ಉದ್ಯೋಗಿಗಳನ್ನೇ ಬೆಸ್ತು ಬೀಳಿಸಿದ ಬಾಸ್;ವೈರಲ್ ಆಯ್ತು ಜೆರೋಧ ಸಿಇಒ ಹಂಚಿಕೊಂಡ ನಕಲಿ ಪೊಲೀಸ್ ದಾಳಿ ವಿಡಿಯೋ
ಜೆರೋಧ ಸಿಇಒ ನಿತಿನ್ ಕಾಮತ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ10 ವರ್ಷಗಳ ಹಿಂದೆ ತಮ್ಮ ಬೆಂಗಳೂರು ಕಚೇರಿಗೆ ನಕಲಿ ಪೊಲೀಸ್ ದಾಳಿ ಆಯೋಜಿಸಿ ಉದ್ಯೋಗಿಗಳನ್ನು ಬೆಸ್ತು ಬೀಳಿಸಿದ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು, ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಬೆಂಗಳೂರು (ಜ.29): ಜೆರೋಧ ಸಿಇಒ ನಿತಿನ್ ಕಾಮತ್ ಇತ್ತೀಚೆಗೆ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಉದ್ಯೋಗಿಗಳ ಜೊತೆಗೆ ಮಾಡಿದ ತಮಾಷೆಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದು ಹತ್ತು ವರ್ಷಗಳ ಹಳೆಯ ವಿಡಿಯೋ ಆಗಿದ್ದು, ಇದರಲ್ಲಿ ಕಾಮತ್ ಕೆಲವು ಕನ್ನಡ ನಟರನ್ನು ಬಳಸಿಕೊಂಡು ತಮ್ಮ ಬೆಂಗಳೂರಿನ ಕಚೇರಿ ಮೇಲೆ ನಕಲಿ ಪೊಲೀಸ್ ದಾಳಿ ಆಯೋಜಿಸಿದ್ದರು. ಆದರೆ, ಈ ದಾಳಿ ನಕಲಿ ಎಂಬ ವಿಚಾರ ತಿಳಿಯದ ಉದ್ಯೋಗಿಗಳು ಆಘಾತಕ್ಕೊಳಗಾಗಿದ್ದರು. ಈ ವಿಡಿಯೋವನ್ನು ನಿತಿನ್ ಕಾಮತ್ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನರ ಗಮನ ಸೆಳೆದಿದೆ. ಅಲ್ಲದೆ, ಇದಕ್ಕೆ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಕೂಡ. ಕಾಮತ್ ಭಾನುವಾರ (ಜ.28) ಈ ವಿಡಿಯೋ ಹಂಚಿಕೊಂಡಿದ್ದು, ಕೆಲವೇ ಸಮಯದಲ್ಲಿ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗೊಳಗಾಗಿದ್ದು, 15,000ಕ್ಕೂ ಅಧಿಕ ಲೈಕ್ಸ್ ಹಾಗೂ ಅನೇಕ ಕಾಮೆಂಟ್ಸ್ ಪಡೆದಿದೆ.
ಈ ವಿಡಿಯೋ ಹಂಚಿಕೊಂಡು ಕಾಮತ್ ಹೀಗೆ ಬರೆದಿದ್ದಾರೆ -"ಈ ತಮಾಷೆಯನ್ನು ನಾವು 10 ವರ್ಷಗಳ ಹಿಂದೆ ನಡೆಸಿದ್ದೆವು.' ಈ ವಿಡಿಯೋ ಕ್ಲಿಪ್ ನಲ್ಲಿ ಕಾಮತ್,ರೋಧ ಉದ್ಯೋಗಿಗಳ ಜೊತೆಗೆ ಹೇಗೆ ತಮಾಷೆ ನಡೆಸಲು ಯೋಜನೆ ರೂಪಿಸಿದರು ಎಂಬ ಪ್ಲ್ಯಾನ್ ಅನ್ನು ಹಂತ ಹಂತವಾಗಿ ಹಂಚಿಕೊಂಡಿದ್ದಾರೆ. ಮೊದಲಿಗೆ ಅವರು ಯಾವ ಕಚೇರಿಯಲ್ಲಿ ತಮಾಷೆ ನಡೆಸಬೇಕು ಎಂಬುದನ್ನು ಮೊದಲು ಗುರುತಿಸಿದ್ದರು. ಆ ಬಳಿಕ ಅವರು ಪ್ರತಿಯೊಂದನ್ನು ದಾಖಲಿಸಲು ರಹಸ್ಯ ಕ್ಯಾಮೆರಗಳನ್ನು ಬಚ್ಚಿಟ್ಟಿದ್ದರು. ಹಾಗೆಯೇ ಕಾಮತ್ ಮೂವರು ನಕಲಿ ಪೊಲೀಸರನ್ನು ಖರೀದಿಸಿದ್ದರು. ಹಾಗೆಯೇ ದಾಳಿ ನಡೆಸಲು ಅಗತ್ಯವಾದ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು.
