Income Tax Return:ಡಿ.31ರೊಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸದಿದ್ರೆ ಏನೆಲ್ಲ ಸಮಸ್ಯೆಯಾಗುತ್ತೆ? ಎಷ್ಟು ದಂಡ ಬೀಳುತ್ತೆ?
*ಡಿ.31ರೊಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ವಿಫಲವಾದ್ರೆ ಇನ್ನೊಂದು ಅವಕಾಶವಿದೆ
* ಮಾರ್ಚ್ 31ರೊಳಗೆ ನೀವು ಐಟಿಆರ್ ಸಲ್ಲಿಕೆ ಮಾಡಬಹುದು
*ಡಿ. 31ರೊಳಗೆ ಸಲ್ಲಿಕೆ ಮಾಡದಿದ್ರೆ ತೆರಿಗೆದಾರ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
Business Desk: 2020-21ನೇ ಆರ್ಥಿಕ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (ITR)ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ. ಆದ್ರೆ ಐಟಿ ಫೋರ್ಟಲ್ ನಲ್ಲಿನ (Portal)ತಾಂತ್ರಿಕ ಸಮಸ್ಯೆಗಳ ಕಾರಣಕ್ಕೆ ಐಟಿಆರ್ ಫೈಲ್(ITR file) ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅನೇಕ ತೆರಿಗೆದಾರರು(Taxpayers) ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ(Income tax department) ಐಟಿಆರ್ ಸಲ್ಲಿಕೆಗಿರೋ ಅಂತಿಮ ಗಡುವು ವಿಸ್ತರಿಸೋ ಸಾಧ್ಯತೆಯಿದೆ. ಒಂದು ವೇಳೆ ತೆರಿಗೆದಾರ ಅಂತಿಮ ದಿನಾಂಕದೊಳಗೆ ಆದಾಯ ತೆರಿಗೆ ರಿಟರ್ನ್(ITR) ಸಲ್ಲಿಕೆ ಮಾಡಲು ವಿಫಲನಾದ್ರೆ ಏನಾಗುತ್ತೆ? ಇದಕ್ಕೆ ಎಷ್ಟು ದಂಡ ವಿಧಿಸಲಾಗುತ್ತೆ? ಈ ಎಲ್ಲ ಮಾಹಿತಿಗಳು ಇಲ್ಲಿವೆ.
ಡಿ.31 ಐಟಿಆರ್ ಸಲ್ಲಿಕೆಗೆ ಕೊನೆಯ ಅವಕಾಶವೇ?
ಐಟಿ ಫೋರ್ಟಲ್ ನಲ್ಲಿನ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಸದ್ಯ ಇಂಥದೊಂದು ಪ್ರಶ್ನೆ ತೆರಿಗೆದಾರರ ಮನಸ್ಸಿನಲ್ಲಿ ಮೂಡೋದು ಸಹಜ. ಆದಾಯ ತೆರಿಗೆ ರಿಟರ್ನ್(ITR) ಸಲ್ಲಿಕೆಗೆ ಸಂಬಂಧಿಸಿ ಎರಡು ದಿನಾಂಕಗಳಿರುತ್ತವೆ. ಒಂದು ನಿಗದಿತ ದಿನಾಂಕ (Due date)ಹಾಗೂ ಇನ್ನೊಂದು ಅಂತಿಮ ದಿನಾಂಕ(Last date).ಸಾಮಾನ್ಯವಾಗಿ ಈ ಹಿಂದಿನ ವರ್ಷಗಳಲ್ಲಿ ಜುಲೈ 31 ನಿಗದಿತ ದಿನಾಂಕ ಹಾಗೂ ಡಿಸೆಂಬರ್ 31 ಅಂತಿಮ ದಿನಾಂಕವಾಗಿರುತ್ತಿತ್ತು, ಆದ್ರೆ ಈ ಬಾರಿ ಹೊಸದಾಗಿ ಪ್ರಾರಂಭಿಸಿರೋ ಐಟಿ ಪೋರ್ಟಲ್ ನಲ್ಲಿ ತಾಂತ್ರಿಕ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ನಿಗದಿತ ದಿನಾಂಕವನ್ನು ಡಿಸೆಂಬರ್ 31ಕ್ಕೆ ಹಾಗೂ ಅಂತಿಮ ದಿನಾಂಕವನ್ನು ಮಾರ್ಚ್ 31ಕ್ಕೆ ವಿಸ್ತರಿಸಲಾಗಿದೆ. ಹೀಗಾಗಿ ಈ ವರ್ಷ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಡಿ.31 ಕೊನೆಯ ಅವಕಾಶವಲ್ಲ. ಒಂದು ವೇಳೆ ನಿಮಗೆ ಡಿ.31ರೊಳಗೆ ಐಟಿಆರ್ ಫೈಲ್ ಮಾಡಲು ಸಾಧ್ಯವಾಗದಿದ್ರೆ 2022ರ ಮಾರ್ಚ್ 31ರೊಳಗೆ ನೀವು ಐಟಿಆರ್ ಸಲ್ಲಿಕೆ ಮಾಡಬಹುದು.
ಡಿ.31ರೊಳಗೆ ಸಲ್ಲಿಕೆ ಮಾಡದಿದ್ರೆ ಏನೆಲ್ಲ ಸಮಸ್ಯೆಗಳಾಗುತ್ತವೆ?
