ITR: ತೆರಿಗೆದಾರರಿಗೆ ಹೊಸ ಆಯ್ಕೆ ನೀಡಿದ ಆದಾಯ ತೆರಿಗೆ ಇಲಾಖೆ; ಏನಿದು'ಡಿಸ್ಕಾರ್ಡ್ ರಿಟರ್ನ್'? ಸಲ್ಲಿಕೆ ಹೇಗೆ?
ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ನಲ್ಲಿ ತೆರಿಗೆದಾರರಿಗೆ 'ಡಿಸ್ಕಾರ್ಡ್ ರಿಟರ್ನ್' ಎಂಬ ಹೊಸ ಆಯ್ಕೆ ನೀಡಲಾಗಿದೆ.ಇದು ಈ ಹಿಂದೆ ಸಲ್ಲಿಕೆಯಾದ, ಆದರೆ ವೆರಿಫೈ ಆಗದ ಐಟಿಆರ್ ಡಿಲೀಟ್ ಮಾಡಿ ಹೊಸ ಐಟಿಆರ್ ಸಲ್ಲಿಕೆಗೆ ಅವಕಾಶ ನೀಡುತ್ತದೆ.
Business Desk:ಆದಾಯ ತೆರಿಗೆ ಇಲಾಖೆ ತನ್ನ ವೆಬ್ ಸೈಟ್ ನಲ್ಲಿ 'ಡಿಸ್ಕಾರ್ಡ್ ರಿಟರ್ನ್' ಎಂಬ ಹೊಸ ಆಯ್ಕೆ ಪರಿಚಯಿಸಿದೆ. ಈ ಆಯ್ಕೆಯು ತೆರಿಗೆದಾರರಿಗೆ ಈ ಹಿಂದೆ ಸಲ್ಲಿಕೆ ಮಾಡಿರುವ ಪರಿಶೀಲನೆಗೊಳಪಡದ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು 'ಡಿಲೀಟ್' ಮಾಡಲು ಅವಕಾಶ ನೀಡುತ್ತದೆ. ಅಂದರೆ ಒಬ್ಬ ತೆರಿಗೆದಾರರ ಈ ಮೊದಲು ಸಲ್ಲಿಕೆ ಮಾಡಿದ ಐಟಿಆರ್ ಇನ್ನೂ ಪರಿಶೀಲನೆಗೊಳಪಡದಿದ್ದರೆ ಅದನ್ನು ಆದಾಯ ತೆರಿಗೆ ಇಲಾಖೆ ದಾಖಲೆಗಳಿಂದ ಈಗ ಡಿಲೀಟ್ ಮಾಡಬಹುದು. ಇದು ಸಲ್ಲಿಕೆ ಮಾಡಿದ ಮೂಲ ಐಟಿಆರ್ ನಲ್ಲಿನ ತಪ್ಪುಗಳನ್ನು ಸರಿಪಡಿಸಲು ಪರಿಷ್ಕೃತ ಐಟಿಆರ್ ಸಲ್ಲಿಸಬೇಕಾದ ಅಗತ್ಯವನ್ನು ತಪ್ಪಿಸುತ್ತದೆ. ಪರಿಶೀಲನೆಯಾಗದ ಐಟಿಆರ್ ತಿರಸ್ಕರಿಸಿದ ಬಳಿಕ ಹೊಸ ಐಟಿಆರ್ ಸಲ್ಲಿಕೆ ಮಾಡಬಹುದು. ಆದರೆ, ಈ ಆಯ್ಕೆ ಬಳಸಲು ಕೂಡ ನಿರ್ದಿಷ್ಟ ಷರತ್ತುಗಳಿವೆ.
ಡಿಸ್ಕಾರ್ಡ್ (Discard) ಐಟಿಆರ್ ಆಯ್ಕೆ ಅಂದ್ರೇನು?
ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ವೆಬ್ ಸೈಟ್ www.incometax.gov.in ನಲ್ಲಿ ನೀವು ನಿಮ್ಮ ಐಟಿಆರ್ ಅನ್ನು 'discard' ಮಾಡಿದ್ರೆ ಆಗ ಅದು ಆದಾಯ ತೆರಿಗೆ ಇಲಾಖೆ ದಾಖಲೆಗಳಿಂದ ಕಾಯಂ ಆಗಿ ತೆಗೆಯಲ್ಪಡುತ್ತದೆ. ಅದನ್ನು ಮರಳಿ ಹಿಂಪಡೆಯಲು ತೆರಿಗೆದಾರರಿಗೆ ಯಾವುದೇ ಅವಕಾಶವಿಲ್ಲ. ಹಾಗಾದ್ರೆ ಐಟಿಆರ್ ಡಿಸ್ಕಾರ್ಡ್ ಮಾಡೋದು ಹೇಗೆ?ಈ ಪ್ರಕ್ರಿಯೆ ತುಂಬಾ ಸರಳವಾಗಿದೆ.
*ಮೊದಲು ನೀವು ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ www.incometax.gov.in ಭೇಟಿ ನೀಡಬೇಕು.
*ಆ ಬಳಿಕ ಲಾಗಿನ್ ಆಗಿ ಹಾಗೂ e-filing ಆಯ್ಕೆಗೆ ತೆರಳಿ.
*ಅದರಡಿಯಲ್ಲಿ select Income Tax Return ಆಯ್ಕೆ ಮಾಡಿ.
*ನಂತರ e-verify ITR ಆಯ್ಕೆ ಮಾಡಿ.
