ನವದೆಹಲಿ(ಜ.31): ಲೋಕಸಭೆ ಚುನಾವಣೆಗೆ ಹಲವು ಕೆಲವೇ ತಿಂಗಳು ಬಾಕಿ ಇರುವಾಗಲೇ, ನಾಳೆ ಮೋದಿ ಸರ್ಕಾರದಿಂದ ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. 2019 ಚುನಾವಣಾ ಹೊತ್ತಲ್ಲೇ ಬಜೆಟ್ ಮಂಡನೆಯಿಂದಾಗಿ ಈ ಬಾರಿ ಮೋದಿ ಬಜೆಟ್ ಬುಟ್ಟಿಯಲ್ಲಿ ಏನಿದೆ ಎಂಬುದು ದೇಶವಾಸಿಗಳ ಕುತೂಹಲ. 

ಪಂಚರಾಜ್ಯಗಳ ಚುನಾವಣಾ ಸೋಲಿನಿಂದಾಗಿ  ಮೋದಿ ಬಜೆಟ್ ಮೂಲಕವೇ ಲೋಕಸಭೆಗೆ ಮುನ್ನುಡಿ ಬರೆದು, ವೋಟ್ ಗಟ್ಟಿ ಮಾಡಿಕೊಳ್ತಾರಾ ಎಂದು ಜನರ ನಿರೀಕ್ಷೆ ಹೆಚ್ಚಿಸಿದೆ.

2019 ಇದು ಚುನಾವಣಾ ವರ್ಷ. ಇದೇ ವರ್ಷ ಮಾರ್ಚ್- ಏಪ್ರೀಲ್ ಅಂತ್ಯದೊಳಗೆ ಲೋಕಾಸಮರ ನಡೆಯಲಿದೆ. ಜೊತೆಗೆ ಈ ಮಧ್ಯಂತರ ಬಜೆಟ್ ಮೋದಿ ಸರ್ಕಾರದ ಕೊನೆ ಬಜೆಟ್. ಮೋದಿ ಮತ್ತೊಮ್ಮೆ ಎನ್ನುತ್ತಿರುವ ಕೇಸರಿ ಪಾಳಯಕ್ಕೆ ಈ ಬಜೆಟ್ ತುಂಬಾ ಮಹತ್ವದ್ದು. ಹೀಗಾಗಿಯೇ ಈ ಬಜೆಟ್ ನಿಂದಲೇ 2019ರ ಮಹಾ ಸಂಗ್ರಾಮಕ್ಕೆ ಮೋದಿ ಮತ ಬೇಟೆ ಮಂತ್ರದಂಡ ಪ್ರಯೋಗಿಸಲಿದ್ದಾರೆ.


ಪಂಚರಾಜ್ಯಗಳ ಚುನಾವಣಾ ಸೋಲಿನಿಂದಾಗಿ ಈ ಬಾರಿ ಮೋದಿ ಬಡವರ, ರೈತರ ಪರ ಬಜೆಟ್ ಮಂಡಿಸಿ ಒಲೈಕೆಗೆ ಮುಂದಾಗುವ ಸಾಧ್ಯತೆ ಹೆಚ್ಚಿದೆ. ರೈತರು ಬಡವರಿಗೆ ಈಬಾರಿ ತೆರಿಗೆ ವಿನಾಯಿತಿ, ಬಡವರಿಗಾಗಿಯೇ ಸಾರ್ವತ್ರಿಕ ಆದಾಯ ಯೋಜನೆ ಘೋಷಣೆ ಸಾಧ್ಯತೆ ಇದೆ.

ಪಿಂಚಣಿದಾರರಿಗೆ ಹೆಚ್ಚುವರಿ ಸೌಲಭ್ಯ, ಗೃಹಸಾಲದ ಬಡ್ಡಿದರ ಕಡಿತ ಸಾಧ್ಯತೆ ಇದೆ. ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷ ರೂ. ನಿಂದ 5 ಲಕ್ಷಕ್ಕೆ ಏರಿಕೆ ನಿರೀಕ್ಷೆ ಹೆಚ್ಚಿದೆ. ಇವೆಲ್ಲದರ ಜೊತೆಗೆ ಬಡವರ ಆರೋಗ್ಯ ಕಲ್ಯಾಣಕ್ಕಾಗಿ ಪ್ರಮುಖ ಯೋಜನೆಗಳು. ಜೊತೆಗೆ  ಸ್ಟಾರ್ಟ್ ಅಪ್ ಕ್ಷೇತ್ರಕ್ಕೆ ಕೇಂದ್ರಸರ್ಕಾರದಿಂದ ಈ ಬಾರಿ ಬಜೆಟ್ ನಲ್ಲಿ ಸಿಹಿ ಸುದ್ದಿ ಸಿಗುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಯುವ ಜನತೆ ಆಕರ್ಷಣೆಗಾಗಿ ಪ್ರಮುಖ ಯೋಜನೆ ತರುವ ಸಾಧ್ಯತೆ ಇದೆ.

ಈ ಬಾರಿಯ ಬಜೆಟ್ ನಲ್ಲಿ ಮೋದಿ ಸರ್ಕಾರ ರೈತರಿಗೆ ಬಂಪರ್ ಗಿಫ್ಟ್ ನೀಡೋ ಸಾಧ್ಯತೆ ಹೆಚ್ಚಿದೆ. 2022 ರೊಳಗಾಗಿ ದೇಶದ ರೈತರ ಆದಾಯ ವೃದ್ಧಿಗಾಗಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ತೆಲಂಗಾಣ, ಒಡಿಶಾ ಮಾದರಿಯಲ್ಲಿ ರೈತರಿಗೆ ಇಂತಿಷ್ಟು ಹಣ, ರೈತನ ಪ್ರತಿ ಎಕರೆಗೆ ವಾರ್ಷಿಕ 8 ಸಾವಿರ ರೂ. ಸಹಾಯಧನ, 3 ಲಕ್ಷ ರೂ ವರೆಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆ ತರುವ ಸಾಧ್ಯತೆ ಹೆಚ್ಚಿದೆ.

ಇದರ ಜೊತೆಗೆ ಕೃಷಿಗೆ ತಗಲುವ ವೆಚ್ಚ, ರಸಗೊಬ್ಬರಗಳ ಖರೀದಿಗೆ ಶೇ. 50 ರಷ್ಟು ಸಹಾಯಧನ ಹಾಗೂ ಬೆಳೆ ವಿಮೆಗೆ ವಿಧಿಸಲಾಗುತ್ತಿರುವ ಪ್ರಿಮೀಯಂ ಸರ್ಕಾರವೇ ಭರಿಸುವ ಸಾಧ್ಯತೆ ಇದೆ. ಇವೆಲ್ಲದರ ಜೊತೆಗೆ ಪ್ರಮುಖವಾಗಿ ಸ್ವಾಮಿನಾಥನ್ ಆಯೋಗದ ವರದಿ ಅನುಷ್ಠಾನದ ಬಗ್ಗೆಯೂ ರೈತರಲ್ಲಿ ನಿರೀಕ್ಷೆ ಹೆಚ್ಚಿದೆ.