Asianet Suvarna News Asianet Suvarna News

ಬಜೆಟ್‌ಗಿದೆ 164 ವರ್ಷಗಳ ಇತಿಹಾಸ, ಇಂದು ಸಂಸತ್‌ನಲ್ಲಿ 88ನೇ ಕೇಂದ್ರ ಬಜೆಟ್‌ ಮಂಡನೆ ।

ಭಾರತದಲ್ಲೂ ಕೇಂದ್ರ ಸರ್ಕಾರ ಮಂಡಿಸುವ ಬಜೆಟ್‌ಗೆ ಸುದೀರ್ಘ ಇತಿಹಾಸವಿದೆ. ಕೇಂದ್ರ ಸಚಿವೆ ನಿರ್ಮಲಾ ದಾಖಲೆಯ ಸತತ 7ನೇ ಬಜೆಟ್‌ ಮಂಡನೆ ಹೊತ್ತಲ್ಲಿ ದೇಶದ ಬಜೆಟ್‌ ಇತಿಹಾಸದ ಒಂದು ಹಿನ್ನೋಟ ಇಲ್ಲಿದೆ.

Union budget 2024 History of Indian Union Budget mrq
Author
First Published Jul 23, 2024, 9:14 AM IST | Last Updated Jul 23, 2024, 9:20 AM IST

ನವದೆಹಲಿ: ಮನೆಯ ಯಜಮಾನ ಮಾಸಿಕ ವೇತನ ತಂದು ಕೊಟ್ಟರೆ ಮನೆಯೊಡತಿ ಇಡೀ ತಿಂಗಳ ಖರ್ಚು ವೆಚ್ಚದ ಪಟ್ಟಿ ಮಾಡಿ ಅದರಂತೆ ಹಣ ವಿನಿಯೋಗದ ಯೋಜನೆ ರೂಪಿಸುತ್ತಾಳೆ. ದೇಶದ ವಿಷಯದಲ್ಲೂ ಇದೇ ಸಂಪ್ರದಾಯ ಪಾಲನೆಯಾಗುತ್ತದೆ. ಆದರೆ ಇಲ್ಲಿ ತಿಂಗಳ ಬದಲು ವರ್ಷದ ಲೆಕ್ಕ. ಇಲ್ಲಿ ಪ್ರಧಾನಿ ಹುದ್ದೆ ಮನೆಯೊಡೆಯನ ಪಾತ್ರ ನಿರ್ವಹಿಸಿದರೆ ಹಣಕಾಸು ಇಲಾಖೆ ಮನೆಯೊಡತಿಯಂತೆ ಕಾರ್ಯನಿರ್ವಹಿಸುತ್ತದೆ. ಇಂಥದ್ದೊಂದು ಲೆಕ್ಕಾಚಾರ ಶತ ಶತಮಾನಗಳಿಂದಲೂ ವಿಶ್ವದೆಲ್ಲೆಡೆ ಪಾಲನೆಯಾಗುತ್ತಿದೆ. ಬಜೆಟ್‌ ಎಂದರೆ ಫ್ರೆಂಚ್ ಭಾಷೆಯಲ್ಲಿ ಚರ್ಮದ ಬ್ಯಾಗ್‌ ಎಂದರ್ಥ. ಈ ಪದದ ಮೂಲ ಲ್ಯಾಟಿನ್‌ನ ಭಾಷೆಯ ಬಲ್ಗಾ. ಭಾರತದಲ್ಲೂ ಕೇಂದ್ರ ಸರ್ಕಾರ ಮಂಡಿಸುವ ಬಜೆಟ್‌ಗೆ ಸುದೀರ್ಘ ಇತಿಹಾಸವಿದೆ. ಕೇಂದ್ರ ಸಚಿವೆ ನಿರ್ಮಲಾ ದಾಖಲೆಯ ಸತತ 7ನೇ ಬಜೆಟ್‌ ಮಂಡನೆ ಹೊತ್ತಲ್ಲಿ ದೇಶದ ಬಜೆಟ್‌ ಇತಿಹಾಸದ ಒಂದು ಹಿನ್ನೋಟ ಇಲ್ಲಿದೆ.

ಬಜೆಟ್ ಎಂದರೇನು?

