ಹರಿದ ನೋಟುಗಳು ಪರಿಸರಕ್ಕೆ ಹಾನಿಕರ. ಹೂತ್ರೂ, ಸುಟ್ಟರೂ ಹಾನಿ. ಹಾಗಾಗಿ ಆರ್ ಬಿಐ ಹೊಸ ಪ್ಲಾನ್ ಮಾಡಿದೆ. ಅದೇನು ಗೊತ್ತಾ?

ಮಾರ್ಕೆಟ್ ಇರ್ಲಿ ಇಲ್ಲ ಬಸ್, ಆಟೋ ಇರಲಿ, ಅಲ್ಲೆಲ್ಲ ಹರಿದ ನೋಟು ಓಡಾಡ್ತಿರುತ್ತದೆ. ನೋಟು ಹರಿದಿದೆ ಎಂಬುದು ಗೊತ್ತಾದ್ರೆ ಇದು ಬೇಡ, ಬೇರೆ ನೋಟು ಕೊಡಿ ಅಂತ ನಾವು ಗಲಾಟೆ ಮಾಡೋದಿದೆ. ಕೆಲವೊಮ್ಮೆ ನಾಲ್ಕೈದು ನೋಟಿನ ಮಧ್ಯೆ ಹರಿದ ನೋಟು ಬಂದ್ರೆ ಗೊತ್ತಾಗೋದಿಲ್ಲ. ಕೆಲ ಬಾರಿ ಮನೆಯಲ್ಲಿ ಇಟ್ಟ ನೋಟೇ ಹರಿದಿರುತ್ತದೆ. ಈ ನೋಟು ನೋಡ್ತಿದ್ದಂತೆ ಕೆಲವರ ಟೆನ್ಷನ್ ಹೆಚ್ಚಾಗುತ್ತೆ. ಈ ನೋಟುಗಳನ್ನು ನಾವು ಏನು ಮಾಡ್ಬೇಕು, ಆರ್ ಬಿಐ ಏನು ಮಾಡುತ್ತೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಹರಿದ ನೋಟುಗಳನ್ನು ಜನಸಾಮಾನ್ಯರು ಏನು ಮಾಡ್ಬೇಕು? : ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ಎರಡು ತುಂಡುಗಳಾಗಿ ಹರಿದ ನೋಟು (note)ಗಳನ್ನು ಕೂಡ ನೀವು ಬದಲಿಸಿಕೊಳ್ಳಬಹುದು. ಆದ್ರೆ ಹರಿದ ನೋಟಿನಲ್ಲಿ ಮಾಹಿತಿ ಮಿಸ್ ಆಗ್ಬಾರದು. ಹರಿದ ನೋಟುಗಳನ್ನು ವಿನಿಮಯ ಮಾಡಲು ಯಾವುದೇ ಫಾರ್ಮ್ ಭರ್ತಿ ಮಾಡ್ಬೇಕಾಗಿಲ್ಲ. 10 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಯಾವುದೇ ಹರಿದ, ಹಾಳಾದ ನೋಟುಗಳನ್ನು ನೀವು ಬದಲಿಸಿಕೊಳ್ಬಹುದು.

ಹರಿದ ನೋಟುಗಳನ್ನು ಎಲ್ಲಿ ಬದಲಾಯಿಸ್ಬಹುದು? : ನೀವು ಯಾವುದೇ ಸರ್ಕಾರಿ ಬ್ಯಾಂಕಿನಲ್ಲಿ ಹರಿದ ಅಥವಾ ಹಾಳಾದ ನೋಟುಗಳನ್ನು ಬದಲಾಯಿಸಬಹುದು. ಅವುಗಳನ್ನು ಖಾಸಗಿ ಬ್ಯಾಂಕುಗಳಲ್ಲಿಯೂ ವಿನಿಮಯ ಮಾಡಿಕೊಳ್ಳಬಹುದು. ನಿಮ್ಮ ಮನೆಯ ಬಳಿ ಕರೆನ್ಸಿ ವಿನಿಮಯ ಶಾಖೆ ಇದ್ದರೆ, ಅಂತಹ ನೋಟುಗಳನ್ನು ಅಲ್ಲಿಯೂ ವಿನಿಮಯ ಮಾಡಿಕೊಳ್ಳಬಹುದು. ಈ ಕೆಲಸವನ್ನು ಆರ್ಬಿಐ ಕಚೇರಿಯಲ್ಲಿಯೂ ಮಾಡಬಹುದು.

