ನವದೆಹಲಿ(ಜೂ.26): ಭಾರತ-ಅಮೆರಿಕ ನಡುವಿನ ತೆರಿಗೆ ಶೀಥಲ ಸಮರ ತಾರಕಕ್ಕೇರಿದೆ. ಈ ಮಧ್ಯೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಭಾರತಕ್ಕೆ ಆಗಮಿಸಿದ್ದು, ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.

ಮೋದಿ-2 ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಾಂಪಿಯೋ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದು, ತೆರಿಗೆ ಯುದ್ಧದ ಛಾಯೆಯ ನಡುವೆ ಪ್ರಧಾನಿ ಮೋದಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ಇದೇ ಜೂನ್ 28–29ರಂದು ಜಪಾನ್‌ನ ಒಸಾಕಾದಲ್ಲಿ ಜಿ20 ಶೃಂಗಸಭೆ ನಡೆಯಲಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಈ ವೇಳೆ ಭೇಟಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಂಪಿಯೊ ಭೇಟಿ ಮಹತ್ವ ಪಡೆದುಕೊಂಡಿದೆ.

ಜಾಗತಿಕ ಉಗ್ರವಾದ, ಎಚ್‌1ಬಿ ವೀಸಾ ಸಮಸ್ಯೆ,  ಇರಾನ್ ತೈಲ ಖರೀದಿ ಮೇಲೆ ಅಮೆರಿಕದ ನಿರ್ಬಂಧದ ಪರಿಣಾಮಗಳ ಕುರಿತು ಪಾಂಪಿಯೊ ಮತ್ತು ಮೋದಿ ನಡುವೆ ಮಾತುಕತೆ ನಡೆದಿದೆ ಎನ್ನಲಾಗಿದೆ.

ಇದಕ್ಕೂ ಮೊದಲು ವಿದೇಶಾಂಗ ಸಚಿವ ಜೈಶಂಕರ್ ಆಯೋಜಿಸಿದ್ದ ಭೋಜನ ಕೂಟದಲ್ಲಿ ಪಾಂಪಿಯೊ ಭಾಗವಹಿಸಿದ್ದು, ಅಮೆರಿಕ-ಭಾರತ ನಡುವಿನ ಸಂಬಂಧ ವೃದ್ಧಿಗೆ ಹೊಸ ಮುನ್ನುಡಿ ಬರೆಯುವ ಮುನ್ಸೂಚನೆ ದೊರೆತಿದೆ.