ವಿಪ್ರೋ ಕಾರ್ಯನಿರ್ವಾಹಕ ಅಧ್ಯಕ್ಷ ರಿಶಾದ್ ಪ್ರೇಮ್‌ಜಿ ತಮ್ಮ ಸಂಬಳವನ್ನು ಸ್ವಯಂಪ್ರೇರಿತವಾಗಿ ಕಡಿತಗೊಳಿಸಿದ್ದಾರೆ.
ನವದೆಹಲಿ (ಮೇ 25, 2023): ಐಟಿ ಉದ್ಯಮದಲ್ಲಿ ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಉದ್ಯೋಗ ಕಡಿತವಾಗುತ್ತಿದೆ. ಕೋವಿಡ್ ಕಾಲದಲ್ಲಿ ಮಾತ್ರವಲ್ಲ ಈ ವರ್ಷವೂ ಉದ್ಯೋಗ ಕಡಿತ, ಸಂಬಳ ಕಡಿತ, ಸೌಲಭ್ಯ ಕಟ್ ಮುಂತಾದ ವರದಿಗಳನ್ನು ಆಗಾಗ್ಗೆ ಕೇಳುತ್ತಿರುತ್ತೀರಿ. ಸಾಮಾನ್ಯ ಉದ್ಯೋಗಿಗಳ ಸಂಬಳ ಮಾತ್ರ ಕಟ್ ಮಾಡ್ತಾರೆ ಅಥವಾ ಕೆಲಸದಿಂದ ತೆಗೆಯುತ್ತಾರೆ, ಆದ್ರೆ ಕಂಪನಿಯ ಮುಖ್ಯಸ್ಥರು, ಉನ್ನತ ಅಧಿಕಾರಿಗಳು ತಮ್ಮ ಸಂಬಳವನ್ನು ಮಾತ್ರ ಹಲವು ಪಟ್ಟು ಏರಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆಯೂ ಕೇಳಿರುತ್ತೀರ..
ಆದರೆ, ವಿಪ್ರೋ ಕಾರ್ಯನಿರ್ವಾಹಕ ಅಧ್ಯಕ್ಷ ರಿಶಾದ್ ಪ್ರೇಮ್‌ಜಿ ಅವರು 2023 ರ ಆರ್ಥಿಕ ವರ್ಷಕ್ಕೆ ತಮ್ಮ ಸಂಬಳವನ್ನು ಸ್ವಯಂಪ್ರೇರಿತವಾಗಿ ಕಡಿತಗೊಳಿಸಿದ್ದಾರೆ ಎಂದು ಅಮೆರಿಕದ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್‌ಗೆ ನೀಡಿರುವ ಇತ್ತೀಚಿನ ಫೈಲಿಂಗ್‌ನಲ್ಲಿ ತಿಳಿಸಲಾಗಿದೆ. ಅವರು ಈ ವರ್ಷ ತಮ್ಮ ಒಟ್ಟು ಸಂಬಳದ ವಾರ್ಷಿಕ ಹಣವನ್ನು 951,353 ಡಾಲರ್ ಅನ್ನು ಪಡೆಯಲಿದ್ದಾರೆ. ಇದು ಅವರ ಹಿಂದಿನ ವರ್ಷದ ಗಳಿಕೆಗಿಂತ ಸುಮಾರು 50% (867,669 ಡಾಲರ್) ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. 2022 ರಲ್ಲಿ, ಮಂಡಳಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ರಿಶಾದ್ ಪ್ರೇಮ್‌ಜೀ ಅವರ ವಾರ್ಷಿಕ ಸಂಬಳದ ಪ್ಯಾಕೇಜ್ $1,819,022 ಆಗಿತ್ತು.
ಇದನ್ನು ಓದಿ: ಈ ಕಾರಣಕ್ಕಾಗಿ 10 ನಿಮಿಷಗಳಲ್ಲಿ ಕಂಪನಿಯ ಪ್ರಮುಖ ಉದ್ಯೋಗಿ ವಜಾ: Wipro ಬಾಸ್
ಯುನೈಟೆಡ್ ಸ್ಟೇಟ್ಸ್ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್‌ಗೆ ವಿಪ್ರೋ ಲಿಮಿಟೆಡ್ ಸಲ್ಲಿಸಿದ ಫಾರ್ಮ್ 20-ಎಫ್ ಪ್ರಕಾರ, ಅವರ ಸಂಬಳವು 861,620 ಡಾಲರ್ ಸಂಬಳ ಮತ್ತು ಭತ್ಯೆ, 74,343 ಡಾಲರ್ ದೀರ್ಘಾವಧಿಯ ಪರಿಹಾರ ಪ್ರಯೋಜನಗಳನ್ನು ಮತ್ತು 15,390 ಡಾಲರ್ ಇತರ ಆದಾಯಗಳನ್ನು ಒಳಗೊಂಡಿದೆ. ಅಲ್ಲದೆ, ರಿಶಾದ್ ಪ್ರೇಮ್‌ಜಿಯವರ ಪರಿಹಾರವು ನಗದು ಬೋನಸ್ (ಅವರ ನಿಗದಿತ ಸಂಬಳದ ಭಾಗ) ಅನ್ನು ಸಹ ಒಳಗೊಂಡಿದೆ, ಆದರೆ 2023 ರ ಆರ್ಥಿಕ ವರ್ಷದಲ್ಲಿ ಅವರಿಗೆ ಯಾವುದೇ ಸ್ಟಾಕ್ ಆಯ್ಕೆಗಳನ್ನು ನೀಡಲಾಗಿಲ್ಲ.
