ಲಂಡನ್(ಫೆ.13)‌: ಕೊರೋನಾ ವೈರಸ್‌ ಲಾಕ್‌ಡೌನ್‌ ಕಾರಣದಿಂದಾಗಿ ಬ್ರಿಟನ್‌ನ ಆರ್ಥಿಕತೆ ಕಳೆದ 300 ವರ್ಷಗಳಲ್ಲೇ ದಾಖಲೆಯ ಪತನವನ್ನು ಕಂಡಿದೆ. 2020ರಲ್ಲಿ ಬ್ರಿಟನ್‌ ಜಿಡಿಪಿ ದರ ನಕಾರಾತ್ಮಕ ಶೇ.9.9ಕ್ಕೆ ಕುಸಿತ ದಾಖಲಿಸಿದೆ.

ದೇಶದ ಆರ್ಥಿಕತೆ ಇಷ್ಟೊಂದು ಕುಸಿತವನ್ನು ಕಂಡಿರುವುದು 1709ರ ಬಳಿಕ ಇದೇ ಮೊದಲು. 1709ರಲ್ಲಿ ಬ್ರಿಟನ್‌ ಭೀಕರ ಚಳಿಗಾಲಕ್ಕೆ ಸಾಕ್ಷಿಯಾಗಿತ್ತು. 500 ವರ್ಷಗಳಲ್ಲೇ ಯುರೋಪ ಎದುರಿಸಿದ ಅತಿ ಕಠಿಣ ಚಳಿಗಾಲದಿಂದಾಗಿ ಬಿಸಿಲು ಇಲ್ಲದೇ ಕೃಷಿ ಚಟುವಟಿಗಳು ನಿಂತುಹೋಗಿದ್ದರಿಂದ ಆಹಾರ ಕೊರತೆ ಉಂಟಾಗಿ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದ್ದವು. ಇದರ ಪರಿಣಾಮವಾಗಿ 1709ರಲ್ಲಿ ಬ್ರಿಟನ್‌ ಆರ್ಥಿಕತೆ ಶೇ.-13ಕ್ಕೆ ಕುಸಿತ ಕಂಡಿತ್ತು. ಇದೀಗ ಕೊರೋನಾ ಕಾರಣದಿಂದಾಗಿ 2020ರಲ್ಲಿ ಬ್ರಿಟನ್‌ ಆರ್ಥಿಕತೆ ಶೇ.-9.9ಕ್ಕೆ ಕುಸಿತ ದಾಖಲಿಸಿದೆ. ಬ್ರಿಟನ್‌ ಆರ್ಥಿಕತೆಯಲ್ಲಿ ಶೇ.80ರಷ್ಟುಪಾಲು ಹೊಂದಿರುವ ಸೇವಾ ವಲಯ ಶೇ.-8.9ಕ್ಕೆ ಕುಸಿತ ಕಂಡಿದ್ದರೆ, ಉತ್ಪಾದನೆ ವಲಯ ಶೇ.- 8.6ಕ್ಕೆ ಮತ್ತು ನಿರ್ಮಾಣ ವಲಯ ಶೇ.-12.5ಕ್ಕೆ ಕುಸಿತ ದಾಖಲಿಸಿದೆ.

ಇದೇ ವೇಳೆ ಆರ್ಥಿಕತೆ ಚೇತರಿಕೆಯ ಧನಾತ್ಮಕ ಲಕ್ಷಣಗಳು ಗೋಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಚೇತರಿಕೆ ಕಾಣಲಿದೆ ಎಂಬ ವಿಶ್ವಾಸವಿದೆ ಎಂದು ಹಣಕಾಸು ಸಚಿವ ರಿಶಿ ಸುನಾಕ್‌ ಹೇಳಿದ್ದಾರೆ.