*ಇಲ್ಲಿ ನಿಮಗೆ ನಿಮ್ಮ ರಿಟರ್ನ್ ಡಿಸ್ಕಾರ್ಡ್ ಮಾಡುವ ಆಯ್ಕೆ ಸಿಗುತ್ತದೆ.
ಐಟಿಆರ್ ಸಲ್ಲಿಕೆ ಮಾಡಿದ್ರೆ ಸಾಲದು ವೆರಿಫೈ ಮಾಡಿ, ಇಲ್ಲವಾದ್ರೆ ಬೀಳುತ್ತೆ 5 ಸಾವಿರ ದಂಡ: ಐಟಿ ಇಲಾಖೆ
ಯಾವ ವರ್ಷದ ಐಟಿಆರ್ ಗೆ ಈ ಆಯ್ಕೆ ಲಭ್ಯ?
ಈ ಹೊಸ ಆಯ್ಕೆ 2023ರ ಏಪ್ರಿಲ್ 1 ಅಥವಾ ಅದರ ನಂತರ ಸಲ್ಲಿಕೆ ಮಾಡಿದ ಐಟಿಆರ್ ಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂದರೆ ಇದು 2022-23ನೇ ಆರ್ಥಿಕ ಸಾಲಿಗೆ (2023-24ನೇ ಮೌಲ್ಯಮಾಪನ ವರ್ಷ) ಮಾತ್ರ ಅನ್ವಯಿಸುತ್ತದೆ. ಈ ಮೇಲೆ ವಿವರಿಸಿರುವಂತೆ ನೀವು ನಿಮ್ಮ ಐಟಿಆರ್ ಅನ್ನು ಪರಿಶೀಲನೆ ನಡೆಸದಿದ್ದರೆ (ಇ-ವೆರಿಫೈ ಅಥವಾ ಅಂಚೆ ಮೂಲಕ ಸಿಪಿಸಿ) ಮಾತ್ರ ಡಿಸ್ಕಾರ್ಡ್ ಮಾಡಬಹುದು. ಇನ್ನು ಒಂದು ವೇಳೆ ನೀವು ಐಟಿಆರ್ ವೆರಿಫಿಕೇಷನ್ ಅನ್ನು ಸಿಪಿಸಿಗೆ ಕಳುಹಿಸಿದ್ದು, ಇನ್ನೂ ತಲುಪಿಲ್ಲದಿದ್ದರೆ ಆಗ ಕೂಡ ಡಿಸ್ಕಾರ್ಡ್ ಆಯ್ಕೆ ಆರಿಸಲು ಸಾಧ್ಯವಿಲ್ಲ.
ವಿಳಂಬ ಐಟಿಆರ್ ಸಲ್ಲಿಕೆ ವೇಳೆ ದಂಡ ಪಾವತಿಸೋದು ಹೇಗೆ? ಎಲ್ಲಿ? ಇಲ್ಲಿದೆ ಮಾಹಿತಿ
ಇದು ಪರಿಷ್ಕೃತ ಐಟಿಆರ್ ಗಿಂತ ಹೇಗೆ ಭಿನ್ನ?
ಆದಾಯ ತೆರಿಗೆ ಇಲಾಖೆ ಡಿಸ್ಕಾರ್ಡ್ ಐಟಿಆರ್ ಆಯ್ಕೆ ಪರಿಚಯಿಸುವ ಮುನ್ನ ತೆರಿಗೆದಾರ ಐಟಿಆರ್ ಸಲ್ಲಿಕೆ ಮಾಡಿದ ಬಳಿಕ ಅದನ್ನು ಪರಿಶೀಲಿಸಬೇಕಿತ್ತು. ಒಂದು ವೇಳೆ ಅವರಿಗೆ ಅದರಲ್ಲಿ ತಪ್ಪಾಗಿರೋದು ಗೊತ್ತಾದರೂ ಕೂಡ ಪರಿಶೀಲನೆ ನಡೆಸಿದ ಬಳಿಕವೇ ಐಟಿಆರ್ ಪೋರ್ಟಲ್ ಗೆ ತೆರಳಿ ಟ್ಯಾಕ್ಸ್ ರಿಟರ್ನ್ ಪರಿಷ್ಕರಿಸಬೇಕಿತ್ತು. ಆದರೆ, ಡಿಸ್ಕಾರ್ಡ್ ಐಟಿಆರ್ ಹಾಗಲ್ಲ. ಇಲ್ಲಿ ವೆರಿಫೈ ಆಗದ ರಿಟರ್ನ್ ಅನ್ನು ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ನಿಂದ ಶಾಶ್ವತವಾಗಿ ತೆಗೆದು ಹಾಕಲಾಗುತ್ತದೆ. ಆ ಬಳಿಕ ತೆರಿಗೆದಾರ ಹೊಸದಾಗಿ ಇನ್ನೊಮ್ಮೆ ಐಟಿಆರ್ ಸಲ್ಲಿಕೆ ಮಾಡಬಹುದು. ಆದರೆ, ಈ ಹೊಸ ಐಟಿಆರ್ ಅನ್ನು ಪ್ರತಿವರ್ಷ ಅಂತಿಮ ಗಡುವಾದ ಜುಲೈ 31ರ ಬಳಿಕ ಸಲ್ಲಿಕೆ ಮಾಡಿದ್ರೆ ಅದನ್ನು ವಿಳಂಬ ಐಟಿಆರ್ (belated return) ಎಂದು ಪರಿಗಣಿಸಲಾಗುತ್ತದೆ.