ರಾಮ ಮಂದಿರದಿಂದ ತುಂಬಲಿದೆ ಉತ್ತರ ಪ್ರದೇಶ ಸರ್ಕಾರದ ಬೊಕ್ಕಸ; 25 ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಆದಾಯದ ನಿರೀಕ್ಷೆ
ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಇಂದು ನಡೆಯುತ್ತಿದೆ. ಹಿಂದೂಗಳ ಪಾಲಿಗೆ ಇದು ಪವಿತ್ರ ತೀರ್ಥಕ್ಷೇತ್ರವಾಗಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭಕ್ತರನ್ನು ಆಕರ್ಷಿಸಲಿದೆ.ಇದರಿಂದ ಉತ್ತರ ಪ್ರದೇಶ ಸರ್ಕಾರದ ತೆರಿಗೆ ಆದಾಯದಲ್ಲಿ ಕೂಡ ಭಾರೀ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.
ಅಯೋಧ್ಯೆ (ಜ.22): ಇಂದು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಹಿಂದೂಗಳ ಪಾಲಿಗೆ ಅಯೋಧ್ಯೆ ಪುಣ್ಯಕ್ಷೇತ್ರವಾಗಿದೆ. ಹೀಗಾಗಿ ಇನ್ಮುಂದೆ ರಾಮನ ದರ್ಶನ ಪಡೆಯಲು ಭಕ್ತಾದಿಗಳು ದೊಡ್ಡ ಸಂಖ್ಯೆಯಲ್ಲಿ ಅಯೋಧ್ಯೆಗೆ ಆಗಮಿಸುವ ನಿರೀಕ್ಷೆಯಿದೆ. ಪ್ರವಾಸಿಗರ ಭೇಟಿ ಹಾಗೂ ಇಲ್ಲಿ ಅವರು ವ್ಯಯಿಸುವ ಹಣ ಉತ್ತರ ಪ್ರದೇಶ ಸರ್ಕಾರದ ತೆರಿಗೆ ಆದಾಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಈಗಾಗಲೇ ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಭಾರತೀಯ ಸ್ಟೇಟ್ ಬ್ಯಾಂಕಿನ (ಎಸ್ ಬಿಐ) ಇತ್ತೀಚಿನ ವರದಿ ಪ್ರಕಾರ ಉತ್ತರ ಪ್ರದೇಶದಲ್ಲಿ ಪ್ರವಾಸಿಗರ ಒಟ್ಟು ವೆಚ್ಚ ಈ ವರ್ಷದ ಅಂತ್ಯದೊಳಗೆ 4ಲಕ್ಷ ಕೋಟಿ ರೂ. ಗಡಿದಾಟುವ ಸಾಧ್ಯತೆಯಿದೆ. 2025ನೇ ಹಣಕಾಸು ಸಾಲಿನಲ್ಲಿ ಉತ್ತರ ಪ್ರದೇಶ ಸರ್ಕಾರ ಹೆಚ್ಚುವರಿ 20,000-25,000 ಕೋಟಿ ರೂ. ತೆರಿಗೆ ಆದಾಯ ಗಳಿಸುವ ಗುರಿಯನ್ನು ನಿಗದಿಪಡಿಸಿಕೊಂಡಿದೆ ಕೂಡ.
2024ರಲ್ಲಿ 2.21 ಕೋಟಿ ಪ್ರವಾಸಿಗರ ಭೇಟಿ ನಿರೀಕ್ಷೆ
ಈ ವರ್ಷದ ಅಂತ್ಯದೊಳಗೆ ಅಯೋಧ್ಯೆಗೆ ಒಟ್ಟು 2.21 ಕೋಟಿ ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆಯಿದೆ. ಇನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಅಂದಾಜಿನ ಪ್ರಕಾರ ದೇಶದೊಳಗಿನ ಪ್ರವಾಸಿಗರು 2.2 ಲಕ್ಷ ಕೋಟಿ ರೂ. ವೆಚ್ಚವನ್ನು ಅಯೋಧ್ಯೆಯಲ್ಲಿ ಮಾಡಲಿದ್ದಾರೆ. ಇನ್ನು ವಿದೇಶಿ ಪ್ರವಾಸಿಗರು 10,000 ಕೋಟಿ ರೂ. ಮೊತ್ತವನ್ನು ಅಯೋಧ್ಯೆಯಲ್ಲಿ ವೆಚ್ಚ ಮಾಡುವ ನಿರೀಕ್ಷೆಯಿದೆ.
ನಾಳೆಯಿಂದ ಅಯೋಧ್ಯೆ ಸಾರ್ವಜನಿಕ ಮುಕ್ತ: ವರ್ಷಕ್ಕೆ 5 ಕೋಟಿ ಭಕ್ತರ ನಿರೀಕ್ಷೆ; ದೇಶದ ಪ್ರವಾಸೋದ್ಯಮಕ್ಕೆ ಸುವರ್ಣ ಯುಗ!
