ಸುಧಾ ಮೂರ್ತಿ ಹೇಳಿದ ಮನಿ ಮಂತ್ರ, ಎಮರ್ಜೆನ್ಸಿ ಫಂಡ್ ಏಕಿರಬೇಕು?

ಇನ್ಫೋಸಿಸ್ ಸಂಸ್ಥೆ ಸ್ಥಾಪಿಸಲು ನಾರಾಯಣ ಮೂರ್ತಿ ಅವರಿಗೆ ಪತ್ನಿ ಸುಧಾಮೂರ್ತಿ ಆರ್ಥಿಕ ನೆರವು ನೀಡಿದ್ದರು.ತುರ್ತು ಸಂದರ್ಭಕ್ಕೆ ನೆರವಾಗುತ್ತೆಂದು ಉಳಿತಾಯ ಮಾಡಿದ್ದ ಹಣವನ್ನು ಇದಕ್ಕೆ ನೀಡಿದ್ದರು. ಪ್ರತಿಯೊಬ್ಬರ ಜೀವನದಲ್ಲಿ ತುರ್ತುನಿಧಿ ಅಥವಾ ಎಮರ್ಜೆನ್ಸಿ ಫಂಡ್ ಏಕೆ ಅಗತ್ಯ ಎಂಬುದನ್ನು ಸುಧಾ ಮೂರ್ತಿ ತಮ್ಮದೇ ಕಥೆ ಮೂಲಕ ವಿವರಿಸಿದ್ದಾರೆ. 

Why emergency fund is important Sudha Murthy explains anu

Business Desk: ಆರ್ಥಿಕ ಸಂಕಷ್ಟಗಳು ಯಾವಾಗ, ಹೇಗೆ ಬರುತ್ತವೆ ಎಂದು ಹೇಳುವುದು ಕಷ್ಟ. ಯಾವುದೇ ಸಮಯದಲ್ಲಿ ಬೇಕಾದರೂ ಬರಬಹುದು. ಹೀಗಾಗಿ ಹಣದ ಅವಶ್ಯಕತೆ ಎದುರಾದಾಗ ನಮ್ಮ ಬಳಿ ಕೂಡಿಟ್ಟ ಒಂದಿಷ್ಟು ಹಣವಾದರೂ ಇರುವಂತೆ ನೋಡಿಕೊಳ್ಳುವುದು ಅಗತ್ಯ. ತುರ್ತು ಸಂದರ್ಭದಲ್ಲಿ ನಮ್ಮ ನೆರವಿಗೆ ಬರಲು ತುರ್ತುನಿಧಿ ಅಥವಾ ಎಮರ್ಜೆನ್ಸಿ ಫಂಡ್ ಅನ್ನು ಪ್ರತಿಯೊಬ್ಬರೂ ಹೊಂದಿರಲೇಬೇಕು. ಇದಕ್ಕಾಗಿ ಪ್ರತಿ ತಿಂಗಳು ಆದಾಯದಿಂದ ಒಂದಿಷ್ಟು ಭಾಗವನ್ನು ತುರ್ತುನಿಧಿಗಾಗಿಯೇ ಮೀಸಲಿಡೋದು ಉತ್ತಮ. ಇದು ಕಷ್ಟಕಾಲದಲ್ಲಿ ನಮ್ಮ ಕೈಹಿಡಿಯುತ್ತದೆ. ತುರ್ತುನಿಧಿ ಅನ್ನೋದು ಇಂದಿನ ಪೀಳಿಗೆಗೆ ಹೊಸ ಪದವಾಗಿರಬಹುದು. ಆದರೆ, ನಮ್ಮ ಅಜ್ಜಿ, ಅಮ್ಮಂದಿರಿಗೆ ಇದು ಹೊಸದೇನಲ್ಲ. ಭಾರತದ ಪ್ರತಿ ಮನೆಯಲ್ಲೂ ಮಹಿಳೆಯರು ತಿಂಗಳ ಖರ್ಚಿನಲ್ಲಿ ಒಂದಿಷ್ಟು ಉಳಿತಾಯ ಮಾಡಿ ಪತಿ ಅಥವಾ ಇತರ ಸದಸ್ಯರಿಗೆ ತಿಳಿಯದಂತೆ ಉಳಿತಾಯ ಮಾಡೋದು ಸಾಮಾನ್ಯ. ಹಿಂದೆಲ್ಲ ಅಡುಗೆ ಮನೆಯ ಸಾಮಾನು ಡಬ್ಬಗಳೇ ಮಹಿಳೆಯರ ಉಳಿತಾಯದ ಖಾತೆಗಳಾಗಿದ್ದವು. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ಮಹಿಳೆ ಕೂಡ ಉದ್ಯೋಗಸ್ಥೆಯಾಗಿರುವ ಕಾರಣ ಆಕೆಯೂ ಒಂದಿಷ್ಟು ದುಡಿಯುತ್ತಾಳೆ. ಆದರೆ, ದುಡಿಮೆಯಿದೆ ಎಂಬ ಕಾರಣಕ್ಕೆ ತುರ್ತು ಅಗತ್ಯಕ್ಕಾಗಿ ಒಂದಿಷ್ಟು ಉಳಿತಾಯ ಮಾಡದಿದ್ರೆ ಮುಂದೆ ತೊಂದರೆಯಾಗಬಹುದು. ಇನ್ಫೋಸಿಸ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಕೂಡ ತುರ್ತು ನಿಧಿಯ ಮಹತ್ವದ ಬಗ್ಗೆ ತಿಳಿಸಿದ್ದಾರೆ. ಹಾಗಾದ್ರೆ ಅವರೇನು ಹೇಳಿದ್ದಾರೆ?

