Asianet Suvarna News Asianet Suvarna News

ಕೇಂದ್ರ ಬಜೆಟ್ 2020 ತಯಾರಾಗಿದ್ದು ಹೀಗೆ

ಪ್ರತಿ ವರ್ಷ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಬಜೆಟ್‌ ಅನ್ನು ಸಿದ್ಧಪಡಿಸುತ್ತದೆ. ಬಳಿಕ ಅದನ್ನು ಹಣಕಾಸು ಸಚಿವರು ಸಂಸತ್ತಿನಲ್ಲಿ ಮಂಡಿಸುತ್ತಾರೆ. ಬಜೆಟ್‌ ಮಂಡನೆಯ ಆರು ತಿಂಗಳು ಮುನ್ನ ಅಂದರೆ, ಆಗಸ್ಟ್‌- ಸೆಪ್ಟೆಂಬರ್‌ನಲ್ಲೇ ಬಜೆಟ್‌ ತಯಾರಿಸುವ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ.

Union Budget 2020 meet the team that helped Nirmala Sitharaman prepare budget
Author
Bengaluru, First Published Feb 1, 2020, 10:05 AM IST

ಪ್ರತಿ ವರ್ಷವೂ ಸರ್ಕಾರ ತನ್ನ ಆಯವ್ಯಯದ ಲೆಕ್ಕಾಚಾರವನ್ನು ದೇಶದ ಜನರ ಮುಂದಿಡುತ್ತದೆ. ಹಾಗೆಯೇ ಮುಂದಿನ ವರ್ಷದ ಯೋಜನೆಗಳಿಗೆ ರೂಪುರೇಷೆಗಳನ್ನೂ ಹಾಕಿಕೊಂಡು ಅದನ್ನೂ ಜನರ ಮುಂದಿಡುತ್ತದೆ. ಹೀಗೆ ಒಂದು ದಿನ ಲೋಕಸಭೆಯಲ್ಲಿ ಮಂಡನೆಯಾಗುವ ಬಜೆಟ್‌ ಒಂದೆರಡು ದಿನದಲ್ಲಿ ತಯಾರಾಗುವುದಿಲ್ಲ. ಅದಕ್ಕೆ ಹಲವಾರು ತಿಂಗಳ ತಯಾರಿ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಬಜೆಟ್‌ ಸಿದ್ಧತೆ ಹೇಗಿರುತ್ತದೆ, ಬಜೆಟ್‌ ಪ್ರತಿ ಸಿದ್ಧಪಡಿಸುವುದಕ್ಕೂ ಮುನ್ನ ಏನೆಲ್ಲಾ ಕೆಲಸಗಳು ನಡೆಯುತ್ತವೆ ಎಂಬ ವಿವರವಾದ ಮಾಹಿತಿ ಇಲ್ಲಿದೆ.

ಅನ್ನದಾತನೊಂದಿಗೆ ಆರಂಭವಾದ ನಿರ್ಮಲಾ ಬಜೆಟ್: ರೈತನಿಗಾಗಿ 16 ಸೂತ್ರ!

ಬಜೆಟ್‌ ಆರಂಭಕ್ಕೆ 6 ತಿಂಗಳು ಮೊದಲೇ ಸಿದ್ಧತೆ ಶುರು

ಪ್ರತಿ ವರ್ಷ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಬಜೆಟ್‌ ಅನ್ನು ಸಿದ್ಧಪಡಿಸುತ್ತದೆ. ಬಳಿಕ ಅದನ್ನು ಹಣಕಾಸು ಸಚಿವರು ಸಂಸತ್ತಿನಲ್ಲಿ ಮಂಡಿಸುತ್ತಾರೆ. ಬಜೆಟ್‌ ಮಂಡನೆಯ ಆರು ತಿಂಗಳು ಮುನ್ನ ಅಂದರೆ, ಆಗಸ್ಟ್‌- ಸೆಪ್ಟೆಂಬರ್‌ನಲ್ಲೇ ಬಜೆಟ್‌ ತಯಾರಿಸುವ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ.

