಿಂಗಳು 55 ರೂ.ಪಾವತಿ ಮಾಡಬೇಕಾಗುತ್ತದೆ. ಅದೇ 29 ವಯಸ್ಸಿನಲ್ಲಿ ಕೆಲಸಕ್ಕೆ ಸೇರುವ ಕಾರ್ಮಿಕರು 100 ರೂ. ಪ್ರತಿ ತಿಂಗಳೂ ಪಾವತಿ ಮಾಡಬೇಕಾಗುತ್ತದೆ. 

ಈ ರೀತಿಯಾಗಿ ಪಿಂಚಣಿ ಯೋಜನೆಗೆ ಪಾವತಿ ಮಾಡಿದ ಕಾರ್ಮಿಕರಿಗೆ 60 ವರ್ಷದ ವೇಳೆಗೆ 3000 ಸಾವಿರ ರೂಪಾಯಿ ಪ್ರತಿ ತಿಂಗಳು ಪಿಂಚಣಿ ಲಭ್ಯವಾಗಲಿದೆ ಎಂದು ಪೀಯೂಷ್ ಗೋಯಲ್ ಹೇಳಿದ್ದಾರೆ. 

ಅಸಂಘಟಿತ ವಲಯದಲ್ಲಿ 60 ವರ್ಷ ದಾಟಿದ ಕಾರ್ಮಿಕರಿಗೆ ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ಘೋಷಿಸಲಾಗಿದೆ. ಇಎಸ್ ಐ ಆದಾಯ ಮಿತಿಯನ್ನು 15 ಸಾವಿರ ರೂ.ದಿಂದ 21 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. 

ಇನ್ನು ಸಂಘಟಿತ ವಲಯ ಕಾರ್ಮಿಕರಿಗೆ ಪಿಂಚಣಿ, ಮೀನುಗಾರರು, ಪಶುಸಂಗೋಪನಾ ಕ್ಷೇತ್ರದವರಿಗೆ ಶೇ.2ರಷ್ಟು ಬಡ್ಡಿ ವಿನಾಯಿತಿ ಘೋಷಿಸಲಾಗಿದೆ. ಅಲ್ಲದೇ ಕಾರ್ಮಿಕರ ಕನಿಷ್ಟ ಆದಾಯ 21 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಇದೇ ವೇಳೆ ಅಂಗನವಾಡಿ ನೌಕರರವೇತನ ಕೂಡ ಹೆಚ್ಚಳ ಮಾಡಲಾಗಿದೆ.