ಬಜೆಟ್, ವ್ಯವಸ್ಥೆಯೊಂದರ ಒಂದಿಡೀ ವರ್ಷದ ಹಣಕಾಸು ವರದಿ. ಸಂವಿಧಾನ ಪರಿಚ್ಚೇಧ 112ರ ಪ್ರಕಾರ ಕೇಂದ್ರ ಬಜೆಟ್ ಎಂದರೆ ಪ್ರಸ್ತಕ ಹಣಕಾಸು ವರ್ಷಕ್ಕೆ ಸರ್ಕಾರದ ಅಂದಾಜು ಆದಾಯ ಮತ್ತು ವೆಚ್ಚಗಳ ಲೆಕ್ಕ ಎಂದರ್ಥ. ಹಣಕಾಸು ವರ್ಷ ಎಂದರೆ ಏ.1 ರಿಂದ ಮುಂದಿನ ಮಾರ್ಚ್‌ 31ರವರೆಗೆ ಅಂತ್ಯಗೊಳ್ಳುವುದು. ಕೇಂದ್ರ ಬಜೆಟ್‌ ಎರಡು ಭಾಗ ಹೊಂದಿರುತ್ತದೆ. ಒಂದು ರೆವಿನ್ಯೂ ಬಜೆಟ್ ಮತ್ತೊಂದು ಕ್ಯಾಪಿಟಲ್ ಬಜೆಟ್. ರೆವಿನ್ಯೂ ಬಜೆಟ್‌ ಸರ್ಕಾರಕ್ಕೆ ಬರುವ ಆದಾಯ ಸೂಚಿಸಿದರೆ, ಕ್ಯಾಪಿಟಲ್ ಬಜೆಟ್ ಸರ್ಕಾರ ಋಣಭಾರ, ಸಾಲ ಸೂಚಿಸುತ್ತದೆ.

ಬ್ಲ್ಯೂ ಪ್ರಿಂಟ್ ತಯಾರಿ ಹೇಗೆ?

ಕೇಂದ್ರ ಬಜೆಟ್‌ ತಯಾರಿಯ ಬ್ಲ್ಯೂ ಪ್ರಿಂಟ್ ವಿವಿಧ ಹಂತದಲ್ಲಿ ನಡೆಯುತ್ತದೆ. ತಯಾರಿಗೆ ಪೂರ್ವ ಸಮಾಲೋಚನೆಗಳು ನಡೆಯುತ್ತದೆ. ಹಣಕಾಸು ಸಚಿವರು, ಉದ್ಯಮ ಸಂಘಟನೆಗಳು, ಉದ್ಯಮಿಗಳು, ರೈತ ಸಂಘಟನೆ, ಕಾರ್ಮಿಕ ಸಂಘಟನೆ, ಆರ್ಥಿಕ ತಜ್ಞರು, ವಿವಿಧ ಕ್ಷೇತ್ರದ ತಜ್ಞರ ಜೊತೆ ಸಮಾಲೋಚನೆ ನಡೆಯುತ್ತದೆ.

ಬಜೆಟ್‌ ಸಿದ್ಧತೆ ಸಭೆಯಲ್ಲಿ ಯಾರೆಲ್ಲ ಭಾಗಿ?

ಸಮಾಲೋಚನೆ ಬಳಿಕದ ಬಜೆಟ್‌ ಸಿದ್ಧತೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗುತ್ತಾರೆ. ಹಣಕಾಸು ಸಚಿವರು, ಹಣಕಾಸು ಕಾರ್ಯದರ್ಶಿ, ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ, ಕಂದಾಯ ಇಲಾಖೆ ಕಾರ್ಯದರ್ಶಿ, ವೆಚ್ಚ ಇಲಾಖೆ ಕಾರ್ಯದರ್ಶಿ, ಮುಖ್ಯ ಆರ್ಥಿಕ ಸಲಹೆಗಾರ, ಜಂಟಿ ಕಾರ್ಯದರ್ಶಿಗಳು ಮತ್ತು ನಿರ್ದೇಶಕರು, ಹಣಕಾಸು, ವಿವಿಧ ಇಲಾಖೆಯ ಸಚಿವಾಲಯಗಳು ಮತ್ತು ಇಲಾಖೆಗಳು, ನೀತಿ ಆಯೋಗ, ಆರ್‌ಬಿಐ ಗವರ್ನರ್, ಭಾರತದ ಕಂಟ್ರೋಲರ್ ಮತ್ತು ಆಡಿಟರ್‌ ಜನರಲ್‌ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗುತ್ತಾರೆ.

Budget 2024 LIVE: ಮೂರನೇ ಬಾರಿ ಮೋದಿಗೆ ಅಧಿಕಾರ, ಬಜೆಟ್‌ನಲ್ಲಿ ಇರುತ್ತಾ ಬಡಬದುಕಿಗೆ ಪರಿಹಾರ?

ಕೇಂದ್ರ ಬಜೆಟ್ ಪ್ರಕ್ರಿಯೆ ಹೇಗೆ?