ಕೇಂದ್ರ ಬಜೆಟ್‌: ಆರ್ಥಿಕತೆಗೆ ಟಾನಿಕ್‌? ಗ್ರಾಮೀಣ, ಕೃಷಿ, ಉದ್ಯಮ ಕ್ಷೇತ್ರಕ್ಕೆ ಭಾರೀ ಕೊಡುಗೆ?

ಸೆಪ್ಟೆಂಬರ್‌ನಲ್ಲಿ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸಂಬಂಧಿಸಿದ ಖರ್ಚು ವೆಚ್ಚದ ವಿವರಗಳು ಮತ್ತು ಬೇಡಿಕೆಗಳ ಕುರಿತು ಹಣಕಾಸು ಸಚಿವಾಲಯ ಪ್ರಾಥಮಿಕ ಮಾಹಿತಿ ಪಡೆದುಕೊಳ್ಳುತ್ತದೆ. ಇದರೊಂದಿಗೆ ಮುಂದಿನ ವರ್ಷದ ಹಣಕಾಸು ಲೆಕ್ಕಾಚಾರದ ಅಂದಾಜನ್ನೂ ಪಡೆದುಕೊಳ್ಳುತ್ತದೆ. ಈ ಮಾಹಿತಿಯನ್ನು ಪ್ರತಿ ಇಲಾಖೆಗಳು ಲಿಖಿತ ರೂಪದಲ್ಲಿ ಹಣಕಾಸು ಸಚಿವಾಲಯಕ್ಕೆ ಸಲ್ಲಿಸಬೇಕು.

ಮಾಹಿತಿಗಳ ಶೇಖರಣೆ ಮತ್ತು ದತ್ತಾಂಶಗಳ ವಿಶ್ಲೇಷಣೆ

ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಿನಲ್ಲಿ ಖರ್ಚುವೆಚ್ಚಗಳ ಕಾರ್ಯದರ್ಶಿ, ಕೆಲವು ಇಲಾಖೆಗಳ ಹಣಕಾಸು ಸಲಹೆಗಾರರ ಜೊತೆ ಸಭೆ ನಡೆಸಿ ಇಲಾಖಾವಾರು ವೆಚ್ಚಗಳ ಪರಿಶೀಲನೆ ನಡೆಸುತ್ತಾರೆ. ಇದೇ ಸಂದರ್ಭದಲ್ಲಿ ಮುಂದಿನ ವರ್ಷದ ಪ್ರಸ್ತಾವನೆಯ ಕುರಿತಂತೆಯೂ ಚರ್ಚೆ ನಡೆಸಲಾಗುತ್ತದೆ. ತಳ ಮಟ್ಟದ ಅಧಿಕಾರಿಗಳಿಂದ ಪಡೆದ ಸಮಗ್ರ ಮಾಹಿತಿಯನ್ನು ಹಣಕಾಸು ಸಚಿವಾಲಯದ ಅಧಿಕಾರಿಗಳು ವಿಶ್ಲೇಷಣೆ ನಡೆಸುತ್ತಾರೆ.

ಬಳಿಕ ಪರಿಷ್ಕೃತ ದತ್ತಾಂಶ ಮತ್ತು ಅಂದಾಜುಗಳನ್ನು ಪುನಃ ಸಂಬಂಧಿಸಿದ ಸಚಿವಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ. ಅಂತಿಮ ದತ್ತಾಂಶ ಮತ್ತು ಅಂದಾಜುಗಳನ್ನು ಹಣಕಾಸು ಸಚಿವಾಲಯಕ್ಕೆ ರವಾನಿಸಲಾಗುತ್ತದೆ. ಹಣಕಾಸು ಸಚಿವಾಲಯ ಈ ದತ್ತಾಂಶಗಳನ್ನು ಪುನಃ ವಿಶ್ಲೇಷಣೆಗೆ ಒಳಪಡಿಸಿ, ಬಜೆಟ್‌ ಅಂದಾಜಿನೊಂದಿಗೆ ಹೋಲಿಕೆ ಮಾಡುತ್ತದೆ.

