ಟ್ವಿಟರ್ ಡೀಲ್‌ನಿಂದ ಹಿಂದೆ ಸರಿದ ಎಲಾನ್ ಮಸ್ಕ್, ಕಾನೂನು ಕ್ರಮಕ್ಕೆ ನಿರ್ಧರಿಸಿದ ಕಂಪನಿ!
ಟ್ವಿಟರ್‌ನ ವ್ಯವಹಾರ ಮತ್ತು ಹಣಕಾಸಿನ ಕಾರ್ಯಕ್ಷಮತೆಗೆ ಮಾಹಿತಿಯು ಮೂಲಭೂತವಾಗಿದೆ ಮತ್ತು ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಇದರ ಅಗತ್ಯವಿದೆ ಎಂದು ಎಲಾನ್ ಮಸ್ಕ್ ಹೇಳಿದ್ದರು.
ಕ್ಯಾಲಿಫೋರ್ನಿಯಾ (ಜುಲೈ 9): ನಕಲಿ ಖಾತೆಗಳ ಸಂಖ್ಯೆಯ ಬಗ್ಗೆ ಮಾಹಿತಿಯನ್ನು ನೀಡಲು ಕಂಪನಿಯು ವಿಫಲವಾದ ನಂತರ ವಿಶ್ವದ ಶ್ರೀಮಂತ ವ್ಯಕ್ತಿ, ಟೆಸ್ಲಾ ಕಂಪನಿ ಮಾಲೀಕ ಟ್ವಿಟರ್ ಕಂಪನಿಯನ್ನು ಖರೀದಿಸುವ ಪ್ರಕ್ರಿಯೆಯನ್ನು ರದ್ದು ಮಾಡಿದ್ದಾರೆ. ಬರೋಬ್ಬರಿ 3.52 ಲಕ್ಷ ಕೋಟಿ ರೂಪಾಯಿಗೆ ಟ್ವಿಟರ್ ಕಂಪನಿಯನ್ನು ಖರೀದಿ ಮಾಡುವುದಾಗಿ ಎಲಾನ್ ಮಸ್ಕ್ ಈ ಹಿಂದೆ ಘೋಷಿಸಿದ್ದರು.
ಮಸ್ಕ್ ಟ್ವಿಟರ್ ಖರೀದಿಯನ್ನು ರದ್ದು ಮಾಡಿದ ಬೆನ್ನಲ್ಲಿಯೇ, ಟೆಸ್ಲಾ ಮಾಲೀಕನ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಟ್ವಿಟರ್ ಘೋಷಣೆ ಮಾಡಿದೆ. ಈ ಖರೀದಿ ಪ್ರಕ್ರಿಯೆಯಲ್ಲಿ ಆಗಿರುವ ಅತಿದೊಡ್ಡ ಟ್ವಿಸ್ಟ್ ವಿಶ್ವದ ಶ್ರೀಮಂತ ವ್ಯಕ್ತಿ ಹಾಗೂ ಜಗತ್ತಿನ ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್ ನಡುವೆ ಮುಂದೆ ನಡೆಯಬಹುದಾದ ಬಹುದೊಡ್ಡ ಕಾನೂನು ಹೋರಾಟವನ್ನು ಸೂಚಿಸುತ್ತದೆ.