ಎಟಿಎಂ (ATM)ನಿಂದ ಹರಿದ ನೋಟು ಬಂದ್ರೆ ಏನು ಮಾಡ್ಬೇಕು? : ಎಟಿಎಂನಿಂದ ಹಣ ವಿತ್ ಡ್ರಾ ಮಾಡುವಾಗ ಹರಿದ ನೋಟು ಹೊರ ಬರುತ್ತದೆ. ಹರಿದ ನೋಟು ಹೊರ ಬಂದ ಬ್ಯಾಂಕಿನ ಶಾಖೆಗೆ (bank branch) ಹೋಗುವ ಮೂಲಕ ಅಂತಹ ನೋಟುಗಳನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳಬಹುದು.

ನೋಟು ವಿನಿಮಯಕ್ಕೆ ಶುಲ್ಕ ವಿಧಿಸ್ಬೇಕಾ? : ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಯಾವುದೇ ಶುಲ್ಕವಿಲ್ಲ. ಬ್ಯಾಂಕುಗಳು ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಮಿತಿ ನಿಗದಿಪಡಿಸಿವೆ. ನೀವು ಈ ಮಿತಿಗಿಂತ ಹೆಚ್ಚಿನ ನೋಟುಗಳನ್ನು ವಿನಿಮಯ ಮಾಡಿಕೊಂಡರೆ, ಬ್ಯಾಂಕ್ ಗೆ ಶುಲ್ಕ ಪಾವತಿಸಬೇಕಾಗುತ್ತದೆ.

ಹರಿದ ನೋಟುಗಳನ್ನು ಆರ್ ಬಿಐ ಏನು ಮಾಡುತ್ತೆ? : ಆರ್ಬಿಐನ 2024-25 ವಾರ್ಷಿಕ ವರದಿಯ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಸುಮಾರು 15000 ಟನ್ ಹರಿದ ಬ್ಯಾಂಕ್ ನೋಟುಗಳು ಅಥವಾ ಅವುಗಳಿಂದ ತಯಾರಿಸಿದ ಬ್ರಿಕೆಟ್ಗಳನ್ನು ಉತ್ಪಾದಿಸಲಾಗುತ್ತದೆ. ಇಲ್ಲಿಯವರೆಗೆ ಅವುಗಳನ್ನು ಭೂಮಿಯಲ್ಲಿ ತುಂಬುವ ಮೂಲಕ ಅಥವಾ ಸುಡುವ ಮೂಲಕ ವಿಲೇವಾರಿ ಮಾಡಲಾಗುತ್ತಿತ್ತು. ಈ ಪ್ರಕ್ರಿಯೆಯಿಂದ ಪರಿಸರಕ್ಕೆ ಹಾನಿಯಾಗ್ತಿತ್ತು. ಹರಿದ ನೋಟುಗಳನ್ನು ಮರುಬಳಕೆ ಮಾಡಲು ಆರ್ಬಿಐ ಹೊಸ ಪ್ಲಾನ್ ಮಾಡಿದೆ. ಅನುಪಯುಕ್ತ ನೋಟುಗಳನ್ನು ಈಗ ಪಾರ್ಟಿಕಲ್ ಬೋರ್ಡ್ ತಯಾರಿಸಲು ಬಳಸಲಾಗುತ್ತಿದೆ. ಇದ್ರಿಂದ ಪರಿಸರ ರಕ್ಷಣೆಯಾಗ್ತಿದೆ.

ಹರಿದ ನೋಟುಗಳನ್ನು ವಿಲೇವಾರಿ ಮಾಡಲು ಆರ್ಬಿಐ ಪರಿಸರ ಸಚಿವಾಲಯದ ಅಡಿಯಲ್ಲಿ ಒಂದು ಸಂಸ್ಥೆಯನ್ನು ನೇಮಿಸಿದೆ. ಈ ಸಂಸ್ಥೆಯು ಹಾಳಾದ, ಹರಿದ ನೋಟುಗಳ ಮರುಬಳಕೆಯ ಕುರಿತು ಅಧ್ಯಯನ ನಡೆಸಿದೆ. ಈ ನೋಟುಗಳಿಂದ ಮಾಡಿದ ಬ್ರಿಕೆಟ್ಗಳ ಗುಣಮಟ್ಟ ಉತ್ತಮವಾಗಿದ್ದು, ಮರದ ಹಲಗೆಗಳನ್ನು ಸಹ ಅದರಿಂದ ತಯಾರಿಸಬಹುದು. ಆರ್ಬಿಐ, ಸಂಸ್ಥೆಯ ಈ ಕಲ್ಪನೆ ಮತ್ತು ಸಲಹೆಯನ್ನು ಇಷ್ಟಪಟ್ಟಿದೆ. ಪಾರ್ಟಿಕಲ್ ಬೋರ್ಡ್ ತಯಾರಿಸುವ ಪ್ರಕ್ರಿಯೆ ಆರಂಭಿಸಿದೆ.