ಬಜೆಟ್‌ ಸಂಯೋಜನೆಯಲ್ಲಿ ವಿವಿಧ ಇಲಾಖೆಗಳಿಗೆ ಅನುದಾನ ಹಂಚಿಕೆ

ದತ್ತಾಂಶ ವಿಶ್ಲೇಷಣೆ ಮತ್ತು ಬಜೆಟ್‌ ಅಂದಾಜು ಪೂರ್ಣಗೊಂಡ ಬಳಿಕ ಹಣಕಾಸು ಸಚಿವಾಲಯ ವಿವಿಧ ಆಡಳಿತಾತ್ಮಕ ಸಚಿವಾಲಯಗಳಿಗೆ ಅನುದಾನ ಹಂಚಿಕೆ ಮಾಡುತ್ತದೆ. ಹೊಸ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಇಲಾಖಾವಾರು ವಿಂಗಡನೆಗೊಳಿಸುತ್ತದೆ. ಈ ವೇಳೆ ಹಣ ಮತ್ತು ಯೋಜನೆಗಳ ಹಂಚಿಕೆ ವಿಚಾರವಾಗಿ ವಿವಿಧ ಸಚಿವಾಲಯಗಳ ಮಧ್ಯೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಇಂತಹ ಸಂದರ್ಭಗಳು ಉದ್ಭವಿಸಿದರೆ ಹಣಕಾಸು ಸಚಿವಾಲಯ ಪ್ರಧಾನಿ ಅಥವಾ ಸಂಪುಟ ಸಭೆಯ ಗಮನಕ್ಕೆ ತರುತ್ತದೆ.

ಈ ವಿಷಯದಲ್ಲಿ ಪ್ರಧಾನಿ ಅಥವಾ ಸಂಪುಟ ಸಭೆಯ ನಿರ್ಣಯವೇ ಅಂತಿಮವಾಗಿರುತ್ತದೆ. ಅನುದಾನ ಹಂಚಿಕೆ ಪ್ರಕ್ರಿಯೆ ಮುಕ್ತಾಯವಾದ ಬಳಿಕ ಹಣಕಾಸು ಸಚಿವಾಲಯ ಕೇಂದ್ರೀಯ ನೇರ ತೆರಿಗೆ ಮತ್ತು ಸುಂಕ ಮತ್ತು ಅಬಕಾರಿ ಮಂಡಳಿಯ ಜೊತೆಗೂಡಿ ಕರಡು ವರದಿಯೊಂದನ್ನು ಸಿದ್ಧಪಡಿಸುತ್ತದೆ. ಪರಿಣಾಮಕಾರಿಯಾದ ಬಜೆಟ್‌ ರೂಪಿಸುವ ಸಲುವಾಗಿ ವರದಿಯ ಬಗ್ಗೆ ವಿವಿಧ ಕ್ಷೇತ್ರಗಳ ತಜ್ಞರ ಅಭಿಪ್ರಾಯ ಪಡೆದು ಬಜೆಟ್‌ಗೆ ಅಂತಿಮ ರೂಪ ನೀಡಲಾಗುತ್ತದೆ.

ಭಾರತದ ಭವಿಷ್ಯ ಬದಲಿಸಿದ 10 ಬಜೆಟ್‌ಗಳು

ಬಜೆಟ್‌ ಮುದ್ರಣಕ್ಕೆ ಹೋದ ಬಳಿಕ ಅಧಿಕಾರಿಗಳಿಗೆ ಗೃಹಬಂಧನ!