ಮುಂದೇನಾದರೂ ಖರೀದಿ ಪ್ರಕ್ರಿಯೆ ರದ್ದಾದಲ್ಲಿ 1 ಶತಕೋಟಿ ವಿಘಟನೆಯ ಶುಲ್ಕ ಅಥವಾ ಬ್ರೇಕ್ ಅಪ್ ಫೀ ನೀಡಬೇಕು ಎಂದು ಒಪ್ಪಂದ ಮಾಡಿಕೊಂಡಿತ್ತು. ಅದರ ಆಧಾರದ ಮೇಲೆ ಕಂಪನಿ ಈ ಹಣಕ್ಕಾಗಿ ಎಲಾನ್ ಮಸ್ಕ್ ವಿರುದ್ಧ ದಾವೆ ಹೂಡಲಿದೆ ಎಂದು ಹೇಳಲಾಗಿದೆ. ಇದರ ನಡುವೆ ಕಂಪನಿಯು ಇಡೀ ಟ್ವಿಟರ್‌ಅನ್ನು ಪೂರ್ಣವಾಗಿ ಎಲಾನ್ ಮಸ್ಕ್ ಖರೀದಿಸಬೇಕು ಎನ್ನುವ ನಿಟ್ಟಿನಲ್ಲಿಯೇ ಕಾನೂನು ಹೋರಾಟ ನಡೆಸಲಿದೆ ಎಂದೂ ವರದಿಯಾಗಿದೆ. ಈಗಾಗಲೇ ಕಂಪನಿಯ ಸಿಇಒ ಪರಾಗ್ ಅಗರ್‌ವಾಲ್ ಹಾಗೂ ನಿರ್ದೇಶಕರ ಮಂಡಳಿ ಎಲಾನ್ ಮಸ್ಕ್ ಅವರ ಡೀಲ್‌ಅನ್ನು ಒಪ್ಪಿಕೊಂಡಿದ್ದರು.
ಟ್ವಿಟರ್‌ನ ಮಂಡಳಿಗೆ ಬರೆದ ಪತ್ರದಲ್ಲಿ, ಮಸ್ಕ್ ವಕೀಲ ಮೈಕ್ ರಿಂಗ್ಲರ್ ತನ್ನ ಕ್ಲೈಂಟ್ ಸುಮಾರು ಎರಡು ತಿಂಗಳ ಕಾಲ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ "ನಕಲಿ ಅಥವಾ ಸ್ಪ್ಯಾಮ್" ಖಾತೆಗಳ ಬಗ್ಗೆ ಮಾಹಿತಿಯನ್ನು ಕೋರಿದ್ದರು. ಆದರೆ, ಕಂಪನಿ ಇದನ್ನು ನೀಡಲು ವಿಫಲವಾಗಿದೆ ಎಂದು ಹೇಳಿದ್ದಾರೆ.
"ಟ್ವಿಟರ್ ವಿಫಲವಾಗಿದೆ ಅಥವಾ ಈ ಮಾಹಿತಿಯನ್ನು ಒದಗಿಸಲು ನಿರಾಕರಿಸಿದೆ. ಕೆಲವೊಮ್ಮೆ ಟ್ವಿಟ್ಟರ್, ಎಲಾನ್ ಮಸ್ಕ್ ಅವರ ವಿನಂತಿಗಳನ್ನು ನಿರ್ಲಕ್ಷಿಸಿದೆ, ಕೆಲವೊಮ್ಮೆ ಅದು ಅಸಮರ್ಥನೀಯವೆಂದು ತೋರುವ ಕಾರಣಗಳಿಗಾಗಿ ಅದನ್ನು ತಿರಸ್ಕರಿಸಿದೆ' ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Elon Musk Twitter ಟ್ವಿಟರ್‌ಗೆ ಎಲಾನ್ ಮಸ್ಕ್ ಬಾಸ್, 5 ಬದಲಾವಣೆ ಸಾಧ್ಯತೆ!