ನಕಲಿ ಪೊಲೀಸರು ಬೆಂಗಳೂರಿನ ಜೆರೋಧ ಕಚೇರಿ ಮೇಲೆ ದಾಳಿ ನಡೆಸಿದಾಗ ಸಿಬ್ಬಂದಿಗಳು ಒಮ್ಮೆಗೆ ಆಘಾತಕ್ಕೆ ಒಳಗಾಗಿದ್ದರು. ಏನು ನಡೆಯುತ್ತಿದೆ ಎಂಬುದೇ ಅವರಿಗೆ ಅರ್ಥವಾಗುತ್ತಿರಲಿಲ್ಲ. ಈ ವಿಡಿಯೋದುದ್ದಕ್ಕೂ ಕೆಲವರು ದಾಳಿ ಬಗ್ಗೆ ಪೊಲೀಸರ ಬಳಿ ಅನೇಕ ಪ್ರಶ್ನೆಗಳನ್ನು ಕೂಡ ಕೇಳುತ್ತಿದ್ದರು. ಇನ್ನು ಕ್ಲಿಪ್ ಕೊನೆಯಲ್ಲಿ ನಿತಿನ್ ಕಾಮತ್ ಸ್ವತಃ ತಾವೇ ಕಚೇರಿಗೆ ಭೇಟಿ ನೀಡಿ ಇದು ನಕಲಿ ದಾಳಿ ಎಂಬ ಸತ್ಯವನ್ನು ಉದ್ಯೋಗಿಗಳ ಮುಂದೆ ಬಿಚ್ಚಿಡುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸುವ ಜೊತೆಗೆ ಉದ್ಯೋಗಿಗಳನ್ನು ಅಚ್ಚರಿಯಲ್ಲಿ ಕೆಡವಿದ್ದರು.
ಈ ವಿಡಿಯೋವನ್ನು ನಿತಿನ್ ಕಾಮತ್ ಈ ಹಿಂದೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಲ್ಲದೆ, ಕೆಲವು ದಿನಗಳ ಹಿಂದೆ ಪಾಡ್ ಕಾಸ್ಟ್ ವೊಂದರಲ್ಲಿ ಕೂಡ ಈ ಬಗ್ಗೆ ಅವರು ಪ್ರಸ್ತಾಪಿಸಿದ್ದರು. 'ನಿಮ್ಮ ಕಂಪನಿ ಸ್ಥಾಪಕ ಒಬ್ಬ ವಂಚಕ. ಆತ ಓಡಿ ಹೋಗಿದ್ದಾನೆ' ಎಂದು ನಕಲಿ ಪೊಲೀಸರು ಹೇಳಿದಾಗ ಸಿಬ್ಬಂದಿಗಳ ಪ್ರತಿಕ್ರಿಯೆ ನಿಜಕ್ಕೂ ಮಜವಾಗಿತ್ತು. ಆ ದಿನ ಕಚೇರಿಯ ಅರ್ಧಕ್ಕಿಂತಲೂ ಹೆಚ್ಚಿನ ಸಿಬ್ಬಂದಿ ಅಳುತ್ತಿದ್ದರು' ಎಂದು ನಿತಿನ್ ಕಾಮತ್ ಹೇಳಿದ್ದರು.
ಕೇವಲ 8000 ರೂ.ನಿಂದ ಬಿಸಿನೆಸ್ ಆರಂಭಿಸಿದ ವ್ಯಕ್ತಿ, ಈಗ ಬಿಲಿಯನೇರ್ ಮುಕೇಶ್ ಅಂಬಾನಿಗೇ ಪ್ರತಿಸ್ಪರ್ಧಿ!
ಇನ್ನು ಈ ವಿಡಿಯೋಗೆ ಜನರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು 'ಇದು ನಿಜಕ್ಕೂ ಮಹಾನ್ ತಮಾಷೆ' ಎಂದಿದ್ದಾರೆ. ಮತ್ತೊಬ್ಬರು 'ನೀವು ನಿಜಕ್ಕೂ ಕ್ರೇಜಿ' ಎಂದಿದ್ದಾರೆ.ಇನ್ನೂ ಒಬ್ಬರು 'ಅತ್ಯುತ್ತಮ ಲೈವ್ ಕೇಸ್ ಸ್ಟಡಿ. ನಿಮ್ಮ ತಂಡವನ್ನು ಒತ್ತಡದ ಪರಿಸ್ಥಿತಿಯಲ್ಲಿಟ್ಟು ಆ ಪರಿಸ್ಥಿತಿಗೆ ಪ್ರತಿಯೊಬ್ಬರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನೋಡೋದು ನಿಜಕ್ಕೂ ಪರಿಪೂರ್ಣವಾದದ್ದು'ಎಂದು ಹೇಳಿದ್ದಾರೆ. ಮತ್ತೊಬ್ಬರು 'ತಂಡ ಕಟ್ಟುವ ಚಟುವಟಿಕೆ ಈಗ ಹೊಸ ಅಧ್ಯಾಯವನ್ನು ಒಳಗೊಂಡಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.