ಹಣಕಾಸು ಸಚಿವಾಲಯದಲ್ಲಿ ಹಲ್ವಾ ತಯಾರಿಸುವ ಮೂಲಕ ಬಜೆಟ್‌ ಪ್ರತಿಗಳ ಮುದ್ರಣಕ್ಕೆ ಚಾಲನೆ ನೀಡಲಾಗುತ್ತದೆ. ಹಲ್ವಾ ತಯಾರಿಯ ಸಮಾರಂಭ ಮುಗಿದ ಬಳಿಕ ಬಜೆಟ್‌ ಪ್ರತಿಗಳನ್ನು ಮುದ್ರಣಕ್ಕೆ ಕಳುಹಿಸಿಕೊಡಲಾಗುತ್ತದೆ. ಬಜೆಟ್‌ ಅಧಿವೇಶನಕ್ಕೆ ಅಂದಾಜು ಹತ್ತು ದಿನ ಮೊದಲು ಈ ಕಾರ್ಯಕ್ರಮ ನಡೆಯುತ್ತದೆ. ಈ ವೇಳೆ ಅಧಿಕಾರಿಗಳು ಮತ್ತು ಬಜೆಟ್‌ ಪ್ರಕ್ರಿಯೆಯಲ್ಲಿ ಭಾಗಿಯಾದ ಸಿಬ್ಬಂದಿ ಹಣಕಾಸು ಸಚಿವಾಲಯದ ಆವರಣದಲ್ಲೇ ಇರಬೇಕಾಗುತ್ತದೆ.

ಬಜೆಟ್‌ ಕುರಿತ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಹೊರಗಿನ ಯಾರೊಂದಿಗೂ ಸಂಪರ್ಕದಲ್ಲಿ ಇರಿಸಿಕೊಳ್ಳ ಕೂಡದು ಎಂಬ ನಿಬಂಧನೆಯನ್ನು ಅಧಿಕಾರಿಗಳಿಗೆ ವಿಧಿಸಲಾಗಿರುತ್ತದೆ. ಬಜೆಟ್‌ ಮಂಡನೆ ಆಗುವವರೆಗೂ ಹಣಕಾಸು ಸಚಿವಾಲಯದ ಸಿಬ್ಬಂದಿ ‘ಗೃಹ ಬಂಧನ’ಕ್ಕೆ ಒಳಗಾಗಬೇಕಾಗುತ್ತದೆ.

ಹಲ್ವಾ ಹಂಚೋದು ಯಾಕೆ?

ಬಜೆಟ್‌ ಮಂಡನೆಗೆ ಹತ್ತು ಅಥವಾ ಹನ್ನೆರಡು ದಿನ ಮುಂಚಿತವಾಗಿ ಬಜೆಟ್‌ನ ಪೂರ್ವಭಾವಿ ತಯಾರಿ ಪೂರ್ಣಗೊಂಡ ನಂತರ ಹಣಕಾಸು ಇಲಾಖೆಯ ಅಧಿಕಾರಿಗಳು ಬಜೆಟ್‌ನ ಅಂತಿಮ ಪ್ರತಿ ತಯಾರಿಸುವ ಕಾರ್ಯ ಆರಂಭಿಸುತ್ತಾರೆ. ತಿಂಗಳುಗಳ ಕಾಲ ಹಣಕಾಸು ಇಲಾಖೆಯ ಅಧಿಕಾರಿಗಳು ಸಂಸತ್‌ ಭವನದ ನಾತ್‌ರ್‍ ಬ್ಲಾಕ್‌ನಲ್ಲಿ ಗುಪ್ತವಾಗಿ ಬಜೆಟ್‌ ಸಿದ್ಧಪಡಿಸುತ್ತಿರುತ್ತಾರೆ.

