ನವದೆಹಲಿ[ಜ.15]: 2019ರ ಲೋಕಸಭಾ ಚುನಾವಣೆ ಗೆಲ್ಲಲು ನಾನಾ ರಣತಂತ್ರ ರೂಪಿಸುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ, ಫೆ.1ರಂದು ಮಂಡಿಸಲಿರುವ ಮಧ್ಯಂತರ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರಿಗೆ ಭರ್ಜರಿ ಉಡುಗೊರೆಯೊಂದನ್ನು ಪ್ರಕಟಿಸುವ ಸಾಧ್ಯತೆ ಇದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹಾಲಿ ಇರುವ 2.5 ಲಕ್ಷ ರು.ನಿಂದ 5 ಲಕ್ಷ ರು.ಗೆ ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಪರೋಕ್ಷ ತೆರಿಗೆ ವ್ಯವಸ್ಥೆ ಮತ್ತು ಕಾರ್ಪೊರೆಟ್‌ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯ ಸಾಧ್ಯತೆ ಕಡಿಮೆ ಎನ್ನಲಾಗಿದೆ.

2018ರಲ್ಲಿ ಸಚಿವ ಅರುಣ್‌ ಜೇಟ್ಲಿ ಮಂಡಿಸಿದ್ದ ಸಾಮಾನ್ಯ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯ್ತಿ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಆದರೆ ವೇತನ ವರ್ಗವು ಸಾರಿಗೆ ಮತ್ತು ವೈದ್ಯಕೀಯ ಉದ್ದೇಶಗಳಿಗಾಗಿ ಮಾಡಿದ 40000 ರು.ಗಳಷ್ಟುವೆಚ್ಚಕ್ಕೆ ವಿನಾಯಿತಿ ಪಡೆಯಲು ಅನುವಾಗುವಂತೆ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಪದ್ಧತಿಯನ್ನು ಮರು ಜಾರಿಗೊಳಿಸಿತ್ತು.

ಆದರೆ 2017ರ ಬಜೆಟ್‌ನಲ್ಲಿ ವಾರ್ಷಿಕ 2.50 ಲಕ್ಷ ರು.ನಿಂದ 5 ಲಕ್ಷ ರು.ವರೆಗಿನ ಆದಾಯಕ್ಕೆ ವಿಧಿಸಲಾಗುತ್ತಿದ್ದ ಶೇ.10ರಿಂದ ಶೇ.5ಕ್ಕೆ ಇಳಿಸಿದ್ದರು.