ಸುಧಾಮೂರ್ತಿ ಅವರ ಪ್ರಕಾರ ಪ್ರತಿಯೊಬ್ಬರೂ ಅದರಲ್ಲೂ ಮಹಿಳೆಯರು ಪ್ರತಿ ತಿಂಗಳು ಒಂದಿಷ್ಟು ಹಣವನ್ನು ಉಳಿತಾಯ ಮಾಡೋದು ಅಗತ್ಯ. ಹೀಗೆ ಉಳಿತಾಯ ಮಾಡಿದ ಹಣ ತುರ್ತು ಸಂದರ್ಭಗಳಲ್ಲಿ ನೆರವಿಗೆ ಬರುತ್ತದೆ ಎನ್ನುತ್ತಾರೆ ಸುಧಾಮೂರ್ತಿ. ಈ ಎಮರ್ಜೆನ್ಸಿ ಫಂಡ್ ಏಕೆ ಮುಖ್ಯ ಎಂಬುದರ ಬಗ್ಗೆ ಸುಧಾಮೂರ್ತಿ ಅವರು ತಮ್ಮದೇ ಬದುಕಿನ ಕಥೆಯನ್ನು ಹೇಳಿದ್ದಾರೆ. ಸುಧಾಮೂರ್ತಿ ಅವರು ಮದುವೆಯಾದ ಸಂದರ್ಭದಲ್ಲಿ ಅವರ ತಾಯಿ ಒಂದು ಕಿವಿಮಾತು ಹೇಳಿದ್ದರಂತೆ. ಅದೇನೆಂದರೆ ಪ್ರತಿ ತಿಂಗಳು ನೀನು ಒಂದಿಷ್ಟು ಹಣವನ್ನು ಉಳಿತಾಯ ಮಾಡಬೇಕು. ಹಾಗೆಯೇ ಆ ಹಣವನ್ನು ಸೀರೆ, ಚಿನ್ನ ಅಥವಾ ಇನ್ಯಾವುದೇ ವಸ್ತುಗಳನ್ನು ಖರೀದಿಸಲು ಬಳಸಬಾರದು. ಬದಲಿಗೆ ಈ ಹಣವನ್ನು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸುವಂತೆ ಸಲಹೆ ನೀಡಿದ್ದರು. 

ಅಪ್ಪ ನೆಟ್ಟ ಆಲದ ಮರಕ್ಕೆ ಜೋತು ಬೀಳದ ರೋಹನ್ ಮೂರ್ತಿ; ಇನ್ಫೋಸಿಸ್ ಬಿಟ್ಟು ಬೇರೆ ಕಂಪನಿ ಸ್ಥಾಪಿಸಿದ್ದು ಏಕೆ?

