ಸ್ವಂತಕ್ಕಿಂತ ಬಾಡಿಗೆ ಮನೆಯೇ ವಾಸಿ, ಜೆರೋಧಾ ಸಹಸಂಸ್ಥಾಪಕ ನಿಖಿಲ್ ಕಾಮತ್ ಹೀಗ್ಯಾಕೆ ಅಂದ್ರು?
ಜೆರೋಧಾ ಸಹಸಂಸ್ಥಾಪಕ ನಿಖಿಲ್ ಕಾಮತ್ ಬಳಿ ಕೋಟಿಗಟ್ಟಲೆ ಸಂಪತ್ತಿದೆ. ಆದ್ರೂ ಸ್ವಂತ ಮನೆಯಿಲ್ಲ. ಬಾಡಿಗೆ ಮನೆಯೇ ಬೆಸ್ಟ್ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿರುವ ನಿಖಿಲ್ ಕಾಮತ್, ಸ್ವಂತ ಮನೆ ಖರೀದಿ ಆರ್ಥಿಕವಾಗಿ ಲಾಭದಾಯಕವಲ್ಲ ಎಂದಿದ್ದಾರೆ.
ಬೆಂಗಳೂರು (ಫೆ. 28): ಬಹುತೇಕರ ಜೀವನದ ಅತೀದೊಡ್ಡ ಕನಸೆಂದ್ರೆ ಸ್ವಂತ ಗೂಡು ಕಟ್ಟಿಕೊಳ್ಳುವುದು. ಚಿಕ್ಕದಾದರೂ ಅಡ್ಡಿಯಿಲ್ಲ, ಸ್ವಂತದೆನ್ನುವ ಮನೆಯೊಂದು ಬೇಕೆಂಬ ಬಯಕೆ ಸಾಮಾನ್ವಾಗಿ ಎಲ್ಲರಿಗೂ ಇದ್ದೇಇರುತ್ತದೆ. ಇದಕ್ಕಾಗಿಯೇ ಕೂಡಿಟ್ಟ ಎಲ್ಲ ಹಣವನ್ನು ಒಟ್ಟುಗೂಡಿಸಿ ಬೆಂಗಳೂರಿನಂತಹ ಮಹಾನಗರದಲ್ಲಿ ಮನೆ ಖರೀದಿಸಲು ಮುಂದಾಗುತ್ತಿರೋರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸ್ವಂತ ಮನೆ ಖರೀದಿ ಅಥವಾ ಕಟ್ಟಿಸೋದ್ರಿಂದ ಹಣವನ್ನು ಹೂಡಿಕೆ ಮಾಡಿದಂತೆ ಆಗುತ್ತದೆ ಎಂಬುದು ಬಹುತೇಕ ಲೆಕ್ಕಾಚಾರ. ಆದರೆ, ದೇಶದ ಅತೀದೊಡ್ಡ ಸ್ಟಾಕ್ ಬ್ರೋಕರೇಜ್ ಸಂಸ್ಥೆ ಜೆರೋಧಾ ಸಹಸಂಸ್ಥಾಪಕ ನಿಖಿಲ್ ಕಾಮತ್ ಅವರ ಪ್ರಕಾರ ಸ್ವಂತ ಮನೆಗಿಂತ ಬಾಡಿಗೆ ಮನೆಯೇ ಬೆಸ್ಟ್. ಷೇರು ಮಾರುಕಟ್ಟೆಯಲ್ಲಿ ಹಣ ಬಿತ್ತಿ, ಬೆಳೆ ತೆಗೆಯೋದರಲ್ಲಿ ಪರಿಣಿತರಾಗಿರುವ ನಿಖಿಲ್ ಕಾಮತ್ ಇಂಥ ಮಾತು ಹೇಳ್ತಾರೆ ಅಂದ್ರೆ ಅದರಲ್ಲಿ ಏನೋ ಲಾಜಿಕ್ ಇದ್ದೇ ಇರುತ್ತದೆ. ಈ ವಿಚಾರದಲ್ಲೂ ನಿಖಿಲ್ ಕಾಮತ್ ಲಾಭ-ನಷ್ಟದ ಲೆಕ್ಕಾಚಾರವನ್ನೇ ಆಧಾರವಾಗಿಟ್ಟುಕೊಂಡು ಮಾತನಾಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಪರ-ವಿರೋಧ ವಾದಗಳು ಮಂಡನೆಯಾಗುತ್ತಿವೆ.
