ಒಸಾಕಾ(ಜೂ.27): ಅಮೆರಿಕದ ವಸ್ತುಗಳ ಮೇಲೆ ಅಧಿಕ ಆಮದು ಸುಂಕ ವಿಧಿಸುವ ತನ್ನ ನಿರ್ಣಯವನ್ನು ಭಾರತ ಮರುಪರಿಶೀಲಿಸಬೇಕೆಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆಗ್ರಹಿಸಿದ್ದಾರೆ. 

ಜಪಾನ್’ನ ಬಂದರು ನಗರಿ ಒಸಾಕಾದಲ್ಲಿ ನಾಳೆ(ಜೂ.28) ಜಿ20 ಶೃಂಗಸಭೆ ಆರಂಭವಾಗಲಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಜಪಾನ್’ಗೆ ಹೊರಡುವ ಮೊದಲು ಈ ಕುರಿತು ಟ್ವೀಟ್ ಮಾಡಿರುವ ಟ್ರಂಪ್, ಅಮೆರಿಕದ ವಸ್ತುಗಳ ಮೇಲಿನ ಅಧಿಕ ಸುಂಕ ನೀತಿ ಕೈಬಿಡುವಂತೆ ಮೋದಿ ಅವರನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.

ನಿನ್ನೆಯಷ್ಟೇ ಭಾರತಕ್ಕೆ ಆಗಮಿಸಿದ್ದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, ವಾಣಿಜ್ಯ ಕ್ಷೇತ್ರದಲ್ಲಿ ಎರಡೂ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳು ದೂರವಾಗಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದರು. 
 
ಈ ಮಧ್ಯೆ ಇಂದು ಜಪಾನ್ ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರಧಾನಿ ಶಿಂಜೊ ಅಬೆ ಜೊತೆಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.