ಮುಂಬೈ[ಜು.12]  ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ ತನ್ನೆಲ್ಲ ಹಿಂದಿನ ದಾಖಲೆಗಳನ್ನು ಬದಿಗೊತ್ತಿ 36,699.53 ಅಂಕ ದಾಖಲಿಸಿತು ಈ ಮೂಲಕ ಜನವರಿ 29 ರಂದು ದಾಖಲಾಗಿದ್ದ 36,443  ಅಂಕ ಹಿಂದಕ್ಕೆ ಸರಿದಿದೆ. ಇನ್ನು ನಿಫ್ಟಿ ಸಹ 11 ಸಾವಿರ ಅಂಕ ದಾಖಲಿಸಿ 150 ಅಂಕಗಳ ದಾಖಲೆಯ ಏರಿಕೆ ಕಂಡಿದೆ.

ಹಾಗಾದರೆ ಈ ಏರಿಕೆ ಹಿಂದೆ ನಿಜವಾಗಿಯೂ ಇರುವ ಕಾರಣಗಳು ಏನು? ಎಂಬುದನ್ನು ನೋಡಬೇಕಾಗುತ್ತದೆ. ಇಂದು ಬೆಳಗ್ಗೆಯಿಂದಲೇ ಟಿಸಿಎಸ್‌, ರಿಲಯನ್ಸ್‌, ಇನ್‌ಫೋಸಿಸ್‌, ಎಚ್‌ ಸಿ ಎಲ್‌ ಟೆಕ್‌, ಎಸ್‌ ಬ್ಯಾಂಕ್‌ ಶೇರುಗಳು ಉತ್ತಮ ಮುನ್ನಡೆಯನ್ನು ಕಂಡು ಅತ್ಯಂತ ಕ್ರಿಯಾಶೀಲವಾಗಿದ್ದವು.

ಏರಿಕೆಗೆ ಏನು ಕಾರಣ? 
1. ಮೊದಲನೆ ತ್ರೈಮಾಸಿಕದ ಸಕಾರಾತ್ಮಕ ವರದಿ: ಏಪ್ರಿಲ್ ಮತ್ತು ಜೂನ್ ಅವಧಿಯಲ್ಲಿ ಭಾರತದ ಕೈಗಾರಿಕಾ ಅಭಿವೃದ್ಧಿ ದರ ಅತ್ಯುತ್ತಮವಾಗಿದೆ ಎಂದು ವಿವಿಧ ಏಜೆನ್ಸಿಗಳು ವರದಿ ನೀಡಿದ್ದವು. 15 ರಿಂದ 21 ಕೀ ಸೆಕ್ಟರ್ ಗಳು ದ್ವಿಗುಣ ಲಾಭ ಮಾಡಿದ್ದು ಹೂಡಿಕೆದಾರರ ಮೇಲೆ ಪರಿಣಾಮ ಬೀರಿತು.

2. ಟಿಸಿಎಸ್ ಫಾಕ್ಟರ್: ಐಟಿ ದಿಗ್ಗಜ ಕಂಪನಿಯಲ್ಲೊಂದಾದ ಟಾಟಾ ಕಂಸಲ್ಟೆನ್ಸಿ ವರ್ಷದಿಂದ ವರ್ಷಕ್ಕೆ ಶೇ. 24 ರಷ್ಟು ಬೆಳವಣಿಗೆ ದರ ದಾಖಲಿಸಿದ್ದು ಬಂಡವಾಳ ಹೂಡಿಕೆದಾರರ ಮೇಲೆ ಪರಿಣಾಮ ಬೀರಿತು.

3. ಫ್ರಾನ್ಸ್ ಹಿಂದಿಕ್ಕಿದ ಭಾರತ:  ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿದ್ದ ಜಿಡಿಪಿ ಬೆಳವಣಿಗೆ ದರದ ಪಟ್ಟಿಯಲ್ಲಿ ಭಾರತ ವಿಶ್ವದ 6 ನೇ ಅತಿದೊಡ್ಡ ಅರ್ಥವ್ಯವಸ್ಥೆ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಫ್ರಾನ್ಸ್ ಗಿಂತ ಆರ್ಥಿಕ ಅಭಿವೃದ್ಧಿಯಲ್ಲಿ ಭಾರತವೇ ಮುಂದಿದೆ ಎಂದು ವಿಶ್ವ ಬ್ಯಾಂಕ್ ಅಧಿಕೃತವಾಗಿ ಹೇಳಿತ್ತು.

ಫ್ರಾನ್ಸ್‌ ಹಿಂದಿಕ್ಕಿದ ಭಾರತ ವಿಶ್ವದ 6ನೇ ದೊಡ್ಡ ಅರ್ಥವ್ಯವಸ್ಥೆ

4. ಅಮೆರಿಕದಲ್ಲಿ ಹೆಚ್ಚಾದ ಉದ್ಯೋಗವಕಾಶ: ಒಂದು ಹಂತದಲ್ಲಿ ಆರ್ಥಿಕ ಸಮಸ್ಯೆ ಎದುರಿಸಿದ್ದ ಅಮೆರಿಕ ಈಗ ಹೊಸದಾಗಿ 2 ಲಕ್ಷಕ್ಕಿಂತ ಅಧಿಕ ಉದ್ಯೋಗವಕಾಶಗಳನ್ನು ಕ್ರಿಯೇಟ್ ಮಾಡಿದೆ. ಪರೋಕ್ಷವಾಗಿ ಭಾರತದ ಮೇಲೂ ಇದರ ಪರಿಣಾಮ ಉಂಟಾಗಿದೆ.ಇದಲ್ಲದೇ ಆರ್ ಬಿಐ ಬಡ್ಡಿ ದರದಲ್ಲಿ ಮಾಡಿದ ಬದಲಾವಣೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆ, ವಿವಿಧ ರಾಜ್ಯಗಳಲ್ಲಿ ಎದುರಾಗಲಿರುವ ಚುನಾವಣೆ ಸಹ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿತು. ಇದು ಕೇವಲ ಒಂದು ದಿನದಲ್ಲಿ ಬಂದ ಫಲಿತಾಂಶ ಅಲ್ಲ.