ಅರ್ಥ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಸತತ ಎಂಟನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ್ದು, ರಕ್ಷಣಾ ಕ್ಷೇತ್ರಕ್ಕಾಗಿ 2025ನೇ ಸಾಲಿನಲ್ಲಿ 6.81 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದಾರೆ.
ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಅರ್ಥ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಸತತ ಎಂಟನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ್ದು, ರಕ್ಷಣಾ ಕ್ಷೇತ್ರಕ್ಕಾಗಿ 2025ನೇ ಸಾಲಿನಲ್ಲಿ 6.81 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದಾರೆ. ಈ ಮೊತ್ತ ಮೋದಿ ಸರ್ಕಾರದ ಮೂರನೇ ಅವಧಿಯ ಆರಂಭದಲ್ಲಿ, ಅಂದರೆ ಕಳೆದ ಜುಲೈ ತಿಂಗಳಲ್ಲಿ ಮಂಡಿಸಿದ 6.21 ಲಕ್ಷ ಕೋಟಿ ರೂಪಾಯಿಗಳ ರಕ್ಷಣಾ ಬಜೆಟ್‌ಗಿಂತ ಹೆಚ್ಚಾಗಿದೆ. ಒಟ್ಟಾರೆ ರಕ್ಷಣಾ ಬಜೆಟ್‌ನಲ್ಲಿ, 4.88 ಲಕ್ಷ ಕೋಟಿ ರೂಪಾಯಿಗಳನ್ನು ಆದಾಯ ವೆಚ್ಚಕ್ಕೆ ನಿಯೋಜಿಸಲಾಗಿದ್ದು, ಇದು ಯೋಧರ ಸಂಬಳ, ನಿವೃತ್ತಿ ವೇತನಗಳು, ದೈನಂದಿನ ಕಾರ್ಯಾಚರಣಾ ವೆಚ್ಚಗಳು, ಮತ್ತು ರಕ್ಷಣಾ ಉಪಕರಣಗಳು ಮತ್ತು ಮೂಲಭೂತ ವ್ಯವಸ್ಥೆಗಳ ನಿರ್ವಹಣೆಗೆ ಬಳಕೆಯಾಗುತ್ತದೆ. ಇದರಲ್ಲಿ 1,60,795 ಕೋಟಿ ರೂಪಾಯಿಗಳನ್ನು ಪ್ರತ್ಯೇಕವಾಗಿ ನಿವೃತ್ತಿ ವೇತನಕ್ಕಾಗಿ ಮೀಸಲಿಡಲಾಗಿದೆ.
ಇದೇ ವೇಳೆ, 1.92 ಲಕ್ಷ ಕೋಟಿ ರೂಪಾಯಿಗಳನ್ನು ಬಂಡವಾಳ ವೆಚ್ಚವಾಗಿ ಮೀಸಲಿಡಲಾಗಿದ್ದು, ಇದನ್ನು ನೂತನ ಉಪಕರಣಗಳು, ಆಧುನೀಕರಣ ಯೋಜನೆಗಳು, ಮತ್ತು ಮೂಲಭೂತ ವ್ಯವಸ್ಥೆಗಳ ಅಭಿವೃದ್ಧಿಗೆ ಬಳಸಲಾಗುತ್ತದೆ. ಬಂಡವಾಳ ವೆಚ್ಚದ ಭಾಗವಾಗಿ 48,614 ಕೋಟಿ ರೂಪಾಯಿಗಳನ್ನು ವಿಮಾನಗಳು ಮತ್ತು ಏರೋ ಇಂಜಿನ್‌ಗಳಿಗಾಗಿ ಮೀಸಲಿಡಲಾಗಿದ್ದು, 24,390 ಕೋಟಿ ರೂಪಾಯಿಗಳನ್ನು ನೌಕಾದಳಕ್ಕಾಗಿ ನಿಯೋಜಿಸಲಾಗಿದೆ. ಅದರೊಡನೆ, 63,099 ಕೋಟಿ ರೂಪಾಯಿಗಳನ್ನು ಇತರ ರಕ್ಷಣಾ ಉಪಕರಣಗಳಿಗಾಗಿ ಮೀಸಲಿಡಲಾಗಿದೆ. ಈ ವರ್ಷದ ರಕ್ಷಣಾ ಬಜೆಟ್ 2024-25ನೇ ಹಣಕಾಸು ವರ್ಷದ ಆರಂಭಿಕ ಅಂದಾಜಾಗಿದ್ದ 6.22 ಲಕ್ಷ ಕೋಟಿ ರೂಪಾಯಿಗಳಿಗಿಂತ 9% ಹೆಚ್ಚಳವಾಗಿದೆ. ಇದು ಕಳೆದ ವರ್ಷದ ಪರಿಷ್ಕೃತ ನಿಯೋಜನೆಯಾದ 6.41 ಲಕ್ಷ ಕೋಟಿ ರೂಪಾಯಿಗಳಿಗಿಂತ 6% ಹೆಚ್ಚಳವಾಗಿದೆ ಎಂದು ಬಜೆಟ್ ದಾಖಲೆಗಳು ವಿವರಿಸಿವೆ.
