Asianet Suvarna News Asianet Suvarna News

Union Budget 2023:ಕೆವೈಸಿ ಪ್ರಕ್ರಿಯೆ ಸರಳ; ಡಿಜಿಟಲ್ ವ್ಯವಸ್ಥೆಗೆ ಪ್ಯಾನ್ ಸಾಮಾನ್ಯ ಗುರುತು ದೃಢೀಕರಣ ದಾಖಲೆ

ಕೆವೈಸಿ ಪ್ರಕ್ರಿಯೆ ಸರಳೀಕರಣಕ್ಕೆ ಈ ಬಾರಿಯ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ. ಸರ್ಕಾರಿ ಸಂಸ್ಥೆಗಳ ಡಿಜಿಟಲ್ ವ್ಯವಸ್ಥೆಯಲ್ಲಿ ಪ್ಯಾನ್ ಕಾರ್ಡ್ ಅನ್ನು ಸಾಮಾನ್ಯ ಗುರುತು ದೃಢೀಕರಣ ದಾಖಲೆಯಾಗಿ ಬಳಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದರಿಂದ ಉದ್ಯಮಗಳಿಗೆ ಸಾಕಷ್ಟು ಪ್ರಯೋಜನವಾಗಲಿದೆ. 

Union Budget 2023 KYC simplified Govt proposes PAN as common identifier
Author
First Published Feb 1, 2023, 7:53 PM IST

ನವದೆಹಲಿ (ಫೆ.1): ಆದಾಯ ತೆರಿಗೆ ಇಲಾಖೆ ಸೆರಿದಂತೆ ವಿವಿಧ ಸರ್ಕಾರಿ ಏಜೆನ್ಸಿಗಳಲ್ಲಿ ಪ್ಯಾನ್ ಕಾರ್ಡ್ ಹೊಂದಿರೋರಿಗೆ ಇನ್ನು ಮುಂದೆ ಕೆವೈಸಿ ಪ್ರಕ್ರಿಯೆ ಸುಲಭವಾಗಲಿದೆ. ನಿರ್ದಿಷ್ಟ ಸರ್ಕಾರಿ ಸಂಸ್ಥೆಗಳ ಡಿಜಿಟಲ್ ವ್ಯವಸ್ಥೆಯಲ್ಲಿ ಗುರುತಿನ ದೃಢೀಕರಣಕ್ಕೆ ಕಾಯಂ ಖಾತೆ ಸಂಖ್ಯೆಯನ್ನು (ಪ್ಯಾನ್ ) ಸಾಮಾನ್ಯ ಗುರುತಿನ ಸಾಧನವಾಗಿ ಪರಿಗಣಿಸಬಹುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಘೋಷಿಸಿದ್ದಾರೆ.  ಈ ಬದಲಾವಣೆಯಿಂದ ಆದಾಯ ತೆರಿಗೆ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಕೆವೈಸಿ ಪ್ರಕ್ರಿಯೆ ಸರಳವಾಗಲಿದೆ. ಜೊತೆಗೆ ಪ್ಯಾನ್ ಕಾರ್ಡ್ ಹೊಂದಿರೋರ ದಾಖಲೆಗಳನ್ನು ನಿರ್ವಹಣೆ ಮಾಡುವುದು ಕೂಡ ಸುಲಭವಾಗಲಿದೆ. ಇನ್ನು ಉದ್ಯಮ ಸಂಸ್ಥೆಗಳಿಗೆ ಕೂಡ ಕೆವೈಸಿ ಪ್ರಕ್ರಿಯೆ ಸರಳವಾಗಲಿದೆ. ಉದ್ಯಮ ಸಂಸ್ಥೆಗಳು ಪ್ಯಾನ್ ಕಾರ್ಡ್ ಹೊಂದಿರೋದು ಕಡ್ಡಾಯವಾಗಿದ್ದು, ಸರ್ಕಾರಿ ಸಂಸ್ಥೆಗಳ ಡಿಜಿಟಲ್ ವ್ಯವಸ್ಥೆಗೆ ಇದನ್ನು ಗುರುತು ದೃಢೀಕರಣವಾಗಿ ಬಳಸಬಹುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಪ್ರಸ್ತುತ ಸರ್ಕಾರಿ ಪೋರ್ಟಲ್ ಗಳಲ್ಲಿ ವಿವಿಧ ದಾಖಲೆಗಳನ್ನು ಪ್ರಾಥಮಿಕ ಗುರುತಿನ ದೃಢೀಕರಣವಾಗಿ ಬಳಸಲಾಗುತ್ತಿದೆ. 

