ವಾಷಿಂಗ್ಟನ್(ಆ.01): ಒಂದು ಕಡೆ ಇರಾನ್ ಆರ್ಥಿಕ ದಿಗ್ಬಂಧನದಿಂದ ಭಾರತಕ್ಕೆ ವಿನಾಯ್ತಿ ನೀಡಿರುವ ಅಮೆರಿಕ, ಮತ್ತೊಂದು ಕಡೆ ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ಹೇರುವಲ್ಲಿ ಭಾರತದ ಸಹಾಯ ಸ್ಮರಣೀಯ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದೆ.

ಹೌದು, ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ಹೇರಲು ಸಹಕರಿಸಿದ ತನ್ನ ಗ್ರೇಟ್ ಫ್ರೆಂಡ್(ಪರಮಾಪ್ತ ಗೆಳೆಯ) ಭಾರತಕ್ಕೆ ಧನ್ಯವಾದ ಎಂದು ಅಮೆರಿಕ ಹೇಳಿದೆ. ಇರಾನ್ ಮೇಲಿನ ಆರ್ಥಿಕ ದಿಗ್ಬಂಧನವನ್ನು ಬೆಂಬಲಸಿ ಅಮೆರಿಕಕ್ಕೆ ಸಹಕರಿಸಿದ ಭಾರತದ ನಡೆ ನಿಜಕ್ಕೂ ಸ್ಮರಣೀಯ ಎಂದು ಅಮೆರಿಕ ಮೆಚ್ಚುಗೆಯ ಮಾತುಗಳನ್ನಾಡಿದೆ.

ಇರಾನ್ ಮೇಲೆ ಅಮೆರಿಕ ಆರ್ಥಿಕ ದಿಗ್ಬಂಧನ ಹೇರಿದ ಬಳಿಕ ಕಚ್ಚಾತೈಲಕ್ಕಾಗಿ ಇರಾನ್’ನ್ನು ಅವಲಂಬಿಸಿರುವ ಭಾರತ, ಹಂತ ಹಂತವಾಗಿ ಇರಾನ್’ನಿಂದ ಕಚ್ಚಾತೈಲ ಆಮದನ್ನು ಕಡಿಮೆ ಮಾಡಿದೆ ಎಂದು ಅಮೆರಿಕ ಹೇಳಿದೆ.

ಭಾರತದ ಈ ನಡೆ ಇರಾನ್ ಮೇಲೆ ಜಾಗತಿಕ ಒತ್ತಡ ಹೇರಲು ಮತ್ತಷ್ಟು ಸಹಾಯಕಾರಿ ಎಂದು ಹೇಳಿರುವ ಅಮೆರಿಕ, ದಿಗ್ಬಂಧನದ ಹೊರತಾಗಿಯೂ ಭಾರತಕ್ಕೆ ಕಚ್ಚಾತೈಲದ ಸರಬರಾಜಿನ ತನ್ನ ವಾಗ್ದಾನವನ್ನು ಪೂರೈಸಿರುವುದಾಗಿ ಹೇಳಿದೆ. 

ಇದೇ ವೇಳೆ ಚೀನಾಗೂ ಧನ್ಯವಾದ ಸಲ್ಲಿಸಿರುವ ಅಮೆರಿಕ, ತನ್ನೊಂದಿಗೆ ಅಷ್ಟೇನೂ ಸುಮಧುರ ರಾಜತಂತ್ರಿಕ ಸಂಬಂಧ ಹೊಂದಿರದ ಚೀನಾ ಕೂಡ ದಿಗ್ಬಂಧನದ ಪರವಾಗಿ ನಿಂತಿದ್ದಕ್ಕೆ ಧನ್ಯವಾದ ಎಂದು ಹೇಳಿದೆ.

ಇರಾನ್ ಈ ಹಿಂದೆ ದಿನಕ್ಕೆ 7,81,000 ಬ್ಯಾರೆಲ್ ಕಚ್ಚಾತೈಲವನ್ನು ಭಾರತ, ಚೀನಾ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡುತ್ತಿತ್ತು. ಅಮೆರಿಕದ ಆರ್ಥಿಕ ದಿಗ್ಬಂಧನದಿಂದಾಗಿ ದಿನಕ್ಕೆ ಕೇವಲ 1,00,000 ಬ್ಯಾರೆಲ್ ಕಚ್ಚಾತೈಲವನ್ನು ರಫ್ತು ಮಾಡುತ್ತಿದೆ.

ಇನ್ನು ಅಮೆರಿಕದ ಈ ಹೇಳಿಕೆ ಭಾರತ-ಇರಾನ್ ನಡುವಿನ ಸಂಬಂಧಕ್ಕೆ ಹುಳಿ ಹಿಂಡಬಲ್ಲದು ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.