ಡಾಕಿಂಗ್ ತಂತ್ರಜ್ಞಾನದಲ್ಲಿ ಇಸ್ರೋ ಹೊಸ ಕಿಂಗ್: ಗಿರೀಶ್ ಲಿಂಗಣ್ಣ
2025ರ ಆರಂಭದಲ್ಲಿ, ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಈ ವರ್ಷದ ಬಜೆಟ್ ಮುಖ್ಯ ಸುಧಾರಣೆಗಳತ್ತ ಗಮನಹರಿಸಲಿದೆ ಎಂದಿದ್ದರು. ಮುಂದಿನ ತಿಂಗಳುಗಳಲ್ಲಿ, ಇಂಟಗ್ರೇಟೆಡ್ ಥಿಯೇಟರ್ ಕಮಾಂಡ್, ಸೈಬರ್ ಮತ್ತು ಎಐ ಯುದ್ಧ, ರಕ್ಷಣಾ ಉಪಕರಣಗಳ ಕ್ಷಿಪ್ರ ಖರೀದಿ, ಸುಗಮವಾದ ತಂತ್ರಜ್ಞಾನ ವರ್ಗಾವಣೆ, ಮತ್ತು ರಕ್ಷಣಾ ರಫ್ತಿಗೆ ಬೆಂಬಲದಂತಹ ಕ್ಷೇತ್ರಗಳಲ್ಲಿ ಹೆಚ್ಚಿನ ಸುಧಾರಣೆಗಳನ್ನು ತರುವ ನಿರೀಕ್ಷೆಗಳಿವೆ. 2025-26ನೇ ಸಾಲಿನಲ್ಲಿ ರಕ್ಷಣಾ ಸಚಿವಾಲಯಕ್ಕೆ (ನಾಗರಿಕ) 28,682 ಕೋಟಿ ರೂಪಾಯಿಗಳನ್ನು ನಿಯೋಜಿಸಲಾಗಿದ್ದು, ಇದು ಕಳೆದ ವರ್ಷದ 25,963 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಹೆಚ್ಚಳವಾಗಿದೆ. ಈ ಹೂಡಿಕೆ ಆಡಳಿತಾತ್ಮಕ ವ್ಯವಸ್ಥೆಯನ್ನು ಬಲಪಡಿಸಿ, ಒಟ್ಟಾರೆಯಾಗಿ ರಕ್ಷಣಾ ವಲಯವನ್ನು ಸಮರ್ಥವಾಗಿ ನಿರ್ವಹಿಸುವ ಗುರಿ ಹೊಂದಿದೆ. ಈ ಬಾರಿಯ ಬಜೆಟ್ ಅನ್ನು ನೀತಿ ಯೋಜನೆ, ಸಂಶೋಧನೆ, ಮತ್ತು ಇತರ ಅವಶ್ಯಕ ವ್ಯವಸ್ಥೆಗಳ ಅಭಿವೃದ್ಧಿಗೆ ಮತ್ತು ಒಟ್ಟಾರೆ ಸೇನಾ ಪಡೆಗಳ ಅಭಿವೃದ್ಧಿಗೆ ಬಳಸಲಾಗುತ್ತದೆ.
ರಕ್ಷಣಾ ಸಚಿವಾಲಯ (ನಾಗರಿಕ) ಎಂದರೇನು?: ರಕ್ಷಣಾ ಸಚಿವಾಲಯ (ಸಿವಿಲ್) ಭಾರತದ ರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಆಡಳಿತ ಮತ್ತು ಯುದ್ಧೇತರ ಚಟುವಟಿಕೆಗಳನ್ನು ನಿರ್ವಹಿಸುತ್ತದೆ. ಇದು ರಕ್ಷಣಾ ಸಂಬಂಧಿತ ನೀತಿ ನಿರೂಪಣೆಗಳನ್ನು ನಿರ್ವಹಿಸಿ, ವಿವಿಧ ರಕ್ಷಣಾ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಿ, ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುತ್ತದೆ.
