*21 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾದ ಸಗಟು ಹಣದುಬ್ಬರ* ಅಕ್ಟೋಬರ್ ನಲ್ಲಿ ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಶೇ. 8.39*ಸತತ ಎರಡು ತಿಂಗಳಿಂದ ಎರಡಂಕಿಗಿಂತ ಕೆಳಗಿನ ಮಟ್ಟಕ್ಕೆ ಇಳಿಕೆಯಾದ ಸಗಟು ಹಣದುಬ್ಬರ 

ನವದೆಹಲಿ (ಡಿ.14): ಭಾರತದ ಸಗಟು ಹಣದುಬ್ಬರ (ಡಬ್ಲ್ಯುಪಿಐ) ನವೆಂಬರ್ ತಿಂಗಳಲ್ಲಿ 21 ತಿಂಗಳ ಕನಿಷ್ಠ ಮಟ್ಟ ಶೇ.5.85ಕ್ಕೆ ಇಳಿಕೆಯಾಗಿದೆ. ಈ ಮೂಲಕ ಸತತ ಎರಡನೆ ತಿಂಗಳು ಎರಡಂಕಿಗಿಂತ ಕೆಳಗಿನ ಮಟ್ಟಕ್ಕೆ ಇಳಿಕೆಯಾಗಿದೆ. ಅಕ್ಟೋಬರ್ ನಲ್ಲಿ ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಶೇ. 8.39ರಷ್ಟಿತ್ತು. ಇನ್ನು 2021ರ ನವೆಂಬರ್ ನಲ್ಲಿ ಶೇ.14.87ರಷ್ಟಿತ್ತು. ಸಗಟು ಬೆಲೆ ಸೂಚ್ಯಂಕ ಸಗಟು ಉದ್ಯಮಗಳು ಮಾರಾಟ ಮಾಡುವ ಹಾಗೂ ಇತರ ಉದ್ಯಮಗಳ ಜೊತೆಗೆ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ನಡೆಸುವ ವಸ್ತುಗಳು ಅಥವಾ ಸರಕುಗಳ ಬೆಲೆಯನ್ನು ಆಧರಿಸಿದೆ. ಅಕ್ಟೋಬರ್ ನಲ್ಲಿ ಕೂಡ ಸಗಟು ಹಣದುಬ್ಬರ 19 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಶೇ.8.39ರಷ್ಟಿತ್ತು. ಇದು 2021 ರ ಮಾರ್ಚ್ ಬಳಿಕ ಮೊದಲ ಬಾರಿಗೆ ಸಗಟು ಹಣದುಬ್ಬರ ಒಂದು ಅಂಕೆಗೆ ಇಳಿಕೆಯಾಗಿರೋದು. ಅಂದರೆ ಸತತ 19 ತಿಂಗಳ ಕಾಲ ಶೇ.10ಕ್ಕಿಂತ ಹೆಚ್ಚಿತ್ತು. ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರ ಸೆಪ್ಟೆಂಬರ್ ನಲ್ಲಿ ಶೇ.10.7ರಷ್ಟಿತ್ತು. ಇನ್ನು ಆಗಸ್ಟ್ ನಲ್ಲಿ ಇದು ಶೇ.12.41ರಷ್ಟಿತ್ತು.

ಆಹಾರ ಪದಾರ್ಥಗಳು, ಜವಳಿ, ರಾಸಾಯನಿಕ ಮತ್ತು ಅದರ ಉತ್ಪನ್ನಗಳು ಹಾಗೂ ಲೋಹಗಳ ಬೆಲೆಗಳಲ್ಲಿ ಇಳಿಕೆಯಾಗಿರುವುದು ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಇಳಿಕೆಯಾಗಲು ಮುಖ್ಯ ಕಾರಣವಾಗಿದೆ ಎಂದು ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ. ಕಳೆದ ಸಾಲಿಗೆ ಹೋಲಿಸಿದ್ರೆ ಈ ವರ್ಷ ತರಕಾರಿ ಬೆಲೆಯಲ್ಲಿ ಶೇ.20.8ರಷ್ಟು ಇಳಿಕೆ ಕಂಡುಬಂದಿದೆ. ಈರುಳ್ಳಿ ಬೆಲೆ ಶೇ.19.19ರಷ್ಟು ಇಳಿಮುಖ ಕಂಡಿದೆ ಎಂದು ಸಚಿವಾಲಯ ಹೇಳಿದೆ.
ಇನ್ನು ಸಗಟು ಆಹಾರ ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಕ್ಟೋಬರ್ ನಲ್ಲಿ ಶೇ.6.48ರಷ್ಟಿದ್ದು, ನವೆಂಬರ್ ತಿಂಗಳಲ್ಲಿ ಶೇ.2.7ಕ್ಕೆ ಇಳಿಕೆಯಾಗಿದೆ. ಇಂಧನ ಮತ್ತು ವಿದ್ಯುತ್ ವಲಯದ ಹಣದುಬ್ಬರ ಕಳೆದ ವರ್ಷಕ್ಕಿಂತ ಶೇ.17.35ರಷ್ಟು ಹೆಚ್ಚಿದೆ. ಕಚ್ಚಾ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲದ ಹಣದುಬ್ಬರ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ನವೆಂಬರ್ ನಲ್ಲಿ ಶೇ.48.23ರಷ್ಟಿತ್ತು. 

