ಏನಿದು ಭದ್ರಾ ಮೇಲ್ದಂಡೆ ಯೋಜನೆ : ಯಾವೆಲ್ಲಾ ಜಿಲ್ಲೆಗಳಿಗೆ ನೀರೊದಗಿಸಲಿದೆ ಭದ್ರೆ...
ಮಧ್ಯ ಕರ್ನಾಟಕದ ಬಯಲು ಸೀಮೆಯ ಪ್ರದೇಶಗಳಿಗೆ ನೀರೊದಗಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ 5300 ಕೋಟಿ ರು. ನೆರವು ಘೋಷಣೆ ಮಾಡಲಾಗಿದೆ.
ಬೆಂಗಳೂರು: ಮಧ್ಯ ಕರ್ನಾಟಕದ ಬಯಲು ಸೀಮೆಯ ಪ್ರದೇಶಗಳಿಗೆ ನೀರೊದಗಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ 5300 ಕೋಟಿ ರು. ನೆರವು ಘೋಷಣೆ ಮಾಡಲಾಗಿದೆ. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಕೇಂದ್ರ ಸರ್ಕಾರ ಅನುದಾನ ಪ್ರಕಟಿಸಿರುವುದು ಮಹತ್ವದ್ದಾಗಿದೆ. ಕೇಂದ್ರ ಕರ್ನಾಟಕದ ಕ್ಷಾಮಪೀಡಿತ ಪ್ರದೇಶಗಳ ಅನುಕೂಲಕ್ಕಾಗಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರು. ಕೇಂದ್ರೀಯ ನೆರವು ನೀಡಲಾಗುವುದು ಎಂದು ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.
ಭದ್ರಾ ಮೇಲ್ದಂಡೆಗೆ ಕೇಂದ್ರೀಯ ಅನುದಾನ ಪಡೆಯುವ ಸಲುವಾಗಿ ಈ ಯೋಜನೆಯನ್ನು 'ರಾಷ್ಟ್ರೀಯ ಯೋಜನೆ' ಎಂದು ಘೋಷಿಸಬೇಕು ಎಂದು ಕರ್ನಾಟಕ ಸರ್ಕಾರ ಕೇಂದ್ರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಲೇ ಬಂದಿತ್ತು. 'ರಾಷ್ಟ್ರೀಯ ಯೋಜನೆ' ಎಂಬ ಅಭಿದಾನವನ್ನು ನೀಡದೇ ಹೋದರೂ, ಕರ್ನಾಟಕದ ಬೇಡಿಕೆಯಂತೆ 5300 ಕೋಟಿ ರು.ಗಳನ್ನು ಬಜೆಟ್‌ನಲ್ಲಿ ಸರ್ಕಾರ ಪ್ರಕಟಿಸಿದೆ. ಪ್ರಾಯಶಃ ಮುಂಬರುವ ದಿನಗಳಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲೂಬಹುದು.
ಏನಿದು ಯೋಜನೆ?:
ಮಧ್ಯ ಕರ್ನಾಟಕದ ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಯ ಬಯಲು ಸೀಮೆ ಪ್ರದೇಶಗಳು ನೀರಾವರಿ ಕೊರತೆಯನ್ನು ಎದುರಿಸುತ್ತಿವೆ. ಇದನ್ನು ಪರಿಹರಿಸುವ ಉದ್ದೇಶದಿಂದ ಭದ್ರಾ ಮೇಲ್ದಂಡೆ ಯೋಜನೆಯನ್ನು ರೂಪಿಸಲಾಗಿದೆ. ಇದೊಂದು ಏತನೀರಾವರಿ ಯೋಜನೆ. ಇದರ ಮೊದಲ ಹಂತದಲ್ಲಿ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17.40 ಟಿಎಂಸಿ ನೀರನ್ನು ಹರಿಸಲಾಗುತ್ತದೆ. 2ನೇ ಹಂತದಲ್ಲಿ ಭದ್ರಾ ಜಲಾಶಯದಿಂದ 29.90 ಟಿಎಂಸಿ ನೀರನ್ನು ಲಿಫ್ಟ್ ಮಾಡಲಾಗುತ್ತದೆ. ಈ ನೀರನ್ನು ಬಳಸಿ ಮಧ್ಯ ಕರ್ನಾಟಕದ ಜಿಲ್ಲೆಗಳ 2.25 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ.
ಭದ್ರಾ ರಾಷ್ಟ್ರೀಯ ಯೋಜನೆಗೆ ಸಿಎಂ ಬೊಮ್ಮಾಯಿ ಒತ್ತಡ: ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ
ನೀರಾವರಿ ಜತೆಗೇ ಆ ಭಾಗದ 367 ಕೆರೆಗಳನ್ನು ಅರ್ಧದಷ್ಟು ಭರ್ತಿ ಮಾಡಿ ಅಂತರ್ಜಲ ವೃದ್ಧಿಯಾಗುವಂತೆ ನೋಡಿಕೊಳ್ಳುವ ಉದ್ದೇಶವನ್ನೂ ಯೋಜನೆ ಹೊಂದಿದೆ. ಆರಂಭದಲ್ಲಿ 6000 ಕೋಟಿ ರು. ಇದ್ದ ಯೋಜನೆಯ ವೆಚ್ಚ 2020ರಲ್ಲಿ 21,473 ಕೋಟಿ ರು.ಗೆ ಏರಿತ್ತು.
