ನವದೆಹಲಿ[ಫೆ.02]: ನೌಕರರು ಒಂದು ಕಂಪನಿಯಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿದ ನಂತರ ಅಥವಾ ನಿವೃತ್ತಿಯ ನಂತರ ಪಡೆಯುವ ಗ್ರಾಚುಟಿ ಮೇಲಿನ ಮಿತಿಯನ್ನು 10 ಲಕ್ಷ ರು.ದಿಂದ 20 ಲಕ್ಷ ರು.ಗೇರಿಸಲಾಗಿದೆ. ವೇತನದಾರರಿಗೆ ಕೇಂದ್ರ ಸರ್ಕಾರ ನೀಡಿರುವ ಬಂಪರ್‌ ಕೊಡುಗೆಯಿದು ಎಂದು ವಿತ್ತ ಸಚಿವ ಪೀಯೂಷ್‌ ಗೋಯಲ್‌ ಹೇಳಿಕೊಂಡಿದ್ದಾರೆ.

7ನೇ ವೇತನ ಆಯೋಗದ ವರದಿಯನ್ನು ಕೇಂದ್ರ ಸರ್ಕಾರ ಈ ಹಿಂದೆಯೇ ಒಪ್ಪಿಕೊಂಡಿದ್ದು, ಅದರಲ್ಲಿ ಗ್ರಾಚುಟಿ ಮಿತಿಯನ್ನು 20 ಲಕ್ಷ ರು.ಗೆ ಏರಿಸಲಾಗಿದೆ. ಈ ಹಣ ಸಾಮಾನ್ಯವಾಗಿ ನೌಕರರ ನಿವೃತ್ತಿಯ ನಂತರ ಏಕಕಾಲಕ್ಕೆ ಕೈಸೇರುವುದರಿಂದ ಭವಿಷ್ಯದ ಬಳಕೆಗೆ ಅನುಕೂಲವಾಗಿ ಒದಗಿಬರುತ್ತದೆ.

ಆದರೆ, ಆದಾಯ ತೆರಿಗೆ ಕಾಯ್ದೆಯಡಿ ಸದ್ಯ 10 ಲಕ್ಷ ರು.ವರೆಗಿನ ಗ್ರಾಚುಟಿಗೆ ಮಾತ್ರ ಆದಾಯ ತೆರಿಗೆಯಿಂದ ವಿನಾಯ್ತಿಯಿದೆ. ಆದರೆ, ಏರಿಕೆ ಮಾಡಲಾದ 20 ಲಕ್ಷ ರು.ಗೆ ಆದಾಯ ತೆರಿಗೆಯಿಂದ ವಿನಾಯ್ತಿ ನೀಡಿಲ್ಲ. ಅದನ್ನು ಈಗಿನ ಬಜೆಟ್‌ನಲ್ಲಿ ಮಾಡಬೇಕಿತ್ತು. ಆದರೆ, ಮಾಡಿಲ್ಲ. ಕೇವಲ ಗ್ರಾಚುಟಿ ಕಾಯ್ದೆಯಡಿಯಲ್ಲಿ ಮಾತ್ರ ಗ್ರಾಚುಟಿ ಮೊತ್ತವನ್ನು ಏರಿಕೆ ಮಾಡಲಾಗಿದೆ. ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ 10 ಲಕ್ಷ ರು. ಗ್ರಾಚುಟಿಗೆ ಮಾತ್ರ ತೆರಿಗೆ ವಿನಾಯ್ತಿ ಇರುವುದರಿಂದ, ಸದ್ಯದ ಸ್ಥಿತಿಯಲ್ಲಿ, ಇನ್ನುಳಿದ 10 ಲಕ್ಷ ರು.ಗೆ ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ.