ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಬಿಲ್‌ಗೇಟ್ಸ್‌ ತಮ್ಮ ಮಕ್ಕಳಿಗಾಗಿ ತಮ್ಮ ಆಸ್ತಿಯಲ್ಲಿ ಶೇಕಡಾ 1 ಕ್ಕಿಂತ ಕಡಿಮೆ ಮೊತ್ತವನ್ನು ಮಾತ್ರ ಉಳಿಸುವ ಯೋಜನೆಯಲ್ಲಿದ್ದಾರೆ.ಈ ಬಗ್ಗೆ ಅವರ ಮಕ್ಕಳು ಏನೆನ್ನಬಹುದು ಎಂಬ ಬಗ್ಗೆಯೂ ಗೇಟ್ಸ್ ಮಾತನಾಡಿದ್ದಾರೆ.

ಕೆಲವರು ತಮ್ಮ ಮಕ್ಕಳು, ಮೊಮ್ಮಕ್ಕಳು, ಅವರ ಮಕ್ಕಳು ಕೂಡ ಕುಳಿತು ತಿನ್ನುವಷ್ಟು ಆಸ್ತಿ ಮಾಡಿಡುತ್ತಾರೆ. ಎಷ್ಟೇ ಆಸ್ತಿ ಇದ್ದರೂ ಹಾರುವ ಹಕ್ಕಿಗೆ ಒಂದು ಕಾಳು ಹಾಕಲು ಯೋಚನೆ ಮಾಡುವವರಿದ್ದಾರೆ. ಹೀಗಿರುವಾಗ ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಮೇಕ್ರೋಸಾಫ್ಟ್ ಸಂಸ್ಥೆಯ ಸಂಸ್ಥಾಪಕ, ಐಟಿ ದಿಗ್ಗಜ ಬಿಲ್‌ಗೇಟ್ಸ್‌ ತಮ್ಮ ಮಕ್ಕಳಿಗಾಗಿ ಬಿಟ್ಟಿರುವ ಆಸ್ತಿ ಎಷ್ಟು ಎಂದು ಕೇಳಿದ್ರೆ ನೀವು ನಿಜವಾಗ್ಲು ಅಚ್ಚರಿ ಪಡುವರಿ. ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಬಿಲ್‌ಗೇಟ್ಸ್‌ ಅವರ ನೆಟ್‌ವರ್ತ್‌ 101.2 ಬಿಲಿಯನ್ ಡಾಲರ್ ಹೀಗಿದ್ದರೂ ತನ್ನ ಆಸ್ತಿಯಲ್ಲಿ, ಶ್ರೀಮಂತಿಕೆಯಲ್ಲಿ ಕೇವಲ ಶೇಕಡಾ 1ರಷ್ಟು ಕೂಡ ಮಕ್ಕಳಿಗೆ ಉಳಿಸಿ ಹೋಗುವ ಯೋಜನೆಯಲ್ಲಿ ಬಿಲ್‌ಗೇಟ್ಸ್‌ ಇಲ್ಲ. ಇದು ಅಚ್ಚರಿ ಎನಿಸಿದರು ನಿಜ.

ರಾಜ್ ಶಮನಿ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಬಿಲ್‌ ಗೇಟ್ಸ್‌ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತನ್ನ ಮಕ್ಕಳು ತನ್ನ ಆಸ್ತಿಯಲ್ಲಿ ಶೇಕಡಾ 1ಕ್ಕಿಂತಲೂ ಕಡಿಮೆ ಮೊತ್ತವನ್ನು ಪಡೆಯಬಹುದು. ಏಕೆಂದರೆ ಇದರಿಂದ ಅವರಿಗೆ ಸಹಾಯ ಆಗಬಹುದು ಎಂದು ನಾನು ಭಾವಿಸುವುದಿಲ್ಲ, ಇದು ರಾಜವಂಶವಲ್ಲ ಎಂದು ಅವರು ಹೇಳಿದ್ದಾರೆ. ಅಂದಹಾಗೆ ಡೆಕ್ ದಿಗ್ಗಜ ಬಿಲ್‌ ಗೇಟ್ಸ್ ಅವರಿಗೆ ಒಟ್ಟು ಮೂವರು ಮಕ್ಕಳಿದ್ದಾರೆ. ಅವರಲ್ಲಿ ಮೊದಲಿಗಳು 28 ವರ್ಷದ ಜೆನಿಫರ್ ಗೇಟ್ಸ್‌, 2ನೇಯವನು 25 ವರ್ಷದ ರೋರಿ ಗೇಟ್ಸ್ ಹಾಗೂ ಮೂರನೇಯವಳು ಮಗಳು 22 ವರ್ಷದ ಫೋಬೆ ಗೇಟ್ಸ್. 