ಈ ಪೈಕಿ ಸೂಕ್ಷ್ಮ ನೀರಾವರಿ ವೆಚ್ಚವನ್ನು ಕೈಬಿಟ್ಟಿರುವುದರಿಂದ ಯೋಜನೆಯ ವೆಚ್ಚ 16,125 ಕೋಟಿ ರು.ಗೆ ಇಳಿದಿದೆ. ರಾಜ್ಯ ಸರ್ಕಾರ ಈಗಾಗಲೇ 5500 ಕೋಟಿ ರು.ಗಳನ್ನು ಯೋಜನೆಗೆ ಖರ್ಚು ಮಾಡಿದೆ. ಯೋಜನೆ ಪೂರ್ಣಗೊಳಿಸಲು ಇನ್ನೂ 11 ಸಾವಿರ ಕೋಟಿ ರು. ಅಗತ್ಯವಿದೆ. ಹೀಗಾಗಿ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ 5300 ಕೋಟಿ ರು. ನೆರವನ್ನು ಕೇಂದ್ರದಿಂದ ಪಡೆಯಲು ಸರ್ಕಾರ ಪ್ರಯತ್ನ ಆರಂಭಿಸಿತ್ತು. ಪರಿಸರ ಸೇರಿದಂತೆ ಸಂಬಂಧಿಸಿದ ಎಲ್ಲ ಅನುಮತಿಗಳನ್ನೂ ಪಡೆದಿತ್ತು. ಸಾರ್ವಜನಿಕ ಹೂಡಿಕೆ ಮಂಡಳಿ ಕೂಡ ಯೋಜನೆಗೆ ನಿಶಾನೆ ತೋರಿತ್ತು. ಕೇಂದ್ರ ಜಲಶಕ್ತಿ ಸಚಿವಾಲಯ ಸಂಪುಟದ ಅನುಮೋದನೆಗೆ ಕಳೆದ ಡಿಸೆಂಬರ್‌ನಲ್ಲೇ ರವಾನಿಸಿತ್ತು. ಆದರೂ ಯೋಜನೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ಈ ನಡುವೆ, ಜ.16ರಂದು ರಾಜ್ಯದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಒತ್ತಡವನ್ನೂ ಹೇರಿದ್ದರು.
ಫಲಾನುಭವಿ ತಾಲೂಕುಗಳು
1. ಚಿಕ್ಕಮಗಳೂರು: ತರೀಕೆರೆ, ಕಡೂರು
2. ಚಿತ್ರದುರ್ಗ: ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು
3. ದಾವಣಗೆರೆ: ಶಿರಾ, ಜಗಳೂರು
4. ತುಮಕೂರು: ಚಿಕ್ಕನಾಯಕನಹಳ್ಳಿ, ಪಾವಗಡ
ಪ್ರಯೋಜನ ಪಡೆವ ಗ್ರಾಮಗಳು
787 ಹಳ್ಳಿಗಳು: ಭದ್ರಾ ಮೇಲ್ದಂಡೆಯಿಂದ ಪ್ರಯೋಜನ ಪಡೆವ ಗ್ರಾಮಗಳು
74.26 ಲಕ್ಷ: ಯೋಜನೆಯಿಂದ ಮುಕ್ಕಾಲು ಕೋಟಿ ಜನರಿಗೆ ಅನುಕೂಲ
2.25 ಲಕ್ಷ ಹೆಕ್ಟೇರ್: ನೀರಾವರಿಗೊಳಪಡುವ ಒಟ್ಟು ಬರಪೀಡಿತ ಪ್ರದೇಶ
367 ಕೆರೆ: ಯೋಜನೆಯಿಂದ ಅಪಾರ ಕೆರೆಗಳಿಗೆ ಜೀವಜಲ
ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಈ ಭದ್ರಾ ಮೇಲ್ಡಂಡೆಗೆ ಕೇಂದ್ರ ಸರ್ಕಾರ 5300 ಕೋಟಿ ರು.ಆರ್ಥಿಕ ನೆರವು ನೀಡಿರುವುದರಿಂದ ಮಧ್ಯ ಕರ್ನಾಟಕದ ಜನರ ಬಹುದಿನಗಳ ಬೇಡಿಕೆಯೊಂದಕ್ಕೆ ಅಧಿಕೃತ ಮುದ್ರೆ ಒತ್ತಿದಂತಾಗಿದೆ.
ರಾಜ್ಯದ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಭದ್ರಾ ಮೇಲ್ದಂಡೆ ಘೋಷಣೆಗೆ ಕೇಂದ್ರ ಸಂಪುಟ ಅನುಮೋದನೆ ಬಾಕಿ -ಸಿಎಂ