ಸುಧಾಮೂರ್ತಿ ಅವರು ಅಮ್ಮನ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರಂತೆ. ಪ್ರತಿ ತಿಂಗಳು ತನ್ನ ಸಂಬಳದಲ್ಲಿ ಹಾಗೂ ಪತಿ ನಾರಾಯಣ ಮೂರ್ತಿ ಅವರ ಹಣದಿಂದಲೂ ಒಂದಿಷ್ಟು ಭಾಗವನ್ನು ಉಳಿತಾಯ ಮಾಡುತ್ತಿದ್ದರಂತೆ. ಆದರೆ, ಈ ವಿಚಾರ ನಾರಾಯಣ ಮೂರ್ತಿ ಅವರಿಗೆ ಹೇಳಿರಲಿಲ್ಲ. ಈ ರೀತಿ ಸುಧಾಮೂರ್ತಿ ಪ್ರತಿ ತಿಂಗಳು ಉಳಿತಾಯ ಮಾಡಿದ ಹಣವೇ ಮುಂದೆ ಇನ್ಫೋಸಿಸ್ ಎಂಬ ಐಟಿ ದಿಗ್ಗಜ ಕಂಪನಿಯ ಸ್ಥಾಪನೆಗೆ ಅಡಿಪಾಯಿತು ಎಂಬ ವಿಚಾರವನ್ನು ಸುಧಾ ಮೂರ್ತಿ ತಿಳಿಸಿದ್ದಾರೆ.

ಪತಿ ನಾರಾಯಣ ಮೂರ್ತಿ ಸಾಫ್ಟ್ ವೇರ್ ಕ್ರಾಂತಿ ಬಗ್ಗೆ ವಿವರಿಸಿದಾಗ ಸುಧಾಮೂರ್ತಿ ಅವರು ತಾವು ಉಳಿತಾಯ ಮಾಡಿದ ಹಣವನ್ನೇ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ತುರ್ತು ಅಗತ್ಯ ಏನಿತ್ತು ಎಂಬ ಪ್ರಶ್ನೆ ಏಳಬಹುದು. ಆದರೆ, ಆ ಸಮಯದಲ್ಲಿ ನಾರಾಯಣ ಮೂರ್ತಿ ಅವರ ಕನಸಿಗೆ ಬೆಂಬಲ ನೀಡುವುದು ಅಗತ್ಯವಾಗಿತ್ತು ಎನ್ನುತ್ತಾರೆ ಸುಧಾಮೂರ್ತಿ. ಅವರ ಮೇಲೆ ಭರವಸೆಯಿತ್ತು. ಅವರು ಕಠಿಣ ಪರಿಶ್ರಮ ಪಡುತ್ತಾರೆ ಎಂಬುದು ತಿಳಿದಿತ್ತು. ಹೀಗಾಗಿ ಆ ಸಂದರ್ಭ ತುರ್ತು ಆಗಿತ್ತು. ಅವರು ಈ ಕಾರ್ಯದಲ್ಲಿ ಯಶಸ್ಸು ಸಾಧಿಸುತ್ತಾರೋ ಅಥವಾ ವಿಫಲರಾಗುತ್ತಾರೋ ಎಂಬುದು ಗೊತ್ತಿರಲಿಲ್ಲ. ಆದರೆ, ಅಂದು ನಾನು ಹಣ ನೀಡದಿದ್ದರೆ ಅವರು ಜೀವನಪರ್ಯಂತ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಕೊರಗಬೇಕಿತ್ತು. ಈ ಕೊರಗು ಅನ್ನೋದು ಸೋಲಿಗಿಂತಲೂ ಭಯಾನಕವಾದದ್ದು ಎನ್ನುತ್ತಾರೆ ಸುಧಾ ಮೂರ್ತಿ. 

ಭಾರತದ ಮೊದಲ ಖಾಸಗಿ ಗಿರಿಧಾಮ ಲವಾಸಾ ಖರೀದಿಸಿದ ಮುಂಬೈ ಉದ್ಯಮಿ; ಯಾರು ಈ ಅಜಯ್ ಹರಿನಾಥ್ ಸಿಂಗ್?

ಒಟ್ಟಾರೆ ಸುಧಾಮೂರ್ತಿ ಅವರು ತುರ್ತು ಸಂದರ್ಭಕ್ಕೆ ನೆರವಾಗುತ್ತದೆ ಎಂದು ಕೂಡಿಟ್ಟ ಹಣ ಇಂದು ಇನ್ಫೋಸಿಸ್ ಅಂತಹ ಬೃಹತ್ ಸಂಸ್ಥೆಯ ಹುಟ್ಟಿಗೆ ನೆರವಾಯಿತು. ಹೀಗಾಗಿ ಪ್ರತಿಯೊಬ್ಬರೂ ತಿಂಗಳ ಆದಾಯದಲ್ಲಿ ಒಂದಿಷ್ಟು ಹಣವನ್ನು ತುರ್ತು ಸಂದರ್ಭಕ್ಕೆಂದು ಎತ್ತಿಡೋದು ಅಗತ್ಯ. 

Latest Videos
Follow Us:
Download App:
  • android
  • ios