ಸಾಂದರ್ಭಿಕ ಚಿತ್ರ

ಅಲಿಘಡ್​(ಜೂ.25): ಕೇವಲ ಕಚೋರಿ ಮಾರಿ ವರ್ಷಕ್ಕೆ ಸುಮಾರು 60 ಲಕ್ಷ ರೂ. ಆದಾಯ ಗಳಿಸಿದ ವ್ಯಾಪಾರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ.

ಉತ್ತರಪ್ರದೇಶದ ಅಲಿಘಡ್​ನಲ್ಲಿರುವ ಮುಖೇಶ್ ಕಚೋರಿ ಎಂಬ ಅಂಗಡಿ ಬಹಳ ಫೇಮಸ್. ಇಲ್ಲಿನ ಕಚೋರಿಗೆ ಜನ ಮುಗಿ ಬೀಳುತ್ತಾರೆ. ಕೇವಲ ಕಚೋರಿ ಮಾರುತ್ತಲೇ ಮಾಲೀಕ ಮುಖೇಶ್ ವರ್ಷಕ್ಕೆ 60 ಲಕ್ಷ ರೂ. ಆದಾಯ ಗಳಿಸಿದ್ದಾರೆ.

ಇದರಿಂದ ಗಾಬರಿಗೊಂಡಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಮುಖೇಶ್’ಗೆ ನೋಟಿಸ್ ನೀಡಿದ್ದಾರೆ. ಮುಖೇಶ್ ಆದಾಯದ ಕುರಿತು ಅನುಮಾನ ವ್ಯಕ್ತಪಡಿಸಿದ ಅನಾಮಿಕನೋರ್ವ ಇಲಾಖೆಗೆ ದೂರು ನೀಡಿದ್ದ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಲು ತೆರಿಗೆ ಇಲಾಖೆ ಅಧಿಕಾರಿಗಳ ತಂಡವೊಂದು ಮಾರುವೇಷದಲ್ಲಿ ಆಗಮಿಸಿದ್ದಲ್ಲದೆ, ಮುಖೇಶ್​ ಅಂಗಡಿ ಪಕ್ಕದಲ್ಲೇ ಮತ್ತೊಂದು ಅಂಗಡಿಯನ್ನು ತೆರೆದು ಮುಖೇಶ್ ಮೇಲೆ ನಿಗಾ ಇರಿಸಿತ್ತು.

ಬಳಿಕ ತಿಳಿದು ಬಂದಿದ್ದೇನೆಂದರೆ ಮುಖೇಶ್ ತಮ್ಮ ಅಂಗಡಿಯನ್ನು ಜಿಎಸ್​ಟಿಯಡಿ ದಾಖಲಿಸಿಕೊಂಡಿಲ್ಲ. ಅಲ್ಲದೇ ಇದುವರೆಗೂ ಮುಖೇಶ್ ತೆರಿಗೆಯನ್ನೇ ಕಟ್ಟಿಲ್ಲ ಎಂಬ ಸಂಗತಿ ಬಯಲಾಗಿದೆ.

ಕೂಡಲೇ ಎಚ್ಚೆತ್ತ ಆದಾಯ ತೆರಿಗೆ ಇಲಾಖೆ, ಮುಖೇಶ್ ಅವರಿಗೆ ನೋಟಿಸ್ ಜಾರಿ ಮಾಡಿ ಕೂಡಲೇ ತೆರಿಗೆ ಕಟ್ಟುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖೇಶ್, ತಾವೊಬ್ಬ ಸಾಮಾನ್ಯ ವ್ಯಾಪಾರಿಯಾಗಿದ್ದು ಜಿಎಸ್​ಟಿ ಕುರಿತು ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಅಲ್ಲದೇ ಆದಾಯ ತೆರಿಗೆ ಅಧಿಕಾರಿಗಳಿಗೆ ತಮ್ಮ ಆದಾಯದ ಸಂಪೂರ್ಣ ಮಾಹಿತಿ ನೀಡಿ, ತೆರಿಗೆ ಕಟ್ಟುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.