Union Budget 2023:ಸತತ ಮೂರು ವರ್ಷಗಳಿಂದ ಬಂಡವಾಳ ವೆಚ್ಚ ಏರಿಕೆ; 2023-24ನೇ ಸಾಲಿಗೆ 10 ಲಕ್ಷ ಕೋಟಿ ರೂ. ಘೋಷಣೆ

ಕಳೆದೆರಡು ವರ್ಷಗಳಲ್ಲಿ ಕೇಂದ್ರ ಸರ್ಕಾರ ಬಂಡವಾಳ ವೆಚ್ಚದಲ್ಲಿ ಹೆಚ್ಚಳ ಮಾಡಿದೆ. ಈ ವರ್ಷದ ಬಜೆಟ್ ನಲ್ಲಿ ಕೂಡ ಬಂಡವಾಳ ವೆಚ್ಚದಲ್ಲಿ ಶೇ.33 ಹೆಚ್ಚಳ ಮಾಡಲಾಗಿದೆ.  2023-24ನೇ ಆರ್ಥಿಕ ಸಾಲಿಗೆ 10 ಲಕ್ಷ ಕೋಟಿ ರೂ. ಬಂಡವಾಳ ವೆಚ್ಚ ಘೋಷಣೆ ಮಾಡಲಾಗಿದೆ. 
 

Union Budget 2023 Capital Expenditure Increased By 33percent To Rs 10 Lakh Crores

ನವದೆಹಲಿ (ಫೆ.1): 2023-24ನೇ ಆರ್ಥಿಕ ಸಾಲಿನಲ್ಲಿ ದೀರ್ಘಾವಧಿಯ ಬಂಡವಾಳ ವೆಚ್ಚಕ್ಕೆ ಕೆಂದ್ರ ಸರ್ಕಾರ 10 ಲಕ್ಷ ಕೋಟಿ ರೂ. ವ್ಯಯಿಸಲಿದೆ ಎಂದು ಇಂದು (ಫೆ.1) ಮಂಡಿಸಿದ 2023ನೇ ಸಾಲಿನ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಈ ಮೂಲಕ ಬಂಡವಾಳ ಹೂಡಿಕೆ ವೆಚ್ಚವನ್ನು ಶೇ.33ರಷ್ಟು ಹೆಚ್ಚಳ ಮಾಡಲಾಗಿದೆ. ಇದು ಜಿಡಿಪಿಯ ಶೇ.3.3ರಷ್ಟಿದೆ.  ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗಲು ಕೇಂದ್ರ ಸರ್ಕಾರ ಬೃಹತ್ ಬಂಡವಾಳ ವೆಚ್ಚವನ್ನು ಘೋಷಿಸಲು ಪ್ರಾರಂಭಿಸಿತ್ತು. ಆ ಕ್ರಮವನ್ನು ಈ ವರ್ಷ ಕೂಡ ಮುಂದುವರಿಸಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023ನೇ ಆರ್ಥಿಕ ಸಾಲಿನಲ್ಲಿ  ₹7.50 ಲಕ್ಷ ಕೋಟಿ ಬಂಡವಾಳ ವೆಚ್ಚ ಘೋಷಿಸಿದ್ದರು. 2023ನೇ ಆರ್ಥಿಕ ಸಾಲಿನ ಬಂಡವಾಳ ವೆಚ್ಚದಲ್ಲಿ ದಾಖಲೆಯ ಶೇ.35.4 ಏರಿಕೆ ಘೋಷಿಸಲಾಗಿತ್ತು. 2022ನೇ ಆರ್ಥಿಕ ಸಾಲಿನಲ್ಲಿ ₹5.54 ಲಕ್ಷ ಕೋಟಿ ರೂ. ಬಂಡವಾಳ ವೆಚ್ಚ ಘೋಷಿಸಲಾಗಿತ್ತು. ಸತತ ಮೂರು ವರ್ಷಗಳಿಂದ ಕೇಂದ್ರ ಸರ್ಕಾರ ಬಂಡವಾಳ ವೆಚ್ಚದಲ್ಲಿ ಏರಿಕೆ ಮಾಡುತ್ತ ಬಂದಿದೆ. 2024ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ  ಈ ಬಾರಿಯ ಬಜೆಟ್ ಭಾಷಣದಲ್ಲಿ ವಿತ್ತ ಸಚಿವರು ಮೂಲಸೌಕರ್ಯ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಿರೋದು ಸ್ಪಷ್ಟವಾಗಿದೆ. 