ಬಜೆಟ್‌ನ ಅಂತಿಮ ಪ್ರತಿಯ ತಯಾರಿ ಆರಂಭವಾಗಿ, ನಂತರ ಮುದ್ರಣವಾಗಿ, ಕೊನೆಗೆ ಬಜೆಟ್‌ ಮಂಡನೆಯವರೆಗೂ ಅವರು ಮನೆಗೆ ಹೋಗುವಂತಿಲ್ಲ. ಬಜೆಟ್‌ನಲ್ಲಿರುವ ಅಂಶಗಳು ಸೋರಿಕೆಯಾಗಬಾರದು ಎಂದು ಅವರನ್ನು ಅಲ್ಲೇ ಉಳಿಸಿಕೊಳ್ಳಲಾ​ಗುತ್ತದೆ. ಹೀಗಾಗಿ ವಿತ್ತ ಮಂತ್ರಿಗಳು ನಾರ್ತ್ ಬ್ಲಾಕ್‌ನಲ್ಲಿ ಸಿಹಿ ತಯಾರಿಸಿ ಅವರೆಲ್ಲರಿಗೂ ಹಂಚುವ ಮೂಲಕ ಖುಷಿಪಡಿಸುವ ಸಂಪ್ರದಾಯವಿದೆ.

ಸ್ಪೀಕರ್‌ ಅನುಮತಿ ಪಡೆದು ವಿತ್ತ ಮಂತ್ರಿಯಿಂದ ಬಜೆಟ್‌ ಮಂಡನೆ

ಭಾರತೀಯ ಸಂವಿಧಾನದ ಪ್ರಕಾರ ಹಣಕಾಸು ಸಚಿವರು ಲೋಕಸಭೆಯಲ್ಲಿ ಬಜೆಟ್‌ ಮಂಡನೆ ಮಾಡಬೇಕು. ಕಳೆದ ಮೂರು ವರ್ಷಗಳಿಂದ ಬಜೆಟ್‌ ಅನ್ನು ಫೆ.1ರಂದು ಮಂಡಿಸಲಾಗುತ್ತಿದೆ. ಬಜೆಟ್‌ ದಿನದಂದು ಹಣಕಾಸು ಸಚಿವರು ಮೊದಲು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಬಜೆಟ್‌ಗೆ ಅವರಿಂದ ಸಹಿ ಪಡೆದುಕೊಳ್ಳುತ್ತಾರೆ. ಬಳಿಕ ಸಂಪುಟ ಸಭೆ ನಡೆಸಲಾಗುತ್ತದೆ. ಬಜೆಟ್‌ ಮಂಡನೆ ದಿನ ಬೆಳಗ್ಗೆ 11 ಗಂಟೆಗೆ ಬಜೆಟ್‌ ಮಂಡಿಸಲಾಗುತ್ತದೆ. ಇದಕ್ಕೆ ಕೆಲವೇ ನಿಮಿಷಗಳಷ್ಟೇ ಬಾಕಿ ಇರುವಂತೆ ಪ್ರಧಾನಿ ಹಣಕಾಸು ಸಚಿವರನ್ನು ಲೋಕಸಭೆಗೆ ಕರೆತಂದು ಆಸನದಲ್ಲಿ ಕೂರಿಸುತ್ತಾರೆ. ಬಳಿಕ ಸ್ಪೀಕರ್‌ ಅವರಿಂದ ಅನುಮತಿ ಪಡೆದು ಹಣಕಾಸು ಸಚಿವರು ಬಜೆಟ್‌ ಪ್ರತಿಯನ್ನು ಓದಲು ಆರಂಭಿಸುತ್ತಾರೆ. ಈ ವೇಳೆ ಹಣಕಾಸು ಸಚಿವರು ಬಜೆಟ್‌ನಲ್ಲಿರುವ ಅಂಶಗಳ ಕುರಿತಂತೆ ಸಂಕ್ಷಿಪ್ತ ಮಾಹಿತಿ ನೀಡುತ್ತಾರೆ.