ಎಸ್ ಬಿಐ ಗ್ರಾಹಕರಿಗೆ ಸಿಹಿಸುದ್ದಿ; ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಳ

ಚಿಲ್ಲರೆ ಹಣದುಬ್ಬರ ಕೂಡ ಇಳಿಕೆ
ನವೆಂಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಕೂಡ ಶೇ.5.88ಕ್ಕೆಇಳಿಕೆ ಕಂಡಿದೆ. ಈ ಮೂಲಕ ಆರ್ ಬಿಐ ಸಹನ ಮಟ್ಟಕ್ಕಿಂತ ಕೆಳಗೆ ಬಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ನವೆಂಬರ್ ನಲ್ಲಿ ಹಣದುಬ್ಬರ ಶೇ.6.09ಕ್ಕೆ ಇಳಿಕೆಯಾಗಿದ್ರೆ, ನಗರ ಪ್ರದೇಶಗಳಲ್ಲಿ ಶೇ.5.68ಕ್ಕೆ ತಗ್ಗಿದೆ. ಬೆಲೆಗಳಲ್ಲಿ ಈ ರೀತಿ ಇಳಿಕೆಯಾಗುತ್ತಿರೋದು ಇದು ಸತತ ಎರಡನೇ ಬಾರಿಯಾಗಿದೆ. ಅಕ್ಟೋಬರ್ ನಲ್ಲಿ ಕೂಡ ಚಿಲ್ಲರೆ ಹಣದುಬ್ಬರ ಶೇ. 6.77ಕ್ಕೆ ಇಳಿಕೆ ಕಂಡಿತ್ತು. ಸೆಪ್ಟೆಂಬರ್ ನಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಐದು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಶೇ.7.41ರಷ್ಟಿತ್ತು.ಚಿಲ್ಲರೆ ಹಣದುಬ್ಬರ ಮೇನಲ್ಲಿ ಶೇ. 7.04ರಷ್ಟಿದ್ದರೆ, ಜೂನ್ ನಲ್ಲಿ ಶೇ.7.01ಕ್ಕೆ ಇಳಿಕೆಯಾಗಿತ್ತು. ಜುಲೈನಲ್ಲಿ ಕೂಡ ಇಳಿಕೆಯಾಗಿ ಶೇ.6.71ರಷ್ಟಿತ್ತು. ಆದರೆ, ಆಗಸ್ಟ್ ನಲ್ಲಿ ಶೇ.7ಕ್ಕೆ ಏರಿಕೆ ಕಂಡಿತ್ತು. ಭಾರತದ ಕೈಗಾರಿಕ ಉತ್ಪಾದನೆ ಅಕ್ಟೋಬರ್ ನಲ್ಲಿ ಶೇ.4ಕ್ಕೆ ಕುಸಿತ ಕಂಡಿತ್ತು. ಇದಕ್ಕೆ ಮುಖ್ಯಕಾರಣ ಉತ್ಪಾದನಾ ವಲಯದ ಬೆಳವಣಿಗೆಯಲ್ಲಿ ಇಳಿಕೆ. ಗಣಿಗಾರಿಕೆ ಹಾಗೂ ವಿದ್ಯುತ್ ಉತ್ಪಾದನೆಯಲ್ಲಿ ಕೂಡ ಪ್ರಗತಿ ತಗ್ಗಿದೆ.

ಆಹಾರ ಹಣದುಬ್ಬರ ಇಳಿಕೆ
ಗ್ರಾಹಕ ಆಹಾರ ಬೆಲೆ ಸೂಚ್ಯಂಕ ನವೆಂಬರ್ ನಲ್ಲಿ ಶೇ.4.67ಕ್ಕೆ ತಗ್ಗಿದೆ. ಅಕ್ಟೋಬರ್ ನಲ್ಲಿ ಇದು ಶೇ.7.01ರಷ್ಟಿತ್ತು. ಇನ್ನು ಸೆಪ್ಟೆಂಬರ್ ನಲ್ಲಿ ಆಹಾರ ಹಣದುಬ್ಬರ (Food Inflation) ಶೇ.8.60ರಷ್ಟಿತ್ತು.

ಆದಾಯ ತೆರಿಗೆ ವಿನಾಯ್ತಿ 5 ಲಕ್ಷಕ್ಕೆ ಹೆಚ್ಚಳ..? ಕೇಂದ್ರ ಬಜೆಟ್‌ನಲ್ಲಿ ಮಹತ್ವದ ಘೋಷಣೆ ಸಾಧ್ಯತೆ

ಪ್ರಸಕ್ತ ಹಣಕಾಸು ವರ್ಷದ ಕೊನೆಯವರೆಗೂ (ಮಾರ್ಚ್‌ ಅಂತ್ಯ) ಹಣದುಬ್ಬರ ಶೇ.6.7ರಷ್ಟುಇರುವ ಸಾಧ್ಯತೆಯಿದ್ದು, ದೇಶದ ಸಮಗ್ರ ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಬೆಳವಣಿಗೆ ದರ ಶೇ.6.8ರಷ್ಟುಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.