ಪ್ಯಾನ್ ಕಾರ್ಡ್ ರೂಪದಲ್ಲಿ ಒಂದೇ ಸಾಮಾನ್ಯ ಗುರುತು ದೃಢೀಕರಣ ಬಳಕೆಯಿಂದ ಹೂಡಿಕೆದಾರರಿಗೆ ಪ್ರಕ್ರಿಯೆಗಳು ಸರಳಗೊಳ್ಳಲಿವೆ. ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯಮ ಸಂಬಂಧಿ ಕೆಲಸಗಳಿಗೆ ಸರಕು ಹಾಗೂ ಸೇವೆಗಳ ತೆರಿಗೆ (ಜಿಎಸ್ ಟಿ) ಗುರುತಿನ ಸಂಖ್ಯೆ (GSTIN), ತೆರಿಗೆದಾರರ ಗುರುತು ಸಂಖ್ಯೆ (TIN),ತೆರಿಗೆ ಕಡಿತ ಖಾತೆ ಸಂಖ್ಯೆ (TDA),ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO), ಕಾರ್ಪೋರೇಟ್ ಗುರುತಿನ ಸಂಖ್ಯೆ (CIN) ಸೇರಿದಂತೆ ಸುಮಾರು 20 ದಾಖಲೆಗಳನ್ನು ಗುರುತು ದೃಢೀಕರಣಕ್ಕೆ ಬಳಸಲಾಗುತ್ತಿದೆ. ಹೀಗಾಗಿ ಪ್ಯಾನ್ ಕಾರ್ಡ್ ಅನ್ನು ಸಾಮಾನ್ಯ ಗುರುತಿನ ದೃಢೀಕರಣವಾಗಿ ಬಳಸೋದ್ರಿಂದ ಉದ್ಯಮ ಸಂಸ್ಥೆಗಳಿಗೆ ಕ್ಲಿಯರೆನ್ಸ್, ನೋಂದಣಿ ಹಾಗೂ ಅನುಮತಿ ಪ್ರಕ್ರಿಯೆಗಳು ಸರಳಗೊಳ್ಳಲಿವೆ. 

ಬಜೆಟ್ ಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ 

ಇನ್ನು ಡಿಜಿಟಲ್ ಇಂಡಿಯಾ ಅಗತ್ಯಗಳಿಗೆ ಅನುಗುಣವಾಗಿ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಹಣಕಾಸು ವಲಯದ ನಿಯಂತ್ರಕರಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇನ್ನು ಸರ್ಕಾರದ ವಿವಿಧ ಸಂಸ್ಥೆಗಳು, ನಿಯಂತ್ರಕರು ನಾಗರಿಕರ ಗುರುತು ಹಾಗೂ ವಿಳಾಸ ಪರಿಷ್ಕರಣೆ ಹಾಗೂ ನವೀಕರಣಕ್ಕೆ ಡಿಜಿಲಾಕರ್ ಸೇವೆ ಬಳಸುವ ಬಗ್ಗೆ ಕೂಡ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದಾರೆ. ಹಾಗೆಯೇ ಆಧಾರ್ ಅನ್ನು ಇದಕ್ಕೆ ಮೂಲ ದಾಖಲೆಯಾಗಿ ಬಳಸುವ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ. 

Union Budget 2023:ಸತತ ಮೂರು ವರ್ಷಗಳಿಂದ ಬಂಡವಾಳ ವೆಚ್ಚ ಏರಿಕೆ; 2023-24ನೇ ಸಾಲಿಗೆ 10 ಲಕ್ಷ ಕೋಟಿ ರೂ. ಘೋಷಣೆ

ಕಾಯಂ ಖಾತೆ ಸಂಖ್ಯೆ ಅಥವಾ ಪ್ಯಾನ್  ಅನ್ನೋದು 10 ಅಂಕೆಗಳ ಇಂಗ್ಲಿಷ್ ಅಕ್ಷರಗಳು ಹಾಗೂ ಸಂಖ್ಯೆಗಳ ಸಮೂಹ. ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ಗಳನ್ನು ವಿತರಿಸುತ್ತದೆ. ಪ್ಯಾನ್ ಕಾರ್ಡ್ ಪ್ರಮುಖ ಗುರುತು ದೃಢೀಕರಣ ದಾಖಲೆಯಾಗಿದ್ದು, ಮುಖ್ಯವಾಗಿ ತೆರಿಗೆ ಸಂಬಂಧಿ ಉದ್ದೇಶಗಳಿಗೆ ಬಳಸಲಾಗುತ್ತದೆ. ಆಧಾರ್ ಜೊತೆಗೆ ಪ್ಯಾನ್ ಕಾರ್ಡ್  ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆ 2023ರ ಮಾರ್ಚ್ 31ರ ತನಕ ಕಾಲಾವಕಾಶ ನೀಡಿದೆ. ಈಗಾಗಲೇ ಕೇಂದ್ರ ಸರ್ಕಾರ ಪ್ಯಾನ್ -ಆಧಾರ್ ಜೋಡಣೆ ಅಂತಿಮ ಗಡುವನ್ನುಅನೇಕ ಬಾರಿ ವಿಸ್ತರಿಸಿದೆ ಕೂಡ. ಒಮ್ಮೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ನಿಮಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಲು ಸಾಧ್ಯವಾಗೋದಿಲ್ಲ.ಅಲ್ಲದೆ, ಬ್ಯಾಂಕ್ ಖಾತೆ ತೆರೆಯಲು, ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಹಾಗೂ ಡಿಮ್ಯಾಟ್ ಖಾತೆ ತೆರೆಯಲು ಸಾಧ್ಯವಾಗೋದಿಲ್ಲ. ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಕೂಡ ತೊಂದರೆ ಎದುರಾಗಲಿದೆ. 

Follow Us:
Download App:
  • android
  • ios