ನಿರ್ಮಲಾ ಬಜೆಟ್‌ ಹಿಂದಿನ ಮೆದುಳುಗಳು

ರಾಜೀವ್‌ ಕುಮಾರ್‌, ಹಣಕಾಸು ಕಾರ‍್ಯದರ್ಶಿ

ಜಾರ್ಖಂಡ್‌ ಕೇಡರ್‌ನ 1984ನೇ ಬ್ಯಾಚ್‌ ಐಎಎಸ್‌ ಅಧಿಕಾರಿಯಾಗಿರುವ ರಾಜೀವ್‌ ಕುಮಾರ್‌ ಹಣಕಾಸು ಸಚಿವಾಲಯದ ಆಡಳಿತ ವಿಭಾಗದ ಮುಖ್ಯಾಧಿಕಾರಿ. ಬ್ಯಾಂಕಿಂಗ್‌ ವಲಯದ ಸುಧಾರಣೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದವರು. ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನದಂಥ ನಿರ್ಧಾರಗಳ ಮೂಲಕ ಬ್ಯಾಂಕಿಂಗ್‌ ಕ್ಷೇತ್ರದ ಸುಧಾರಣೆಗೆ ಮುಂದಾದವರು ಇವರು. ಬ್ಯಾಂಕಿಂಗ್‌ ಕ್ಷೇತ್ರವನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಅವರು ಅಗತ್ಯ ಸಲಹೆಗಳನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅತನು ಚಕ್ರವರ್ತಿ, ಆರ್ಥಿಕ ವ್ಯವಹಾರಗಳ ಕಾರ‍್ಯದರ್ಶಿ

ಸರ್ಕಾರಿ-ಆಸ್ತಿ ಮಾರಾಟ ಮಾಡಿ ಬಂಡವಾಳ ಸಂಚಯಿಸುವ ಯೋಜನೆಗಳನ್ನು ಅನುಷ್ಠಾನ ಮಾಡಿದ ಅತನು ಚಕ್ರವರ್ತಿ ಜುಲೈನಲ್ಲಿ ಆರ್ಥಿಕ ವ್ಯವಹಾರಗಳ ವಿಭಾಗದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಭಾರತದ ಮೊದಲ ಸಾಗರೋತ್ತರ ಸಾರ್ವಭೌಮ ಬಾಂಡ್‌ ಮಾರಾಟ ಯೋಜನೆ ಹಿಂದೆ ಚಕ್ರವರ್ತಿ ಅವರ ಸಲಹೆ ಇತ್ತು. ಕೇಂದ್ರ ಸರ್ಕಾರದ ವಿತ್ತೀಯ ಕೊರತೆ ಸರಿದೂಗಿಸುವ ವಿಚಾರ ಮತ್ತು ಆರ್ಥಿಕ ಪುನಶ್ಚೇತನದ ವಿಷಯದಲ್ಲಿ ಚಕ್ರವರ್ತಿ ಅವರ ಸಲಹೆ ನಿರ್ಣಾಯಕವಾಗಿವೆ.

ಟಿ.ವಿ ಸೋಮನಾಥನ್‌, ವೆಚ್ಚ ಕಾರ‍್ಯದರ್ಶಿ

ಈ ಹಿಂದೆ ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಕೆಲಸ ಮಾಡಿದ ಇವರು ಇತ್ತೀಚೆಗಷ್ಟೇ ಹಣಕಾಸು ಇಲಾಖೆಗೆ ಸೇರ್ಪಡೆಯಾಗಿದ್ದಾರೆ. ಇವರು 1987ನೇ ಬ್ಯಾಚ್‌ನ ತಮಿಳುನಾಡಿನ ಕೇಡರ್‌ ಐಎಎಸ್‌ ಅಧಿಕಾರಿ. ಸೋಮನಾಥನ್‌ ಎದುರು ಸರ್ಕಾರದ ಅನಗತ್ಯ ಖರ್ಚು-ವೆಚ್ಚಗಳನ್ನು ನಿಯಂತ್ರಿಸುವ ಗುರಿ ಇದೆ. ಈ ಮೊದಲು ಪ್ರಧಾನಿ ಕಾರಾರ‍ಯಲಯದಲ್ಲಿ ಕಾರ‍್ಯ ನಿರ್ವಹಿಸಿರುವ ಕಾರಣ ಪ್ರಧಾನಿ ಎಂಥ ಬಜೆಟ್‌ ನಿರೀಕ್ಷಿಸುತ್ತಿದ್ದಾರೆ ಎಂಬ ಸ್ಪಷ್ಟಅರಿವಿದೆ.