2021-22ನೇ ಆರ್ಥಿಕ ಸಾಲಿನಲ್ಲಿ  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಂಡವಾಳ ವೆಚ್ಚವನ್ನು ₹5.54 ಲಕ್ಷ ಕೋಟಿಗೆ ಹೆಚ್ಚಿಸಿದ್ದರು. ಇದು 2021ರ ಬಜೆಟ್‌ಗಾಗಿ ಮೊದಲು ಅಂದಾಜಿಸಿದ್ದ ₹4.39 ಲಕ್ಷ ಕೋಟಿಗಿಂತ ಪರಿಷ್ಕೃತ ಅಂದಾಜಿನಲ್ಲಿ ಶೇ.26% ರಷ್ಟು ಏರಿಕೆಯಾಗಿತ್ತು. ಬಂಡವಾಳ ವೆಚ್ಚ ಹಾಗೂ ಜಿಡಿಪಿ ಪ್ರಮಾಣ 2022-23ರಲ್ಲಿ ಶೇ.2.7ರಷ್ಟಿತ್ತು. ಇದನ್ನು 2023-24ನೇ ಆರ್ಥಿಕ ಸಾಲಿನಲ್ಲಿ ಶೇ.3.3ಕ್ಕೆ ಅಂದಾಜಿಸಲಾಗಿದೆ. ಖಾಸಗಿ ಬಂಡವಾಳ ವೆಚ್ಚದ ಅನುಪಸ್ಥಿತಿಯಲ್ಲಿ ಸರ್ಕಾರದ ಬಂಡವಾಳ ವೆಚ್ಚವು ಆರ್ಥಿಕತೆಗೆ ಪರಿಣಾಮಕಾರಿ  ಬೆಂಬಲ ನೀಡುತ್ತಿದೆ. ವಿಶ್ವದ ಮೂರನೇ ಅತೀದೊಡ್ಡ ಆರ್ಥಿಕತೆಯಾಗಿ ಬೆಳೆಯುವ ಭಾರತದ ಕನಸಿಗೆ ನೀರೆರೆಯಲು ಬಂಡವಾಳ ವೆಚ್ಚ ಹೆಚ್ಚಳ ಮಾಡೋದು ಸರ್ಕಾರಕ್ಕೆ ಅನಿವಾರ್ಯವಾಗಿದೆ ಕೂಡ. ಬಂಡವಾಳ ಆಸ್ತಿಗಳ ಸೃಷ್ಟಿಗಾಗಿ ರಾಜ್ಯಗಳಿಗೆ ಅನುದಾನದ ರೂಪದಲ್ಲಿ ಕೂಡ ಕೆಂದ್ರ ಸರ್ಕಾರ ನೆರವು ಒದಗಿಸುತ್ತಿದೆ. ಕೊರೋನಾ ಕಾರಣದಿಂದ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದ ಆರ್ಥಿಕತೆಯನ್ನು ಮೇಲೆತ್ತಲು ಕೇಂದ್ರ ಸರ್ಕಾರ ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ಗಳನ್ನು ಘೋಷಿಸೋದು ಈ ಹಿಂದಿನ ವರ್ಷಗಳಲ್ಲಿ ಅತ್ಯವಾಗಿತ್ತು. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಬಂಡವಾಳ ವೆಚ್ಚವನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು ಕೂಡ. 

ಬಜೆಟ್ ಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ 

ರಾಜ್ಯಗಳಿಗೆ ಇನ್ನೂ ಒಂದು ವರ್ಷ ಬಡ್ಡಿರಹಿತ ಸಾಲ
ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ 50 ವರ್ಷಗಳ ಬಡ್ಡಿರಹಿತ ಸಾಲ ಸೌಲಭ್ಯವನ್ನು ಇನ್ನೂ ಒಂದು ವರ್ಷ ವಿಸ್ತರಣೆ ಮಾಡಲಾಗಿದೆ. ಅಲ್ಲದೆ, ಬಂಡವಾಳ ವೆಚ್ಚದ ಉದ್ದೇಶದಿಂದ ರಾಜ್ಯ ಸರ್ಕಾರಗಳಿಗೆ ಕೇಂದ್ರ ನೀಡುತ್ತಿದ್ದ ಈ ಸಾಲಕ್ಕೆ ಮೀಸಲಿಡುವ ಅನುದಾನವನ್ನು 1.3 ಲಕ್ಷ ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ. ಇದು  2022-23ನೇ ಆರ್ಥಿಕ ಸಾಲಿನಲ್ಲಿ ಮೀಸಲಿಟ್ಟ ಅನುದಾನಕ್ಕಿಂತ ಶೇ.30ರಷ್ಟು ಹೆಚ್ಚು. ಈ ಬಡ್ಡಿರಹಿತ ಸಾಲಕ್ಕೆ ಭಾರೀ ಬೇಡಿಕೆಯಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಹಿಂದೆ ತಿಳಿಸಿದ್ದರು.

Union Budget 2023:ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಆದ್ಯತೆ; ಉಳಿತಾಯ ಉತ್ತೇಜಿಸಲು ಹೊಸ ಯೋಜನೆ ಘೋಷಣೆ

2023-24ನೇ ಆರ್ಥಿಕ ಸಾಲಿಗೆ ವಿತ್ತೀಯ ಕೊರತೆ ಶೇ. 5.9
2023-24ನೇ ಆರ್ಥಿಕ ಸಾಲಿಗೆ ಬಜೆಟ್ ನಲ್ಲಿ ವಿತ್ತೀಯ ಕೊರತೆಯನ್ನು ಶೇ. 5.9ಕ್ಕೆ ನಿಗದಿಪಡಿಸಲಾಗಿದೆ. 2022-23ನೇ ಆರ್ಥಿಕ ಸಾಲಿನಲ್ಲಿ ವಿತ್ತೀಯ ಕೊರತೆಯನ್ನು ಶೇ.6.4ರಷ್ಟಿತ್ತು.  ಇನ್ನು 2021-22ನೇ ಆರ್ಥಿಕ ಸಾಲಿನಲ್ಲಿ ಶೇ.6.7ರಷ್ಟಿತ್ತು. 2025-26ನೇ ಆರ್ಥಿಕ ಸಾಲಿನಲ್ಲಿ ಜಿಡಿಪಿಯ ಶೇ.4.5ಕ್ಕಿಂತ ಕಡಿಮೆ ಆರ್ಥಿಕ ಕೊರತೆ ಹೊಂದುವ ಗುರಿಯನ್ನು ಸರ್ಕಾರ ಹೊಂದಿದೆ. 

Latest Videos
Follow Us:
Download App:
  • android
  • ios