Asianet Suvarna News Asianet Suvarna News

ರೈತರ ಖಾತೆಗೆ 6000 ರು: ಮೊದಲ ಕಂತು ವಿತರಣೆಗೆ ದಿನಾಂಕ ಫಿಕ್ಸ್!

ರೈತರ ಖಾತೆಗೆ 6000 ರು.: ಯೋಜನೆಗೆ ಕೇಂದ್ರ ಚಾಲನೆ| ಫಲಾನುಭವಿಗಳ ಆಯ್ಕೆ ಮಾಡಲು ರಾಜ್ಯಗಳಿಗೆ ಪತ್ರ| ಮಾ.31ರೊಳಗೆ ಮೊದಲ ಕಂತು ವಿತರಿಸಲು ಕಸರತ್ತು

Union Budget 2019 farmers to get Rs 2000 cash in march
Author
New Delhi, First Published Feb 3, 2019, 7:38 AM IST

ನವದೆಹಲಿ[ಜ.03]: ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ವರ್ಷ 6 ಸಾವಿರ ರು. ನಗದು ನೀಡುವ ಸಲುವಾಗಿ ‘ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ ಯೋಜನೆಯನ್ನು ಶುಕ್ರವಾರವಷ್ಟೇ ಬಜೆಟ್‌ನಲ್ಲಿ ಪ್ರಕಟಿಸಿದ್ದ ಕೇಂದ್ರ ಸರ್ಕಾರ, ಅದನ್ನು ತ್ವರಿತವಾಗಿ ತರಲು ತಕ್ಷಣದಿಂದಲೇ ಭರದ ಸಿದ್ಧತೆ ಆರಂಭಿಸಿದೆ.

ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಅವರು ಬಜೆಟ್‌ನಲ್ಲಿ ಈ ಯೋಜನೆ ಘೋಷಣೆ ಮಾಡಿದ ದಿನವೇ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಕೃಷಿ ಇಲಾಖೆ ಕಾರ್ಯದರ್ಶಿಗಳು ಪತ್ರ ಬರೆದು, ಆದಷ್ಟುಬೇಗನೆ ಫಲಾನುಭವಿಗಳನ್ನು ಗುರುತಿಸುವಂತೆ ಸೂಚನೆ ನೀಡಿದ್ದಾರೆ.

ತಲಾ 2 ಸಾವಿರ ರು.ನಂತೆ 3 ಕಂತುಗಳಲ್ಲಿ ರೈತರ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡುವ ಯೋಜನೆ ಇದಾಗಿದೆ. ಮೊದಲ ಕಂತು ಮಾ.31ರೊಳಗೆ ರೈತರ ಖಾತೆ ತಲುಪಬೇಕಾಗಿದೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳನ್ನು ಗುರುತಿಸುವಂತೆ ರಾಜ್ಯಗಳಿಗೆ ಸಂದೇಶ ರವಾನಿಸಿದೆ.

‘ಪ್ರತಿ ಗ್ರಾಮದಲ್ಲೂ ಅರ್ಹ ಫಲಾನುಭವಿಯ ಹೆಸರು, ಲಿಂಗ ಹಾಗೂ ಆತ/ಆಕೆ ಎಸ್ಸಿ ಅಥವಾ ಎಸ್ಟಿಸಮುದಾಯಕ್ಕೆ ಸೇರಿದ್ದಾರೆಯೇ ಎಂಬ ಮಾಹಿತಿಯನ್ನು ಸಂಗ್ರಹಿಸುವಂತೆ ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಈ ಫಲಾನುಭವಿಗಳ ಹೆಸರನ್ನು ಗ್ರಾಮ ಪಂಚಾಯಿತಿ ನೋಟಿಸ್‌ ಬೋರ್ಡ್‌ನಲ್ಲಿ ಫಲಕ ಪ್ರಕಟಿಸಲಾಗುತ್ತದೆ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

‘ಬಹುತೇಕ ರಾಜ್ಯಗಳಲ್ಲಿ ಭೂದಾಖಲೆಗಳು ಗಣಕೀಕರಣ ಆಗಿರುವ ಹಿನ್ನೆಲೆಯಲ್ಲಿ ನಗದು ವರ್ಗಾವಣೆ ಯೋಜನೆ ಜಾರಿಗೆ ಸಮಸ್ಯೆ ಆಗದು. ಈಶಾನ್ಯ ರಾಜ್ಯಗಳಲ್ಲಿ ಭೂಮಿ ಮೇಲೆ ಸಮುದಾಯಗಳ ಹಕ್ಕು ಇರುವುದರಿಂದ ಅಲ್ಲಿ ಮಾತ್ರ ಯೋಜನೆ ವಿಳಂಬವಾಗಬಹುದು’ ಎಂದು ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮೊತ್ತ ಕಡಿಮೆ ಏನಲ್ಲ:

ವರ್ಷಕ್ಕೆ 6000 ಅಥವಾ ಮಾಸಿಕ 500 ರು. ರೈತರಿಗೆ ಸಾಕಾಗುತ್ತದೆಯೇ ಎಂಬ ಪ್ರಶ್ನೆಗೆ, ಬಡ ರೈತರಿಗೆ 500 ರು. ಏನು ಕಡಿಮೆ ಮೊತ್ತವಲ್ಲ. ಈ ಹಣವನ್ನು ವಿವಿಧ ಖರ್ಚು, ಮಕ್ಕಳನ್ನು ಶಾಲೆಗೆ ಸೇರಿಸಲು, ನೀರು ಖರೀದಿಸಲು ಬಳಸಿಕೊಳ್ಳಬಹುದಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

2 ಹೆಕ್ಟೇರ್‌ (5 ಎಕರೆ) ಒಳಗೆ ಜಮೀನು ಹೊಂದಿರುವ ರೈತರ ಅನುಕೂಲಕ್ಕಾಗಿ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯನ್ನು ಸರ್ಕಾರ ರೂಪಿಸಿದೆ. ಇದು ತೆಲಂಗಾಣದ ರೈತ ಬಂಧು ಮಾದರಿಯಲ್ಲಿದೆ.

Follow Us:
Download App:
  • android
  • ios