ತಿರುಪತಿ(ಪೆ.28): ತಿರುಮಲ ತಿರುಪತಿ ದೇವಾಲಯ ಆಡಳಿತ ಮಂಡಳಿ (ಟಿಟಿಡಿ)ಯು 2021-22ನೇ ಸಾಲಿನಲ್ಲಿ 2,938 ಕೋಟಿ ರು. ಬಜೆಟ್‌ ಮಂಡನೆಗೆ ಶನಿವಾರ ಅನುಮೋದನೆ ನೀಡಿದೆ. ದೇಗುಲವು ಪ್ರಸಕ್ತ ವರ್ಷ 2938 ಕೋಟಿ ರು. ಆದಾಯ ಗಳಿಸಬಹುದು ಎಂಬ ನಿರೀಕ್ಷೆಯಲ್ಲಿ ಈ ಮೊತ್ತದ ಬಜೆಟ್‌ಗೆ ಅನುಮೋದಿಸಲಾಗಿದೆ.

\ಮಂಡಳಿಯ ಸಭೆ ಬಳಿಕ ಮಾತನಾಡಿದ ವೈ.ವಿ.ಸುಬ್ಬಾ ರೆಡ್ಡಿ ಅವರು, ‘ಪ್ರಸಕ್ತ ಹಣಕಾಸು ವರ್ಷದಲ್ಲಿ ಭಕ್ತರಿಂದ ಸಂದಾಯವಾಗುವ ನಗದು ದೇಣಿಗೆ ಅಂದಾಜು 1131 ಕೋಟಿ ರು., ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಹಣದ ಬಡ್ಡಿಯಿಂದ ಅಂದಾಜು 533 ಕೋಟಿ ರು. ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ಅಂದಾಜು 375 ಕೋಟಿ ರು. ಆದಾಯದ ನಿರೀಕ್ಷೆ ಇದೆ.

ಉಳಿದಂತೆ ಪ್ರವೇಶ ಶುಲ್ಕ, ವಿಶೇಷ ಪ್ರವೇಶ ಶುಲ್ಕ, ಆನ್‌ಲೈನ್‌ ಟಿಕೆಟ್‌ಗಳಿಂದಾಗಿ ಅಂದಾಜು 280 ಕೋಟಿ ಸಂಗ್ರಹವಾಗಬಹುದು. ಇನ್ನು, ಟಿಟಿಡಿ ವಿಹಾಹ ಸಭಾಂಗಣ, ಭಕ್ತರಿಗೆ ಒದಗಿಸುವ ವಸತಿ ಸೌಲಭ್ಯಗಳಿಂದ 93 ಕೋಟಿ ರು., ಭಕ್ತರು ಮುಡಿ ನೀಡುವ ಕೂದಲಿನ ಹರಾಜಿನಿಂದ ಅಂದಾಜು 131 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.