ಆರಂಭಿಕ ಹಂತ:

1. ಮಂಡನೆಗೆ ಆರು ತಿಂಗಳ ಮುಂಚೆಯೇ ಬಜೆಟ್ ರಚನೆ ಪ್ರಕ್ರಿಯೆ ಆರಂಭವಾಗುತ್ತದೆ. ಹಣಕಾಸು ಸಚಿವಾಲಯ ಮತ್ತು ಅದಕ್ಕೆ ಸಂಬಂಧಿತ ಸಚಿವಾಲಯ ಮತ್ತು ಇಲಾಖೆಗಳಿಗೆ ಅಗತ್ಯ ಸೂಚನೆ ಮತ್ತು ಮಾರ್ಗಸೂಚಿಗಳೊಂದಿಗೆ ಸುತ್ತೋಲೆಗಳನ್ನು ನೀಡುತ್ತದೆ.

2. ವಿವಿಧ ಇಲಾಖೆಗಳು ವಿಭಾಗದ ಅಧಿಕಾರಿಗಳಿಗೆ ತಮ್ಮ ಇಲಾಖೆಗಳ ಹಣಕಾಸಿನ ವೆಚ್ಚ, ಪ್ರಸ್ತುತ ಮತ್ತು ಹಿಂದಿನ ಆರ್ಥಿಕ ವಹಿವಾಟಿನ ಲೆಕ್ಕಾಚಾರ, ಮುಂಬರುವ ಆರ್ಥಿಕ ವರ್ಷಕ್ಕೆ ಬೇಕಾಗುವ ಹಣಕಾಸಿನ ಅವಶ್ಯಕತೆಗಳ ಬಗ್ಗೆ ವಿವರಗಳನ್ನು ಸಲ್ಲಿಕೆ ಮಾಡುತ್ತದೆ.

3. ಕೆಳ ಹಂತದ ಅಧಿಕಾರಿಗಳು ಸಲ್ಲಿಸಿದ ಹಣಕಾಸಿನ ಆಯವ್ಯಯ ಲೆಕ್ಕಾಚಾರಗಳನ್ನು ಉನ್ನತ ಅಧಿಕಾರಿಗಳು ಕೂಲಂಕಷವಾಗಿ ಪರೀಶಿಲನೆ ನಡೆಸುತ್ತಾರೆ. ಬಳಿಕ ಅನುಮೋದನೆ ಅಥವಾ ಪರಿಷ್ಕರಣೆಗೆ ನಡೆದು ಅಂಕಿ ಅಂಶ ಸಚಿವಾಲಯಕ್ಕೆ ಸಲ್ಲಿಕೆಯಾಗುತ್ತದೆ. ಸಚಿವಾಲಯ ಆ ಪಟ್ಟಿಯನ್ನು ಹಣಕಾಸು ಇಲಾಖೆಗೆ ಕಳುಹಿಸುತ್ತದೆ. ನಂತರ ಹಣಕಾಸು ಇಲಾಖೆ , ಎಲ್ಲ ಇಲಾಖೆಗಳು ಸಲ್ಲಿಸಿರುವ ಪಟ್ಟಿಯನ್ನು ನೋಡಿ ಸಾಧ್ಯ ಸಾಧ್ಯತೆಯನ್ನು ಗಮನಿಸಿ ಲಭ್ಯವಿರುವ ಸಂಪನ್ಮೂಲಗಳ ಆಧಾರದಲ್ಲಿ ಆಯವ್ಯಯ ಪಟ್ಟಿ ಸಿದ್ಧತೆಗೆ ಮುಂದಾಗುತ್ತದೆ.

4. ದತ್ತಾಂಶ ಕ್ರೋಢಿಕರಣದ ಬಳಿಕ ಹಣಕಾಸು ಇಲಾಖೆ ಬಜೆಟ್ ರಚನೆಗೆ ಮುಂದಾಗುತ್ತದೆ. ವಿವಿಧ ಇಲಾಖೆಗಳಿಗೆ ಆದಾಯದ ಹಂಚಿಕೆ ಮಾಡಿ, ಹೊಸ ಯೋಜನೆಗಳನ್ನು ಸಿದ್ಧಪಡಿಸುತ್ತದೆ. ಪ್ರಧಾನಿ ಮತ್ತು ವಿತ್ತ ಸಚಿವರ ಜೊತೆ ಚರ್ಚೆ ನಡೆಸಲಾಗುತ್ತದೆ. ಅವರ ತೀರ್ಮಾನವೇ ಅಂತಿಮ.

5. ಸಂಪನ್ಮೂಲಗಳ ಹಂಚಿಕೆ ಬಳಿಕ ಹಣಕಾಸು ಸಚಿವಾಲಯವು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಮತ್ತು ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿಯ ಸಹಯೋಗದೊಂದಿಗೆ ಮುಂದಿನ ವರ್ಷದ ಆದಾಯದ ವರದಿ ಸಿದ್ಧ ಪಡಿಸುತ್ತದೆ.