ನಾನು ಅವರಿಗೆ ತಮ್ಮದೇ ಆದ ಗಳಿಕೆ ಮತ್ತು ಯಶಸ್ಸನ್ನು ಹೊಂದಲು ಅವಕಾಶ ನೀಡಲು ಬಯಸಿದ್ದೇನೆ. ಅವರು ಕೂಡ ಮಹತ್ವಪೂರ್ಣ ವ್ಯಕ್ತಿಗಳಾಗಬೇಕು ಅವರ ಮೇಲೆ ನನಗಿದ್ದ ಅದ್ಭುತ ಅದೃಷ್ಟ ಮತ್ತು ಶ್ರೀಮಂತಿಕೆಯ ನೆರಳು ಬೀಳಬಾರದು ಎಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. ಎಂತಹ ಅದ್ಭುತವಾದ ಮಾತು ನೋಡಿ ಬಿಲ್‌ ಗೇಟ್ಸ್ ಅವರದ್ದು, ಬಹುತೇಕ ಅತೀ ಶ್ರೀಮಂತರ ಮಕ್ಕಳು ಪೋಷಕರ ಶ್ರೀಮಂತಿಕೆ ನೆರಳಲ್ಲೇ ಬೆಳೆಯುತ್ತಾರೆ. ವ್ಯವಹಾರದ ಅರಿವು ಇಲ್ಲವೆಂದಲ್ಲ, ಆದರೆ ಎಲ್ಲರಿಗೂ ಇರುವುದಿಲ್ಲ. ಆದರೆ ಬಿಲ್‌ಗೇಟ್ಸ್ ಇಲ್ಲಿ ತಮ್ಮ ಮಕ್ಕಳಿಗೆ ತಮ್ಮ ಗಳಿಕೆಯ ಕಷ್ಟದ ಅರಿವಿರಬೇಕು. ತಮ್ಮ ಮಹತ್ವದ ಅರಿವಿರಬೇಕು ತಮ್ಮ ಕಾಲ ಮೇಲೆ ತಾವೇ ನಿಲ್ಲಬೇಕು ಎಂಬುದಕ್ಕೆ ಇಂತಹದೊಂದು ನಿರ್ಧಾರ ಮಾಡಿದ್ದಾರೆ. 

ನಿಮ್ಮ ಮಗಳು ಬಡವನನ್ನು ಮದುವೆಯಾಗ್ತಾಳಾ ಅಂತ ಕೇಳಿದ್ದಕ್ಕೆ ಕುಬೇರ ಬಿಲ್‌ ಗೇಟ್ಸ್ ಹೇಳಿದ್ದೇನು‌ ನೋಡಿ!

ಇದೇ ಪಾಡ್‌ಕ್ಯಾಸ್ಟ್ ಮಾತು ಮುಂದುವರಿಸುತ್ತಾ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ತಮ್ಮ ಸಂಪತ್ತನ್ನು ನಿರ್ಮಿಸಿಕೊಂಡವರು ಬಹುಶಃ ಅದರಲ್ಲಿ ಹೆಚ್ಚಿನದನ್ನು ದಾನ ಮಾಡುವಲ್ಲಿ ಅತ್ಯಂತ ಆಸಕ್ತಿಕರರಾಗಿರುತ್ತಾರೆ ಎಂಬುದನ್ನು ಗೇಟ್ಸ್ ಇದೇ ವೇಳೆ ಒಪ್ಪಿಕೊಂಡರು. ವಿಭಿನ್ನ ಕುಟುಂಬಗಳು ಪರಿಸ್ಥಿತಿಯನ್ನು ವಿಭಿನ್ನವಾಗಿ ನೋಡುತ್ತವೆ ಎಂದು ಹೇಳುವ ಮೂಲಕ ಬಿಲ್‌ಗೇಟ್ಸ್ ಗಮನ ಸೆಳೆದಿದ್ದಾರೆ. 

