ನವದೆಹಲಿ[ಜೂ.11]: ವರ್ಷವೊಂದರಲ್ಲಿ 10 ಲಕ್ಷ ರು. ನಗದನ್ನು ಬ್ಯಾಂಕ್‌ ಖಾತೆಯಿಂದ ಹಿಂಪಡೆಯುವ ನಾಗರಿಕರ ಮೇಲೆ ತೆರಿಗೆ ವಿಧಿಸುವ ಸಾಧ್ಯತೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.

ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯುವ ತಂತ್ರಗಾರಿಕೆಯ ಭಾಗವಾಗಿ ಈ ಚಿಂತನೆ ಮೊಳಕೆಯೊಡೆದಿದೆ. 10 ಲಕ್ಷ ರು. ನಗದನ್ನು ವರ್ಷವೊಂದರಲ್ಲಿ ವಿತ್‌ಡ್ರಾ ಮಾಡುವ ಖಾತೆದಾರರ ಮೇಲೆ ತೆರಿಗೆ ಹೇರಿದರೆ, ನಗದು ವ್ಯವಹಾರ ತಗ್ಗುತ್ತದೆ. ಕಪ್ಪು ಹಣ ವಹಿವಾಟಿಗೆ ಹೊಡೆತ ಬೀಳುತ್ತದೆ. ಜತೆಗೆ ಡಿಜಿಟಲ್‌ ವಹಿವಾಟಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂಬ ಆಲೋಚನೆ ಇದೆ.

ಇದೇ ವೇಳೆ, ಭಾರಿ ಮೊತ್ತದ ನಗದು ವ್ಯವಹಾರಗಳಿಗೆ ಆಧಾರ್‌ ದೃಢೀಕರಣ ಕಡ್ಡಾಯಗೊಳಿಸುವ ಮತ್ತೊಂದು ಪ್ರಸ್ತಾಪವೂ ಕೇಂದ್ರ ಸರ್ಕಾರ ಮುಂದೆ ಇದೆ. ಹೀಗೆ ಮಾಡುವುದರಿಂದ ಭಾರಿ ನಗದು ವಹಿವಾಟು ನಡೆಸುವ ವ್ಯಕ್ತಿಗಳ ಹಣಕಾಸು ವ್ಯವಹಾರವನ್ನು ಆದಾಯ ತೆರಿಗೆ ರಿಟರ್ನ್‌ ಜತೆ ಹೋಲಿಕೆ ಮಾಡಲು ಸುಲಭವಾಗುತ್ತದೆ. ತನ್ಮೂಲಕ ಕಪ್ಪು ಹಣಕ್ಕೆ ಕಡಿವಾಣ ಹಾಕಲು ಸಹಾಯಕವಾಗುತ್ತದೆ ಎಂಬ ಲೆಕ್ಕಾಚಾರವಿದೆ.

ಆದರೆ ಈ ಎರಡೂ ಘೋಷಣೆಗಳನ್ನು ಜು.5ರಂದು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಸೇರ್ಪಡೆಗೊಳಿಸುತ್ತದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಈ ಕುರಿತು ಯಾವುದು ಅಂತಿಮವಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದು ದೈನಿಕವೊಂದು ವರದಿ ಮಾಡಿದೆ.

ಸದ್ಯ ಉದ್ಯೋಗ ಖಾತ್ರಿ ವೇತನ ಪಡೆಯುವ ನೌಕರರೇ ಆಧಾರ್‌ ದೃಢೀಕರಣ ನೀಡಬೇಕಾಗಿದೆ. ಆದರೆ 5 ಲಕ್ಷ ರು. ಹಣ ಹಿಂಪಡೆಯುವ ವ್ಯಕ್ತಿಗೆ ಅಂತಹ ಯಾವುದೇ ನಿಯಮ ಇಲ್ಲ. ಮತ್ತೊಂದೆಡೆ, ದೇಶದ ಯಾವುದೇ ವ್ಯಕ್ತಿ ಹಾಗೂ ಉದ್ದಿಮೆಗಳು ಕೂಡ ವಾರ್ಷಿಕ 10 ಲಕ್ಷ ರು. ಮೇಲ್ಪಟ್ಟು ಹಣವನ್ನು ನಗದು ರೂಪದಲ್ಲಿ ಹಿಂಪಡೆಯಬೇಕಾದ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.