2020-21ನೇ ಆರ್ಥಿಕ ಸಾಲಿನ ಐಟಿಆರ್ ಸಲ್ಲಿಕೆಗೆ ಡಿ.31 ನಿಗದಿತ ದಿನಾಂಕವಾಗಿದೆ((Due date) ಹೀಗಾಗಿ ನೀವು ಡಿ.31ರೊಳಗೆ ನೀವು ಐಟಿಆರ್ ಸಲ್ಲಿಕೆ ಮಾಡದಿದ್ರೆ ಇನ್ನೊಂದು ಅವಕಾಶವಿದ್ರು ಕೂಡ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇನಂದ್ರೆ ಈ ವರ್ಷ ನೀವು ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ನೀವು ಗಳಿಸೋ ಲಾಭಕ್ಕೆ ಸರಿಹೊಂದಿಸೋ (Setoff)ಅವಕಾಶವನ್ನು ನೀವು ಕಳೆದುಕೊಳ್ಳುತ್ತೀರಿ. ಇನ್ನು ನಿಮ್ಮ ಆದಾಯದಿಂದ ಈಗಾಗಲೇ ಹೆಚ್ಚುವರಿಯಾಗಿ ಕಡಿತಗೊಂಡ ತೆರಿಗೆಗೆ ನೀವು ಸೂಕ್ತ ದಾಖಲೆಗಳನ್ನು ಒದಗಿಸಿದ್ರೆ ಅದನ್ನು ಆದಾಯ ತೆರಿಗೆ ಇಲಾಖೆ ನಿಮಗೆ ಮರುಪಾವತಿ (Refund) ಮಾಡುತ್ತದೆ. ಆದ್ರೆ ನೀವು ಡಿ.31ರೊಳಗೆ ಐಟಿಆರ್ ಫೈಲ್ ಮಾಡದಿದ್ರೆ ನಿಮಗೆ ತೆರಿಗೆ ಮರುಪಾವತಿ ಮಾಡಲಾಗೋದಿಲ್ಲ. ಅಷ್ಟೇ ಅಲ್ಲ, ಒಂದು ವೇಳೆ ನೀವು ಈ ತನಕ ಪಾವತಿ ಮಾಡಿದ ತೆರಿಗೆ ಆದಾಯ ತೆರಿಗೆ ಇಲಾಖೆ ಲೆಕ್ಕ ಹಾಕಿದ ತೆರಿಗೆಗಿಂತ ಕಡಿಮೆ ಇದ್ರೆ ಬಾಕಿ ತೆರಿಗೆ ಪಾವತಿಸೋ ಜೊತೆಗೆ ಅದಕ್ಕೆ ಬಡ್ಡಿಯನ್ನು(Interest) ಕೂಡ ಕಟ್ಟಬೇಕಾಗುತ್ತದೆ.
ಡಿ.31ರೊಳಗೆ ಐಟಿಆರ್ ಸಲ್ಲಿಸದಿದ್ರೆ 5,000ರೂ. ದಂಡ
ನಿಗದಿತ ದಿನಾಂಕದೊಳಗೆ ಅಂದ್ರೆ ಡಿ.31ರೊಳಗೆ ಐಟಿಆರ್ ಫೈಲ್ ಮಾಡದಿದ್ರೆ 5ಸಾವಿರ ರೂ. ದಂಡ(Fine) ಪಾವತಿಸಬೇಕಾಗುತ್ತದೆ. ಆದ್ರೆ ತೆರಿಗೆಗೊಳಪಡೋ ಆದಾಯ 5ಲಕ್ಷ ರೂ. ಗಿಂತ ಹೆಚ್ಚಿದ್ರೆ ಮಾತ್ರ ಇದು ಅನ್ವಯಿಸುತ್ತದೆ. ಒಂದು ವೇಳೆ ತೆರಿಗೆಗೊಳಪಡೋ ಆದಾಯ 5ಲಕ್ಷ ರೂ.ಗಿಂತ ಕಡಿಮೆಯಿದ್ರೆ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತದೆ.
IT Return 2021: ಈ 5 ಮಾಹಿತಿಗಳನ್ನು ಉಲ್ಲೇಖಿಸದಿದ್ರೆ ತೊಂದರೆ ಗ್ಯಾರಂಟಿ!
2022ರ ಮಾರ್ಚ್ 31ರೊಳಗೆ ಸಲ್ಲಿಕೆ ಮಾಡದಿದ್ರೆ ಏನಾಗತ್ತೆ?
ವಿಸ್ತರಿಸಿದ ಅಂತಿಮ ದಿನಾಂಕದೊಳಗೆ (ಮಾ. 31) ಐಟಿಆರ್ ಫೈಲ್ ಮಾಡಲು ವಿಫಲವಾದ್ರೆ ಆದಾಯ ತೆರಿಗೆ ಇಲಾಖೆ ನೀವು ಪಾವತಿಸಬೇಕಿದ್ದ ತೆರಿಗೆಯ ಶೇ.50ರಷ್ಟು ದಂಡ (Fine)ವಿಧಿಸಬಹುದಾಗಿದೆ. ಅಷ್ಟೇ ಅಲ್ಲದೆ, ಪ್ರಸ್ತುತ ಜಾರಿಯಲ್ಲಿರೋ ಆದಾಯ ತೆರಿಗೆ ಕಾನೂನಿನ ಪ್ರಕಾರ ಕನಿಷ್ಠ 3ರಿಂದ ಗರಿಷ್ಠ 7 ವರ್ಷಗಳ ತನಕ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಆದ್ರೆ ಪಾವತಿಸಲು ಬಾಕಿಯಿರೋ ತೆರಿಗೆ 10 ಸಾವಿರ ರೂ. ಮೀರಿದ್ರೆ ಮಾತ್ರ ಇದು ಅನ್ವಯಿಸುತ್ತದೆ.