ಅಜಯ್‌ ಭೂಷಣ್‌ ಪಾಂಡೆ, ಕಂದಾಯ ಕಾರ‍್ಯದರ್ಶಿ

ಸಂಪನ್ಮೂಲ ಸಂಗ್ರಹಕ್ಕೆ ಪಾಂಡೆಯವರನ್ನು ನಿಯೋಜಿಸಲಾಗಿದೆ. ಇವರು 1984ನೇ ಬ್ಯಾಚ್‌ನ ಮಹಾರಾಷ್ಟ್ರ ಕೇಡರ್‌ನ ಐಎಎಸ್‌ ಅಧಿಕಾರಿ. ನಿಧಾಗತಿಯ ಆರ್ಥಿಕತೆಯ ಹಿನ್ನೆಲೆಯಲ್ಲಿ ಆದಾಯ ಸಂಗ್ರಹ ಕುಸಿತ ಕಂಡಿದೆ. ಕಳೆದ ವರ್ಷ 20 ಶತಕೋಟಿ ಡಾಲರ್‌ ಮೊತ್ತದ ಕಾರ್ಪೊರೇಟ್‌ ಟ್ಯಾಕ್ಸ್‌ಅನ್ನು ಕಡಿತಗೊಳಿಸಲಾಗಿದೆ. ಹೂಡಿಕೆಗಳು ಚುರುಕುಗೊಂಡು ಸರ್ಕಾರಕ್ಕೆ ಆದಾಯ ಹರಿದು ಬರಲು ಇನ್ನೂ ಸಮಯ ಬೇಕು. ನೇರ ತೆರಿಗೆ ವ್ಯಾಪ್ತಿಯಿಂದ ಕೈಬಿಟ್ಟಿರುವ ಕೆಲ ವ್ಯವಹಾರಗಳಿಗೆ ಮತ್ತೆ ತೆರಿಗೆ ವಿಧಿಸುವ ಪ್ರಸ್ತಾಪವನ್ನು ಕೇಂದ್ರದ ಮುಂದೆ ಇವರು ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ತುಹಿನ್‌ಕಾಂತ ಪಾಂಡೆ, ಬಂಡವಾಳ ಹಿಂತೆಗೆತ ಕಾರ‍್ಯದರ್ಶಿ

ಪ್ರಮುಖ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ತನ್ನ ಪಾಲು ಮಾರಾಟ ಮಾಡುವ ಮೂಲಕ ಬಂಡವಾಳ ಸಂಗ್ರಹಿಸುವುದು ಸರ್ಕಾರದ ಆದಾಯದ ಪ್ರಮುಖ ಮೂಲ. ಈ ಜವಾಬ್ದಾರಿ ಹೊತ್ತವರು 1987ನೇ ಬ್ಯಾಚ್‌ನ ಒಡಿಶಾ ಕೇಡರ್‌ನ ಐಎಎಸ್‌ ಅಧಿಕಾರಿ ತುಹಿನ್‌ಕಾಂತ ಪಾಂಡೆ. ಸರ್ಕಾರ ಈ ಬಾರಿ ಬಂಡವಾಳ ಹಿಂಪಡೆತದಿಂದ 1.5 ಲಕ್ಷ ಕೋಟಿ ರು. ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ ಆರ್ಥಿಕ ಹಿಂಜರಿತದಿಂದಾಗಿ ಇದು ಸಾಧ್ಯವಾಗದು. ಆದರೆ ಮುಂದಿನ ವರ್ಷ ಇದು ಕಾರ್ಯರೂಪಕ್ಕೆ ಬರಬಹುದು ಎಂಬ ನಿರೀಕ್ಷೆ ಇದೆ.

Follow Us:
Download App:
  • android
  • ios