ಸ್ವಂತ ಮನೆ ಕಟ್ಟೋದು ಅಥವಾ ಖರೀದಿಸೋದಕ್ಕಿಂತ ಬಾಡಿಗೆ ಮನೆಯಲ್ಲಿರೋದೇ ಆರ್ಥಿಕವಾಗಿ ಲಾಭದಾಯಕ ಎಂದು ನಿಖಿಲ್ ಕಾಮತ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ತಾನು ಕೂಡ ಸ್ವಂತ ಮನೆ ಹೊಂದಿಲ್ಲ, ಬಾಡಿಗೆ ಮನೆಯಲ್ಲೇ ವಾಸಿಸುತ್ತಿರೋದಾಗಿ ತಿಳಿಸಿದ್ದಾರೆ. ಊರಲ್ಲಿರುವ ಅಪ್ಪನ ಮನೆ ಬಿಟ್ಟರೆ ಯಾವುದೇ ಸ್ವಂತ ಮನೆ ಹೊಂದಿಲ್ಲ ಎಂಬ ಸತ್ಯವನ್ನು ನಿಖಿಲ್ ಕಾಮತ್ ಬಹಿರಂಗಪಡಿಸಿದ್ದಾರೆ. ಇನ್ನು ರಿಯಲ್ ಎಸ್ಟೇಟ್ ಮೌಲ್ಯ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ ಎಂಬ ವಿಚಾರವೇ 'ಹಾಸ್ಯಾಸ್ಪದ' ಎಂದು ನಿಖಿಲ್ ಹೇಳಿದ್ದಾರೆ. 'ಇಂದಿನ ಮೌಲ್ಯದಲ್ಲಿ ನನಗೆ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಲು ಆಸಕ್ತಿಯಿಲ್ಲ. ವೈಯಕ್ತಿಕವಾಗಿ ಹೇಳೋದಾದರೆ ನನ್ನ ಪ್ರಕಾರ ರಿಯಲ್ ಎಸ್ಟೇಟ್ ಇಂದಿನ ಮೌಲ್ಯ ಹಾಸ್ಯಾಸ್ಪದ ಹಾಗೂ ಬಡ್ಡಿದರ ಲೆಕ್ಕ ಹಾಕಿದರೆ ತುಂಬಾ ಕಡಿಮೆ ಎಂದೆನಿಸುತ್ತದೆ. ಮನೆ ಹಾಗೂ ಕಚೇರಿಗಳ ಬೆಲೆಗಳು ಈಗಿನ ಬಡ್ಡಿದರಕ್ಕೆ ಹೋಲಿಸಿದರೆ ತುಂಬಾ ದುಬಾರಿ' ಎಂದು ಪಾಡ್ ಕಾಸ್ಟ್ ವೊಂದರಲ್ಲಿ ನಿತಿನ್ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇವಲ 8000 ರೂ.ನಿಂದ ಬಿಸಿನೆಸ್ ಆರಂಭಿಸಿದ ವ್ಯಕ್ತಿ, ಈಗ ಬಿಲಿಯನೇರ್ ಮುಕೇಶ್ ಅಂಬಾನಿಗೇ ಪ್ರತಿಸ್ಪರ್ಧಿ!