ಮಕ್ಕಳ ಪ್ರತಿಕ್ರಿಯೆ ಏನು?
ಸಾಮಾನ್ಯವಾಗಿ ಅಪ್ಪನ, ಅಜ್ಜನ ಆಸ್ತಿಯಲ್ಲಿ ಒಂದು ಚೂರು ಹೆಚ್ಚು ಕಡಿಮೆ ಆದರೂ ಮಕ್ಕಳು ಕಲ್ಲು ದೊಣ್ಣೆ ತೆಗೆದುಕೊಂಡು ಹೊಡೆದಾಡುತ್ತಾರೆ. ಕೋರ್ಟ್ ಕಚೇರಿ ಎಂದು ಅಲೆದಾಡುತ್ತಾರೆ. ಕೆಲವು ಪೋಷಕರು ಇಳಿವಯಸ್ಸಿನಲ್ಲಿ ತಮ್ಮನ್ನು ಮಕ್ಕಳು ನೋಡಿಕೊಳ್ಳದೇ ಹೋದಾಗ ತಮ್ಮನ್ನು ನೋಡಿಕೊಂಡವರಿಗೆ ಆಸ್ತಿ ನೀಡಲು ಬಯಸಿದಾಗ ಮಕ್ಕಳು ಅವರ ಕತೆಯನ್ನೇ ಮುಗಿಸಿದಂತಹ ಘಟನೆಗಳೂ ನಡೆದಿದ್ದು ಇದೆ. ಆದರೆ ಇಲ್ಲಿ ಕೋಟ್ಯಾಂತರ ಮೌಲ್ಯದ ಆಸ್ತಿ ಇದ್ದರೂ ಅದರಲ್ಲಿ ಶೇಕಡಾ ಒಂದಕ್ಕಿಂತಲೂ ಕಡಿಮ ಪಾಲನ್ನು ಮಕ್ಕಳಿಗೆ ಕೊಡುತ್ತಾರೆ ಎಂದಾಗ ಬಿಲ್‌ ಗೇಟ್ಸ್ ಮಕ್ಕಳ ಪ್ರತಿಕ್ರಿಯೆ ಹೇಗಿದ್ದಿರಬಹುದು. ಇದನ್ನೇ ರಾಜ್ ಶಾಮನಿ ಅವರು ಬಿಲ್‌ಗೇಟ್ಸ್‌ ಅವರ ಬಳಿ ಕೇಳಿದ್ದಾರೆ. ಅಪ್ಪನ ಈ ನಿರ್ಧಾರಕ್ಕೆ ಮಕ್ಕಳು ಎಂದಾದರೂ ನಿರಾಶೆ ವ್ಯಕ್ತಪಡಿಸಿದ್ದಾರೆಯೇ ಎಂದು ಕೇಳಿದಾಗ, ಗೇಟ್ಸ್ ನಿಮ್ಮ ಮಕ್ಕಳು, ನೀವು ಅವರಿಗೆ ನೀಡುವ ಬೆಂಬಲ ಮತ್ತು ಅವರ ಮೇಲಿನ ನಿಮ್ಮ ಪ್ರೀತಿಯ ಬಗ್ಗೆ ಎಂದಿಗೂ ಗೊಂದಲಕ್ಕೊಳಗಾಗಬಾರದು ಎಂದು ನೀವು ಬಯಸುತ್ತೀರಿ ಎಂದು ಉತ್ತರಿಸಿದ್ದಾರೆ. 

