ಚೀನಿ ಸರಕುಗಳ ವಿರುದ್ಧ ಟ್ರಂಪ್ ‘ಮನಿ’ ವಾರ್!

Trump Threatens Tariffs On All Chinese Imports
Highlights

ಮತ್ತೊಂದು ವಾಣಿಜ್ಯ ಯುದ್ಧಕ್ಕೆ ಅಮೆರಿಕ ರೆಡಿ

ಚೀನಿ ಸರಕುಗಳ ಆಮದು ಸುಂಕ ಹೆಚ್ಚಳಕ್ಕೆ ಮುಂದು

ಚೀನಿ ಸರಕುಗಳ ಮೇಲೆ ಟ್ರಂಪ್ ವಕ್ರದೃಷ್ಟಿ

ಚೀನಾ ಕೆರಳಿಸಿದ ಡೋನಾಲ್ಡ್ ಟ್ರಂಪ್ ನಿರ್ಧಾರ
 

ವಾಷಿಂಗ್ಟನ್(ಜು.20): ಅಗತ್ಯ ಬಿದ್ದರೆ ಚೀನಿ ಸರಕುಗಳ ಮೇಲಿನ ಆಮದು ಸುಂಕ ಏರಿಸಲು ಹಿಂದೇಟು ಹಾಕುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.

2017 ರಲ್ಲಿ ಅಮೆರಿಕ ಸುಮಾರು 505.5 ಬಿಲಿಯನ್ ಡಾಲರ್ ಚೀನಿ ಸರಕನ್ನು ಆಮದು ಮಾಡಿಕೊಂಡಿದ್ದು, ಅಮೆರಿಕದ ಮಾರುಕಟ್ಟೆ ಸಂಪೂರ್ಣ ಚೀನಿಮಯವಾಗಿರುವುದು ಟ್ರಂಪ್ ನಿದ್ದೆಗೆಡೆಸಿದೆ. ಈ ಹಿನ್ನೆಲೆಯಲ್ಲಿ ಚೀನಿ ಸರಕುಗಳ ಮೇಲಿನ ಆಮದು ಸುಂಕ ಹೆಚ್ಚಳಕ್ಕೆ ಟ್ರಂಪ್ ಮನಸ್ಸು ಮಾಡಿದ್ದು, ಇದು ಮತ್ತೊಂದು ಜಾಗತಿಕ ವಾಣಿಜ್ಯ ಯುದ್ಧಕ್ಕೆ ಮುನ್ನುಡಿ ಬರೆಯಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಚೀನಾದಿಂದ ಆಮದಾಗುವ ಯಾಂತ್ರಿಕ ಮತ್ತು ತಾಂತ್ರಿಕ ಉತ್ಪನ್ನಗಳ ಮೇಲೆ ಅಮೆರಿಕ ಶೇ. 25 ರಷ್ಟು ಆಮದು ಸುಂಕ ವಿಧಿಸಿದೆ. ಚೀನಾ ಈ ತಿಂಗಳ ಆರಂಭದಲ್ಲಿ ಸುಮಾರು 34 ಬಿಲಿಯನ್ ಡಾಲರ್ ಮೊತ್ತದ ಯಾಂತ್ರಿಕ ಮತ್ತು ತಾಂತ್ರಿಕ ಉತ್ಪನ್ನಗಳನ್ನು ಅಮೆರಿಕಕ್ಕೆ ರಫ್ತು ಮಾಡಿದೆ.

ಅಮೆರಿಕದ ಈ ನಡೆಯಿಂದ ಕೆರಳಿರುವ ಚೀನಾ, ತಾನೂ ಕೂಡ ಆಮದು ಸುಂಕ ಹೆಚ್ಚಿಸಿ ಸೇಡು ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ಕೂಡ ನೀಡಿತ್ತು. ಅಲ್ಲದೇ ಅಮೆರಿಕ ಹಿಂದೆಂದೂ ಕೇಳಿರದ ವಾಣಿಜ್ಯ ಯುದ್ಧವನ್ನು ಆರಂಭಿಸಲು ಹವಣಿಸುತ್ತಿದೆ ಎಂದು ಚೀನ ಆರೋಪಿಸಿದೆ.

ಇದಕ್ಕೆ ಪ್ರತ್ಯುತ್ತರ ನೀಡಿರುವ ಡೋನಾಲ್ಡ್ ಟ್ರಂಪ್, ತಾವು ಚೀನಿ ವಸ್ತುಗಳ ವಿರೋಧಿ ಅಲ್ಲ, ಆದರೆ ಅವರ ವ್ಯವಹಾರ ನೀತಿಯಿಂದ ಅಮೆರಿಕಕ್ಕೆ ಭಾರೀ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದಾರೆ. ಆಮದು ಸುಂಕ ಹೆಚ್ಚಳ ಮಾಡುವ ಅಧಿಕಾರ ತಮಗೆ ಇದ್ದು, ಅಗತ್ಯ ಬಿದ್ದರೆ ಚೀನಿ ಸರಕುಗಳ ಮೇಲಿನ ಆಮದು ಸುಂಕ ಹೆಚ್ಚಳ ಮಾಡಲು ಯೋಚಿಸುವುದಾಗಿ ಟ್ರಂಪ್ ಹೇಳಿದ್ದಾರೆ.

loader