ಪ್ರವಾಸಿಗರನ್ನು ಸೆಳೆಯಲು ಸರ್ಕಾರದ ಪ್ಲ್ಯಾನ್
ಅಯೋಧ್ಯೆಗೆ ಪ್ರವಾಸಿಗರನ್ನು ಆಕರ್ಷಿಸಲು ಉತ್ತರ ಪ್ರದೇಶ ಸರ್ಕಾರ ಸಮಗ್ರ ಪ್ರವಾಸದ ಯೋಜನೆಯನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಎಸ್ ಬಿಐ ಅಧ್ಯಯನ ತಂಡ ಶಿಫಾರಸ್ಸು ಮಾಡಿದೆ. ಹಬ್ ಹಾಗೂ ಸ್ಪೋಕ್ ಮಾಡೆಲ್ ಅನುಸರಿಸುವ ಮೂಲಕ ರಾಜ್ಯದೊಳಗಿನ ವಿವಿಧ ತಾಣಗಳ ಶ್ರೀಮಂತ ಇತಿಹಾಸವನ್ನು ಪ್ರವಾಸಿಗರಿಗೆ ತಿಳಿಸಲು ಪ್ರಯತ್ನಿಸಬೇಕು ಎಂದು ವರದಿ ಸಲಹೆ ನೀಡಿದೆ. ಇನ್ನು ವಿಸ್ತಾರವಾದ ಪ್ರವಾಸಿಗರ ನಕಾಶೆ (Map) ಸಿದ್ಧಪಡಿಸಲು ಅಂತಾರಾಷ್ಟ್ರೀಯ ಸಹಭಾಗಿತ್ವದ ಸಾಧ್ಯತೆಗಳನ್ನು ಹುಡುಕುವಂತೆ ವರದಿ ಸಲಹೆ ನೀಡಿದೆ. ಉತ್ತರ ಪ್ರದೇಶದಲ್ಲಿ ಅನೇಕ ಧಾರ್ಮಿಕ ಪ್ರವಾಸೋದ್ಯಮದ ಕ್ಷೇತ್ರಗಳಿವೆ. ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಕಾಶಿ ಅಥವಾ ವಾರಾಣಾಸಿ ಕೂಡ ಉತ್ತರ ಪ್ರದೇಶದಲ್ಲೇ ಇದ್ದು. ಪ್ರತಿವರ್ಷ ದೊಡ್ಡ ಪ್ರಮಾಣದಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
ಉತ್ತರ ಪ್ರದೇಶದ ಆರ್ಥಿಕ ಸಾಧನೆಗಳು
ಪ್ರವಾಸೋದ್ಯಮದ ಹೊರತಾಗಿ ಎಸ್ ಬಿಐ ವರದಿ ಉತ್ತರ ಪ್ರದೇಶದ ಆರ್ಥಿಕ ಹಾಗೂ ಸಾಮಾಜಿಕ-ಆರ್ಥಿಕ ಸಾಧನೆಗಳನ್ನು ಶ್ಲಾಘಿಸಿದೆ. ಮಹಿಳಾ ಕಾರ್ಮಿಕ ಪಡೆಯ ಪಾಲ್ಗೊಳ್ಳುವಿಕೆ ಹೆಚ್ಚಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಹಾಗೆಯೇ ಆವಿಷ್ಕಾರದ ಸಾಮರ್ಥ್ಯದಲ್ಲಿ ಹೆಚ್ಚಳ ಹಾಗೂ ರಫ್ತಿನಲ್ಲಾಗುತ್ತಿರುವ ಪ್ರಗತಿಯನ್ನು ಕೂಡ ಈ ವರದಿ ಗುರುತಿಸಿ ಶ್ಲಾಘಿಸಿದೆ. ಹಾಗೆಯೇ ಈ ರಾಜ್ಯದ ಆರ್ಥಿಕತೆ 500 ಬಿಲಿಯನ್ ಡಾಲರ್ ಗಡಿ ದಾಟುವ ಮೂಲಕ ಭಾರತ 2028ನೇ ಆರ್ಥಿಕ ಸಾಲಿನಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಯುವ ಗುರಿಗೆ ನೆರವು ನೀಡಲಿದೆ ಎಂದು ಎಸ್ ಬಿಐ ವರದಿ ತಿಳಿಸಿದೆ.
ಭಾರತೀಯರ ದೈವ ನಂಬಿಕೆ ಮುಂದೆ 27 ಟ್ರಿಲಿಯನ್ ಅಮೆರಿಕನ್ ಆರ್ಥಿಕತೆ ತೃಣಕ್ಕೆ ಸಮಾನ
ಉ.ಪ್ರ. ಅಂದಾಜು ಜಿಎಸ್ ಡಿಪಿ 24.4 ಕೋಟಿ ರೂ.
ಎಸ್ ಬಿಐ ವರದಿ ಪ್ರಕಾರ ಉತ್ತರ ಪ್ರದೇಶದ ನಿವ್ವಳ ರಾಜ್ಯ ದೇಶೀಯ ಉತ್ಪನ್ನ (ಜಿಎಸ್ ಡಿಪಿ) 2024ನೇ ಆರ್ಥಿಕ ಸಾಲಿನಲ್ಲಿ 24.4 ಲಕ್ಷ ಕೋಟಿ ರೂ. ಆಗಿರಲಿದೆ. 2028ನೇ ಆರ್ಥಿಕ ಸಾಲಿನಲ್ಲಿ ಉತ್ತರ ಪ್ರದೇಶ ಭಾರತದ ಜಿಡಿಪಿ ಪ್ರಗತಿಗೆ ಬೆಂಬಲ ನೀಡುವ ಎರಡನೇ ಅತೀದೊಡ್ಡ ಆರ್ಥಿಕತೆಯಾಗಿ ಮೂಡಿಬರಲಿದೆ ಎಂದು ಎಸ್ ಬಿಐ ವರದಿ ಅಭಿಪ್ರಾಯಪಟ್ಟಿದೆ.