ಹಾಗಾಗಿ ನೀವು ಅವರೆಲ್ಲರನ್ನೂ ಸಮಾನವಾಗಿ ಪರಿಗಣಿಸುತ್ತೀರಿ ಮತ್ತು ನೀವು ಅವರಿಗೆ ಅದ್ಭುತ ಅವಕಾಶಗಳನ್ನು ನೀಡುತ್ತೀರಿ ಎಂಬ ನಿಮ್ಮ ತತ್ವಶಾಸ್ತ್ರದ ಬಗ್ಗೆ ಮೊದಲೇ ಅವರಿಗೆ ವಿವರಿಸಬೇಕೆಂದು ನಾನು ಭಾವಿಸುತ್ತೇನೆ. ಆದರೆ ಈ ಸಂಪನ್ಮೂಲಗಳಿಗೆ ಅತ್ಯುನ್ನತ ವರಸುದಾರ ಎಂದರೆ ಗೇಟ್ಸ್ ಪ್ರತಿಷ್ಠಾನದ ಮೂಲಕ ಅಗತ್ಯವಿರುವವರಿಗೆ ಹಿಂತಿರುಗುವುದು ಎಂದು ಅವರು ವಿವರಿಸಿದ್ದಾರೆ. ತಮ್ಮ ಮಕ್ಕಳು ಗೇಟ್ಸ್‌ ಪ್ರತಿಷ್ಠಾನದ ಯಶಸ್ಸನ್ನು ನೋಡಿದ್ದಾರೆ ಹಾಗೂ ಅದು ಮಾಡುತ್ತಿರುವ ಕೆಲಸದ ಬಗ್ಗೆ ಅವರು ತುಂಬಾ ಹೆಮ್ಮೆ ಪಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ ಗೇಟ್ಸ್. 

ಶ್ರೀಮಂತನಾದ ಬಳಿಕವೂ ಬಿಲ್ ಗೇಟ್ಸ್ 80 ಗಂಟೆ ಕೆಲಸ, ಹೆಚ್ಚಾಗುತ್ತಾ ಐಟಿ ಕೆಲಸ ಸಮಯ?

ಕೆಲವರು ತಮ್ಮನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳದೇ ಹೋದರೂ ಪರವಾಗಿಲ್ಲ, ಮಕ್ಕಳ ಹೊರತಾಗಿ ಬೇರೆ ಯಾರಿಗೂ ಪುಟ್ಟ ಪಾಲನ್ನು ದಾನ ಮಾಡಲು ಬಯಸುವುದಿಲ್ಲ, ಕರುಳ ಕುಡಿಗಳ ಮೇಲೆ ಭಾರತೀಯರಿಗೆ ಇರುವ ವ್ಯಾಮೋಹ ಅಂತಹದ್ದು, ಆದರೆ ಬಿಲ್‌ಗೇಟ್ಸ್ ಅವರು ಮಕ್ಕಳಿಗೆ ಹಣದ ಬದಲು ಹಣ ಮಾಡುವ ಅವಕಾಶವನ್ನು ನೀಡಿದ್ದಾರೆ. ಜೊತೆಗೆ ತಮ್ಮ ಶ್ರೀಮಂತಿಕೆಯ ನೆರಳನ್ನು ಅವರಿಗೆ ತಾಕಲು ಬಿಡದೇ ಅವರು ಅವರದ್ದೇ ಸ್ವಂತ ಬದುಕು ಕಟ್ಟಿಕೊಳ್ಳುವಂತೆ ಮಾಡಿದ್ದಾರೆ. ಮಕ್ಕಳನ್ನು ಬಾಲ್ಯದಿಂದಲೂ ಅವರು ಬೆಳೆಸಿದ ರೀತಿಯಿಂದಾಗಿಯೇ ಇಂದು ಯಾವುದೇ ಭಯ ಭೀತಿ ಇಲ್ಲದೇ ಬಿಲ್ ಗೇಟ್ಸ್ ತಮ್ಮ ಪ್ರಚಂಡ ಆಸ್ತಿಯನ್ನು ದಾನಕಾರ್ಯಕ್ಕೆ ಮೀಸಲಿಟ್ಟಿದ್ದಾರೆ. ಒಟ್ಟಿನಲ್ಲಿ ನಾವು ಏನನ್ನೂ ಬಿತ್ತುತ್ತೇವೆಯೋ ಅದನ್ನೇ ಬೆಳೆಯುತ್ತೇವೆ ಎಂಬುದಕ್ಕೆ ಬಿಲ್‌ ಗೇಟ್ಸ್ ಉದಾಹರಣೆ, ಅವರಿಂದ ಇಂದಿನ ಭಾರತೀಯ ಪೋಷಕರು, ಮಕ್ಕಳು ಕಲಿಯುವುದು ಸಾಕಷ್ಟು ಇದೆ. ಇದರ ಬಗ್ಗೆ ನೀವೇನಂತಿರಿ...