ಬಾಡಿಗೆ ಮನೆಯಲ್ಲಿರುವ ನಿಖಿಲ್ ಕಾಮತ್
2023ನೇ ಹಣಕಾಸು ಸಾಲಿನಲ್ಲಿ ಜೆರೋಧಾದ ಆದಾಯ ₹ 6,875 ಕೋಟಿ. ನಿಖಿಲ್ ಕಾಮತ್ ಕಳೆದ ವರ್ಷ ವೇತನದ ರೂಪದಲ್ಲಿ 72 ಕೋಟಿ ರೂ. ಪಡೆದಿದ್ದಾರೆ. ಆದರೂ ಇವರು ಬಾಡಿಗೆ ಮನೆಯಲ್ಲೇ ವಾಸವಿದ್ದಾರೆ. ಭವಿಷ್ಯದಲ್ಲಿ ಕೂಡ ತಮಗೆ ಸ್ವಂತ ಮನೆ ಖರೀದಿಸುವ ಯೋಚನೆ ಇಲ್ಲ. ಬದಲಿಗೆ ಬಾಡಿಗೆ ಮನೆಯಲ್ಲೇ ಇರಲು ಇಚ್ಛಿಸುತ್ತೇನೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ. 'ಮುಂದಿನ ದಿನಗಳಲ್ಲಿ ಕೂಡ ನಾನು ಹಿಗೆಯೇ ಜೀವಿಸಲು ಬಯಸುತ್ತೇನೆ. ನಾನು ಹೊಂದಿರುವ ಒಂದೇ ಒಂದು ಮನೆಯೆಂದ್ರೆ ಅದು ನನ್ನ ಹೆತ್ತವರು ವಾಸಿಸುತ್ತಿದ್ದ ಮನೆ. ಅದು ಭಾವನಾತ್ಮಕ ಕಾರಣಗಳಿಂದ ನನಗ ಹೆಚ್ಚು ಹತ್ತಿರವಾಗಿದೆ' ಎಂದು ಹೇಳಿದ್ದಾರೆ.
ಉದ್ಯೋಗಿಗಳನ್ನೇ ಬೆಸ್ತು ಬೀಳಿಸಿದ ಬಾಸ್;ವೈರಲ್ ಆಯ್ತು ಜೆರೋಧ ಸಿಇಒ ಹಂಚಿಕೊಂಡ ನಕಲಿ ಪೊಲೀಸ್ ದಾಳಿ ವಿಡಿಯೋ
'ಹೂಡಿಕೆಯಿಂದ ಶೇ.10ರಷ್ಟು, ಶೇ.12ರಷ್ಟು ಹಣವನ್ನು ಗಳಿಸಲು ಸಾಧ್ಯವಾದರೆ ಸ್ವಂತ ಮನೆಯ ಅಗತ್ಯವಿಲ್ಲ. ಈ ಗಳಿಕೆ ಹಣದಲ್ಲಿ ಕೇವಲ ಶೇ.3ರಷ್ಟು ನೀಡಿದರೆ ಉತ್ತಮವಾದ ಬಾಡಿಗೆ ಮನೆ ದೊರೆಯುತ್ತದೆ. ಉದಾಹರಣೆಗೆ ಮನೆ ಖರೀದಿಗೆ ನನ್ನ ಬಜೆಟ್ 10 ರೂ. ಹಾಗೂ ಅದರ ಮೇಲೆ ನಾನು 2ರೂ. ಗಳಿಸೋದಾದ್ರೆ, ಅದೇ 12ರೂ. ಮೊತ್ತದಲ್ಲಿ ನಾನು ಮೂರು ಅಥವಾ ನಾಲ್ಕು ಅಪಾರ್ಟ್ಮೆಂಟ್ ಗಳನ್ನು ಬಾಡಿಗೆಗೆ ಪಡೆಯಬಹುದು. ಹೀಗಾಗಿ ಈ ಲೆಕ್ಕಾಚಾರ ನೋಡಿದರೆ ಮನೆ ಖರೀದಿಸೋದ್ರಲ್ಲಿ ಅರ್ಥವಿಲ್ಲ. ಏಕೆಂದ್ರೆ ನಾನು ನೀಡುತ್ತಿರುವ ಬಾಡಿಗೆ ಇಳುವಳಿಯು ಮನೆ ಖರೀದಿಗೆ ನಿಯೋಜಿಸಲಾದ ಬಂಡವಾಳಕ್ಕಿಂತ ತುಂಬಾ ಕಡಿಮೆಯಿದೆ. ಇನ್ನು ಮನೆಯಿಂದ ಬರುವ ಆದಾಯ ಕೂಡ ಕಡಿಮೆ' ಎಂದು ನಿಖಿಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.