6. ಅಂತಿಮವಾಗಿ ವಿತ್ತ ಸಚಿವರು ಬಜೆಟ್‌ ಮಂಡನೆ ಮಾಡುವುದು ಬಜೆಟ್‌ ಪ್ರಕ್ರಿಯೆಯ ಕೊನೆಯ ಹಂತ. ಬಜೆಟ್‌ ಅನ್ನು ಸಾಮಾನ್ಯವಾಗಿ ಫೆ.1 ರಂದು ಮಂಡಿಸಲಾಗುತ್ತದೆ. ಆದರೆ ಚುನಾವಣೆ ವರ್ಷದಲ್ಲಿ ಬಾರಿ ಬಜೆಟ್ ಮಂಡಿಸಲಾಗುತ್ತದೆ. ಒಂದು ಮಧ್ಯಂತರ ಬಜೆಟ್ ಮತ್ತೊಂದು ಪೂರ್ಣಾವಧಿ ಬಜೆಟ್‌.

ಹಲ್ವಾ ಸಮಾರಂಭದೊಂದಿಗೆ ಬಜೆಟ್‌ ಮುದ್ರಣ

ಕೇಂದ್ರ ಬಜೆಟ್‌ ಮುದ್ರಣ ಪ್ರಕ್ರಿಯೆಯು ‘ಹಲ್ವಾ’ ತಯಾರಿಯೊಂದಿಗೆ ಚಾಲನೆಗೊಳ್ಳುತ್ತದೆ. ಬಜೆಟ್‌ ಅಧಿವೇಶನಕ್ಕೆ 8-10 ದಿನಗಳ ಮುಂಚೆ ಹಣಕಾಸು ಇಲಾಖೆ ಈ ಕಾರ್ಯಕ್ರಮ ಆಯೋಜಿಸುತ್ತದೆ. ದೊಡ್ಡ ಬಾಣಲೆಯಲ್ಲಿ ತಯಾರಿಸಿದ ಹಲ್ವಾವನ್ನು ಹಣಕಾಸು ಸಚಿವರು ಹಂಚಿಕೆ ಮಾಡುತ್ತಾರೆ. ಬಜೆಟ್‌ ಗೌಪತ್ಯೆ ಕಾಪಾಡಲು ಹಲ್ವಾ ಸಮಾರಂಭ ನಡೆಸಲಾಗುತ್ತದೆ. ಈ ಕಾರ್ಯಕ್ರಮದ ಬಳಿಕ ಬಜೆಟ್‌ ತಯಾರಿಕೆಯಲ್ಲಿ ನಿರತ ಅಧಿಕಾರಿಗಳೆಲ್ಲಾ ಒಂದೆಡೆ ಬಂಧಿ ಆಗುತ್ತಾರೆ. ಬಜೆಟ್‌ ಮಂಡಿಸುವವರೆಗೆ ಅವರು ಮನೆಗೆ ಹೋಗುವಂತಿಲ್ಲ. ಯಾರ ಜೊತೆಯೂ ಸಂಪರ್ಕ ಸಾಧಿಸುವಂತಿಲ್ಲ. ಬಜೆಟ್ ಮುದ್ರಣ ಕಾರ್ಯಕ್ಕಾಗಿ ಅವರೆಲ್ಲರೂ ಉತ್ತರ ಬ್ಲಾಕ್‌ನ ಕೆಳ ಅಂತಸ್ತಿನಲ್ಲಿ ಉಳಿದುಕೊಳ್ಳುತ್ತಾರೆ. ಆರಂಭದಲ್ಲಿ ಬಜೆಟ್‌ ಮುದ್ರಣವು ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿತ್ತು. ಬಳಿಕ ಹಣಕಾಸು ಸಚಿವಾಲಯದ ಪ್ರಧಾನ ಉತ್ತರ ಬ್ಲಾಕ್‌ನ ನೆಲ ಮಾಳಿಗೆಯಲ್ಲಿ ಪ್ರತ್ಯೇಕ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಮುದ್ರಣವಾಗುತ್ತಿದೆ.

ನಿರ್ಮಲಾ ಸೀತಾರಾಮನ್ ದಾಖಲೆ ಬಜೆಟ್ ಮೇಲಿನ ನಿರೀಕ್ಷೆ ಏನೇನು? ಇಲ್ಲಿದೆ ಕಿರುಮಾಹಿತಿ

Latest Videos
Follow Us:
Download App:
  • android
  • ios