ವಿಪ್ರೋ ಲಿಮಿಟೆಡ್‌ನ ಕಾರ್ಯಕಾರಿ ಅಧ್ಯಕ್ಷರಾಗಿ ರಿಶಾದ್ ಪ್ರೇಮ್‌ಜೀ ಅವರ ಪ್ರಸ್ತುತ 5 ವರ್ಷಗಳ ಅವಧಿಯು ಜುಲೈ 30, 2024 ರಂದು ಮುಕ್ತಾಯಗೊಳ್ಳಲಿದೆ. ರಿಶಾದ್ 2007 ರಲ್ಲಿ ವಿಪ್ರೋ ಸೇರಿದರು ಮತ್ತು 2019 ರಲ್ಲಿ ಕಾರ್ಯನಿರ್ವಾಹಕ ಅಧ್ಯಕ್ಷರಾಗುವ ಮೊದಲು ಹಲವಾರು ಪಾತ್ರಗಳಲ್ಲಿ ಕೆಲಸ ಮಾಡಿದರು. ವಿಪ್ರೋದ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ವ್ಯವಹಾರದಲ್ಲಿ ಜನರಲ್ ಮ್ಯಾನೇಜರ್ ಆಗಿ ಪ್ರಾರಂಭಿಸಿದರು, ಹೂಡಿಕೆದಾರರ ಸಂಬಂಧಗಳ ಮುಖ್ಯಸ್ಥರಾದರು ಮತ್ತು ನಂತರ ವಿಪ್ರೋದ ಸ್ಟ್ರಾಟಜಿ ಮತ್ತು ಎಂ & ಎ ಅನ್ನು ಮುನ್ನಡೆಸಿದರು ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಒಂದೇ ಸಮಯದಲ್ಲಿ 2 ಕಡೆ ಕೆಲಸ: Wipro 300 ಸಿಬ್ಬಂದಿ ವಜಾ
ಅಲ್ಲದೆ, ವಿಪ್ರೋದ ಮುಖ್ಯ ಕಾರ್ಯತಂತ್ರ ಅಧಿಕಾರಿಯಾಗಿ, ರಿಶಾದ್ ವಿಪ್ರೋ ವೆಂಚರ್ಸ್ ಅನ್ನು ಪರಿಕಲ್ಪನೆ ಮಾಡಿದರು. ಇದು ಮುಂದಿನ ಪೀಳಿಗೆಯ ಸೇವೆಗಳು ಮತ್ತು ಉತ್ಪನ್ನಗಳೊಂದಿಗೆ ವಿಪ್ರೋ ವ್ಯವಹಾರಗಳಿಗೆ ಪೂರಕವಾದ ತಂತ್ರಜ್ಞಾನಗಳು ಮತ್ತು ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆ ಮಾಡಲು 250 ಡಾಲರ್ ಮಿಲಿಯನ್ ನಿಧಿಯಾಗಿದೆ. ಅವರು ಕಂಪನಿಗೆ ಹೂಡಿಕೆದಾರರು ಮತ್ತು ಸರ್ಕಾರಿ ಸಂಬಂಧಗಳಿಗೆ ಜವಾಬ್ದಾರರೂ ಆಗಿದ್ದರು. ಜತೆಗೆ, ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ತಮ್ಮ ಪಾತ್ರದಲ್ಲಿ, ವ್ಯಾಪಾರಕ್ಕೆ ನಿರ್ದೇಶನ ಮತ್ತು ಕಾರ್ಯತಂತ್ರದ ಒಳನೋಟವನ್ನು ಒದಗಿಸಲು ರಿಶಾದ್ ವಿಪ್ರೋ ನಾಯಕತ್ವದ ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ.
2007 ರಲ್ಲಿ ವಿಪ್ರೋ ಲಿಮಿಟೆಡ್‌ಗೆ ಸೇರುವ ಮೊದಲು, ರಿಶಾದ್ ಪ್ರೇಮ್‌ಜಿ ಅವರು ಲಂಡನ್‌ನಲ್ಲಿ ಬೈನ್ ಮತ್ತು ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು. ಅಲ್ಲಿ ಗ್ರಾಹಕ ಉತ್ಪನ್ನಗಳು, ಆಟೋಮೊಬೈಲ್, ಟೆಲಿಕಾಂ ಮತ್ತು ವಿಮಾ ಉದ್ಯಮಗಳಾದ್ಯಂತ ಕಾರ್ಯಯೋಜನೆಗಳಲ್ಲಿ ಕೆಲಸ ಮಾಡಿದ್ದರು. ಅಲ್ಲದೆ, ಅವರು ಅಮೆರಿಕದಲ್ಲಿ GE ಕ್ಯಾಪಿಟಲ್‌ನೊಂದಿಗೆ ವಿಮೆ ಮತ್ತು ಗ್ರಾಹಕ ಸಾಲ ನೀಡುವ ಜಾಗದಲ್ಲಿ ಕೆಲಸ ಮಾಡಿದ್ದಾರೆ ಮತ್ತು GE ಯ ಹಣಕಾಸು ನಿರ್ವಹಣೆ ಕಾರ್ಯಕ್ರಮದ ಪದವೀಧರರಾಗಿದ್ದಾರೆ.
ಇದನ್ನೂ ಓದಿ: 15 ವರ್ಷದಿಂದ ಅನಾರೋಗ್ಯ ರಜೇಲಿದ್ರೂ ಸಂಬಳ ಜಾಸ್ತಿ ಮಾಡಿಲ್ಲ ಅಂತ ಕಂಪನಿ ವಿರುದ್ಧ ಕೇಸ್ ಹಾಕಿದ ಉದ್ಯೋಗಿ!