ಟ್ವಿಟರ್‌ನ ವ್ಯವಹಾರ ಮತ್ತು ಹಣಕಾಸಿನ ಕಾರ್ಯಕ್ಷಮತೆಗೆ ಮಾಹಿತಿಯು ಮೂಲಭೂತವಾಗಿದೆ ಮತ್ತು ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಇದರ ಅಗತ್ಯವಿದೆ ಎಂದು ಎಲಾನ್ ಮಸ್ಕ್ ಕೂಡ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಟ್ವಿಟರ್‌ನ ಮಂಡಳಿಯ ಅಧ್ಯಕ್ಷ ಬ್ರೆಟ್ ಟೇಲರ್, ಮಸ್ಕ್‌ನೊಂದಿಗೆ "ಒಪ್ಪಿದ ಬೆಲೆ ಮತ್ತು ಷರತ್ತುಗಳ ಮೇಲೆ ವಹಿವಾಟನ್ನು ಪೂರ್ಣಗೊಳಿಸಲು ಮಂಡಳಿಯು ಬದ್ಧವಾಗಿದೆ" ಮತ್ತು "ವಿಲೀನ ಒಪ್ಪಂದವನ್ನು ಜಾರಿಗೊಳಿಸಲು ಕಾನೂನು ಕ್ರಮವನ್ನು ಅನುಸರಿಸಲು ಯೋಜಿಸಿದೆ" ಎಂದು ಟ್ವೀಟ್ ಮಾಡಿದ್ದಾರೆ. ಡೆಲವೇರ್ ಕೋರ್ಟ್ ಆಫ್ ಚಾನ್ಸರಿಯಲ್ಲಿ ನಾವು ಜಯ ಸಾಧಿಸುವ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Twitter ಟ್ವಿಟರ್‌ಗೆ ಎಲಾನ್ ಮಸ್ಕ್ ಮಾಲೀಕ, 3.25 ಲಕ್ಷ ಕೋಟಿ ರೂಗೆ ಸಾಮಾಜಿಕ ಜಾಲತಾಣ ಖರೀದಿ!
ಮುಕ್ತ ಸ್ವಾತಂತ್ರ್ಯದ ವೇದಿಕೆಯಾಗಿ ಬದಲುಕು ಟ್ವಿಟರ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿದ್ದ ಎಲಾನ್ ಮಸ್ಕ್, ಟ್ವಿಟರ್ ಕಂಪನಿ ಒಪ್ಪಿದ್ದಲ್ಲಿ ಅದನ್ನು ಖರೀದಿ ಮಾಡಲು ಸಿದ್ಧ ಎಂದು ಹೇಳಿದ್ದರು. ಟ್ವಿಟರ್‌ನಲ್ಲಿ ಎಲಾನ್ ಮಸ್ಕ್ 100 ಮಿಲಿಯನ್‌ಗಿಂತಲೂ ಹೆಚ್ಚಿನ ಫಾಲೋವರ್‌ಗಳನ್ನು ಹೊಂದಿದ್ದಾರೆ.
ಇದರ ಬೆನ್ನಲ್ಲಿಯೇ ಶುಕ್ರವಾರ ಟ್ವಿಟರ್ ಷೇರುಗಳು ಶೇ.5ರಷ್ಟು ಕುಸಿದು ಪ್ರತಿ ಷೇರಿಗೆ 36.81 ಡಾಲರ್ ಆಗಿದೆ. ಎಲಾನ್ ಮಸ್ಕ್ ಪ್ರತಿ ಟ್ವಿಟರ್ ಷೇರಿಗೆ 54.20 ಡಾಲರ್ ನೀಡಿ ಖರೀದಿ ಮಾಡುವುದಾಗಿ ಹೇಳಿದ್ದರು. ಇನ್ನು ಡೀಲ್ ರದ್ದಾಗುವ ಘೋಷಣೆ ಹೊರಬಿದ್ದ ಬೆನ್ನಲ್ಲಿಯೇ ಟೆಸ್ಲಾ ಷೇರುಗಳು ಶೇ. 2.5ರಷ್ಟು ಏರಿಕೆಯಾಗಿ ಪ್ರತಿ ಷೇರಿಗೆ 752.29 ಡಾಲರ್ ಆಗಿದೆ. ಶುಕ್ರವಾರ ಮಾರುಕಟ್ಟೆ ವ್ಯವಹಾರ ಮುಗಿದ ಬಳಿಕ ಮಸ್ಕ್ ಅವರ ಡೀಲ್ ರದ್ದತಿ ಪತ್ರ ಅಧಿಕೃತವಾಗಿ ಘೋಷಣೆಯಾಗಿತ್ತು. ಆದರೂ ದಿನವಿಡೀ ಟ್ವಿಟರ್ ಷೇರುಗಳು ಕುಸಿತ ಕಂಡಿದ್ದರೆ, ಟೆಸ್ಲಾ ಷೇರುಗಳು ಏರಿಕೆಯಾಗಿದ್ದವು.