ದುಬೈ(ಜ.06): ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರ ವಹಸಿಕೊಂಡ ದಿನದಿಂದ ವಿದೇಶಗಳನ್ನು ಸುತ್ತಿ ನಮಗೆ ಏನಾದರೂ ಹೆಲ್ಪ್ ಮಾಡಿ ಪ್ಲೀಸ್ ಅಂತಾ ಗೋಗರೆದಿದ್ದೇ ಬಂತು.

ಈಗಾಗಲೇ ಸೌದಿ ಅರೇಬಿಯಾ, ಚೀನಾ ದೇಶಗಳಿಗೆ ಭೇಟಿ ನೀಡಿ ಆರ್ಥಿಕ ಸಹಾಯಕ್ಕಾಗಿ ಅಂಗಲಾಚಿದ್ದ ಇಮ್ರಾನ್‌ಗೆ, ಸೌದಿ ಅರೇಬಿಯಾ ಅಷ್ಟಿಷ್ಟು ಸಹಾಯ ಮಾಡಿ ಸಾಗ ಹಾಕಿತ್ತು.

ಚೀನಾ ಹೆಲ್ಪ್ ಮಾಡ್ತಿನಿ ಆದ್ರೆ ನಂಗೂ ಒಂದಿಷ್ಟು ಫೇವರ್ ಬೇಕು ಅಂತಾ ಹೇಳಿ ಕಳುಹಿಸಿತ್ತು. ಇದೀಗ ಮತ್ತೆ ಸಹಾಯ ಕೇಳಿ ಯಾವ ದೇಶಕ್ಕೆ ಹೋಗೋದು ಅಂಥಾ ಇಮ್ರಾನ್ ಭೂಪಟ ತೆರೆದು ಕುಳಿತಿದ್ದೇ ತಡ, ನಾನು ಹೆಲ್ಪ್ ಮಾಡ್ತಿನಿ ಅಂತಾ ಯುಎಇ ಕರೆ ಮಾಡಿದೆ.

ಹೌದು, ಪಾಕಿಸ್ತಾನಕ್ಕೆ ಆರ್ಥಿಕ ಸಹಾಯ ಮಾಡಲು ಯುಎಇ ಮುಂದಾಗಿದ್ದು, 6.2 ಬಿಲಿಯನ್ ಯುಎಸ್ ಡಾಲರ್ ಧನಸಹಾಯದ ಭರವಸೆ ನೀಡಿದೆ. ಇದರಲ್ಲಿ 3.2 ಬಿಲಿಯನ್ ಯುಎಸ್ ಡಾಲರ್ ಮೊತ್ತದ ಕಚ್ಚಾತೈಲ ರಫ್ತು ಮತ್ತು 3 ಬಿಲಿಯನ್ ಯುಎಸ್ ಡಾಲರ್ ಮೊತ್ತದ ನಗದು ಠೇವಣಿ ಸೇರಿದೆ.

ಸೌದಿ ಅರೇಬಿಯಾ ಮತ್ತು ಯುಎಇ ಆರ್ಥಿಕ ಸಹಾಯದಿಂದಾಗಿ ಪಾಕಿಸ್ತಾನಕ್ಕೆ ಒಟ್ಟು 7.9 ಬಿಲಿಯನ್ ಯುಎಸ್ ಡಾಲರ್ ಮೊತ್ತದ ತೈಲ ಆಮದು ಉಳಿತಾಯವಾಗಲಿದೆ.