ಭಾರತದಲ್ಲಿ ರಕ್ಷಣಾ ಸಚಿವಾಲಯ (ಎಂಒಡಿ) ಸಂಕೀರ್ಣವಾದ ವ್ಯವಸ್ಥೆಯನ್ನು ಹೊಂದಿದ್ದು, ಸಚಿವಾಲಯದ ನಿಯಂತ್ರಣದಡಿ ಹಲವು ಸಂಸ್ಥೆಗಳು ಕಾರ್ಯಾಚರಿಸುತ್ತವೆ. ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಕೆಲವು ಪ್ರಮುಖ ನಾಗರಿಕ ಸಂಸ್ಥೆಗಳು ಇಂತಿವೆ:
1. ರಕ್ಷಣಾ ಇಲಾಖೆ (ಡಿಒಡಿ)
ರಕ್ಷಣಾ ಕಾರ್ಯದರ್ಶಿಯವರ ನೇತೃತ್ವದಡಿ ಕಾರ್ಯ ನಿರ್ವಹಿಸುವ ಈ ಇಲಾಖೆ ಭಾರತದ ಭದ್ರತೆಯ ಜವಾಬ್ದಾರಿ ಹೊಂದಿದ್ದು, ಇದು ರಕ್ಷಣಾ ನೀತಿ, ರಕ್ಷಣಾ ಸಿದ್ಧತೆ, ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ಒಳಗೊಂಡಿದೆ. ಇದು ಇಂಟರ್ ಸರ್ವಿಸಸ್ ಆರ್ಗನೈಸೇಶನ್, ಡಿಫೆನ್ಸ್ ಅಕೌಂಟ್ಸ್ ಡಿಪಾರ್ಟ್‌ಮೆಂಟ್, ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್‌ಮೆಂಟ್ (ಸಿಎಸ್‌ಡಿ), ಕೋಸ್ಟ್ ಗಾರ್ಡ್, ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್, ಬಾರ್ಡರ್ ರೋಡ್ಸ್ ಆರ್ಗನೈಸೇಶನ್, ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಆ್ಯಂಡ್ ಅನಾಲಿಸಿಸ್ ಮತ್ತು ನ್ಯಾಷನಲ್ ಡಿಫೆನ್ಸ್ ಕಾಲೇಜುಗಳಂತಹ ವಿವಿಧ ಸಂಸ್ಥೆಗಳನ್ನು ನಿರ್ವಹಿಸುತ್ತದೆ.
2. ರಕ್ಷಣಾ ಉತ್ಪಾದನಾ ವಿಭಾಗ (ಡಿಡಿಪಿ)
ಈ ವಿಭಾಗ ರಕ್ಷಣಾ ಉಪಕರಣಗಳು ಮತ್ತು ಸಂಬಂಧಿತ ಉಪಕರಣಗಳ ದೇಶೀಯ ಉತ್ಪಾದನೆಗೆ ಜವಾಬ್ದಾರಿ ಹೊಂದಿದೆ. ಇದು ವಿವಿಧ ಡಿಫೆನ್ಸ್ ಪಬ್ಲಿಕ್ ಸೆಕ್ಟರ್ ಅಂಡರ್‌ಟೇಕಿಂಗ್ಸ್ (ಡಿಪಿಎಸ್‌ಯು) ಗಳಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್), ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್) ಗಳನ್ನು ನಿರ್ವಹಿಸುತ್ತದೆ.
3. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆ (ಡಿಆರ್‌ಡಿಓ)
ಡಿಆರ್‌ಡಿಓ ರಕ್ಷಣಾ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಜವಾಬ್ದಾರಿ ಹೊಂದಿದೆ. ಇದು ಭಾರತದಾದ್ಯಂತ ವಿವಿಧ ಪ್ರಯೋಗಾಲಯಗಳು ಮತ್ತು ಸಂಸ್ಥೆಗಳ ಅಪಾರ ಜಾಲವನ್ನು ಹೊಂದಿದ್ದು, ಭಾರತದ ಸೇನಾ ವಿಭಾಗಗಳಿಗಾಗಿ ವಿವಿಧ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುತ್ತಿದೆ.
4. ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿ ಇಲಾಖೆ (ಡಿಇಎಸ್‌ಡಬ್ಲ್ಯು)
ಈ ಇಲಾಖೆ ನಿವೃತ್ತ ಯೋಧರ ಯೋಗಕ್ಷೇಮ ಮತ್ತು ಪುನರ್ವಸತಿ ವ್ಯವಸ್ಥೆಗಳನ್ನು ನಿರ್ವಹಿಸುತ್ತಿದೆ. ಇದು ಡೈರೆಕ್ಟರೇಟ್ ಜನರಲ್ ಆಫ್ ರಿಸೆಟಲ್ಮೆಂಟ್, ಕೇಂದ್ರೀಯ ಸೈನಿಕ್ ಬೋರ್ಡ್, ಮತ್ತು ಎಕ್ಸ್ ಸರ್ವಿಸ್‌ಮೆನ್ ಕಾಂಟ್ರಿಬ್ಯುಟರಿ ಹೆಲ್ತ್ ಸ್ಕೀಮ್‌ಗಳನ್ನು ನಿರ್ವಹಿಸುತ್ತಿದೆ.
5. ಮಿಲಿಟರಿ ವ್ಯವಹಾರಗಳ ಇಲಾಖೆ (ಡಿಎಂಎ)
ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಅವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುವ ಈ ಇಲಾಖೆ, ಸಶಸ್ತ್ರ ಪಡೆಗಳ ಮಧ್ಯದ ಸಹಯೋಗವನ್ನು ಪ್ರತಿಪಾದಿಸುತ್ತದೆ. ಇದು ಸೇನಾ ವಿಭಾಗಗಳಿಗೆ ಸಂಬಂಧಿಸಿದ ವಿಚಾರಗಳನ್ನು ನಿರ್ವಹಿಸುತ್ತಿದ್ದು, ಸೇನಾ ಪಡೆಗಳ ಸಂಘಟನೆ, ತರಬೇತಿ, ಮತ್ತು ಕಾರ್ಯಾಚರಣೆಗಳನ್ನು ಒಳಗೊಂಡಿದೆ.
ಇತರ ಪ್ರಮುಖ ಸಂಸ್ಥೆಗಳು:
ಬಾರ್ಡರ್ ರೋಡ್ ಆರ್ಗನೈಸೇಶನ್ (ಬಿಆರ್‌ಒ): ಈ ಸಂಸ್ಥೆ ಗಡಿ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿ ಹೊಂದಿದೆ.
ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ): ಇದೊಂದು ಯುವ ಜನರ ಸಂಸ್ಥೆಯಾಗಿದ್ದು, ವಿದ್ಯಾರ್ಥಿಗಳಿಗೆ ಸೇನಾ ತರಬೇತಿ ನೀಡುತ್ತದೆ.
ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್‌ಮೆಂಟ್ (ಸಿಎಸ್‌ಡಿ): ಇದು ಸೇನಾ ಪಡೆಗಳ ಸಿಬ್ಬಂದಿಗಳಿಗೆ ರಿಯಾಯಿತಿ ದರದಲ್ಲಿ ಗ್ರಾಹಕ ವಸ್ತುಗಳನ್ನು ಒದಗಿಸುತ್ತವೆ.
ರಕ್ಷಣಾ ಲೆಕ್ಕಪತ್ರ ವಿಭಾಗ: ಇದು ಸೇನಾ ಪಡೆಗಳ ಲೆಕ್ಕಪತ್ರವನ್ನು ನಿರ್ವಹಿಸುತ್ತದೆ.
ಇದೊಂದು ಸಂಪೂರ್ಣ ಪಟ್ಟಿಯಾಗಿಲ್ಲದಿದ್ದರೂ, ಇದು ಭಾರತದ ರಕ್ಷಣಾ ಸಚಿವಾಲಯದಡಿ ಇರುವ ಪ್ರಮುಖ ನಾಗರಿಕ ಸಂಸ್ಥೆಗಳನ್ನು ವಿವರಿಸಿದೆ. ಈ ಸಂಸ್ಥೆಗಳು ಭಾರತದ ಸೇನಾ ಪಡೆಗಳಿಗೆ ಬೆಂಬಲ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆ ಮೂಲಕ ಭಾರತದ ಭದ್ರತೆ ಮತ್ತು ರಕ್ಷಣೆಯನ್ನು ಖಾತ್ರಿಪಡಿಸುತ್ತವೆ.
ಪ್ರಜಾಪ್ರಭುತ್ವದ ಹಬ್ಬಕ್ಕೆ ಭಾರತೀಯ ಸೇನೆ ಸಜ್ಜು: ಗಣರಾಜ್ಯೋತ್ಸವದಲ್ಲಿ ಈ ಬಾರಿ 'ಸ್ವರ್ಣಿಮ್ ಭಾರತ್'
(ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ನೀವು ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
