TRAI Report Nov-2024: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಮತ್ತೊಮ್ಮೆ ಸಿಕ್ಕ ಅವಕಾಶವನ್ನು ಕಳೆದುಕೊಳ್ಳುವತ್ತ ಹೆಜ್ಜೆ ಇರಿಸಿದೆ. ಬೆಲೆ ಏರಿಕೆ ಮಾಡಿಕೊಂಡರೂ ರಿಲಯನ್ಸ್ ಜಿಯೋಗೆ ಗುಡ್‌ನ್ಯೂಸ್ ಸಿಕ್ಕಿದೆ.

ನವದೆಹಲಿ: ಟೆಲಿಕಾಂ ರೆಗುಲೆಟರಿ ಆಫ್ ಇಂಡಿಯಾ (TRAI) ನವೆಂಬರ್-2024ರ ಮೊಬೈಲ್ ಸಬ್‌ಸಕ್ರೈಬರ್ ಮಾಹಿತಿಯನ್ನು ಬಿಡುಗಡೆಗೊಳಿಸಿದೆ. ಈ ಮಾಹಿತಿ ಪ್ರಕಾರ, ಯಾವ ಟೆಲಿಕಾಂ ಕಂಪನಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ ಎಂದು ತಿಳಿಯುತ್ತದೆ. ಇದರ ಜೊತೆಯಲ್ಲಿ ಯಾವ ಕಂಪನಿಯ ಗ್ರಾಹಕರ ಸಂಖ್ಯೆ ಏರಿಕೆಯಾಗುತ್ತಿದೆ ಮತ್ತು ಇಳಿಕೆಯಾಗುತ್ತಿದೆ ಎಂದು ಸಹ ತಿಳಿಯುತ್ತದೆ. 2024ರ ನವೆಂಬರ್ ಪ್ರಕಾರ, ಯಾವ ಕಂಪನಿಯ ಬಳಕೆದಾರರ ಸಂಖ್ಯೆ ಏರಿಕೆ ಮತ್ತು ಇಳಿಕೆಯಾಗಿದೆ ಎಂದು ಗೊತ್ತಾಗಿದೆ. ಕಳೆದ ವರ್ಷ ಅಂದ್ರೆ ಜುಲೈ-2024ರಲ್ಲಿ ಟ್ಯಾರಿಫ್ ಬೆಲೆ ಏರಿಕೆಯಾಗಿದ್ದರಿಂದ ಗ್ರಾಹಕರು ಖಾಸಗಿ ಟೆಲಿಕಾಂ ಕಂಪನಿ ತೊರೆದು ಬಿಎಸ್‌ಎನ್‌ಎಲ್‌ನತ್ತ ಮುಖ ಮಾಡಿದ್ರು. ಇದೀಗ ಬಿಎಸ್‌ಎನ್‌ಎಲ್‌ಗೆ ಶಾಕ್ ಎದುರಾಗಿದೆ,

ಜುಲೈ-2024ರಲ್ಲಿ ಮೂರು ಖಾಸಗಿ ಟೆಲಿಕಾಂ ಕಂಪನಿಗಳು ರೀಚಾರ್ಜ್ ಪ್ಲಾನ್ ಬೆಲೆ ಏರಿಕೆ ಮಾಡಿಕೊಂಡಿದ್ದವು. ಬೆಲೆ ಏರಿಕೆ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಬಿಎಸ್‌ಎನ್‌ಎಲ್‌ ಪರವಾಗಿ ಸಾರ್ವಜನಿಕರಿಂದಲೇ ವ್ಯಾಪಕ ಪ್ರಚಾರ ಆರಂಭವಾಗಿತ್ತು. ಪರಿಣಾಮ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ಗೆ ಬಂದ ಗ್ರಾಹಕರ ಸಂಖ್ಯೆ ಏರಿಕೆಯಾಗಿತ್ತು. ಆದ್ರೆ ನವೆಂಬರ್ ತಿಂಗಳಲ್ಲಿ ಬಿಎಸ್‌ಎನ್‌ಎಲ್ 3.4 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಟ್ಯಾರಿಫ್‌ ಹೆಚ್ಚಾದ ನಂತರ ಮೊದಲ ಬಾರಿ ಬಿಎಸ್‌ಎನ್‌ಎಲ್‌ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಸದ್ಯ ಬಿಎಸ್‌ಎನ್ಎಲ್ ಬಳಿ 9.2 ಕೋಟಿ ಗ್ರಾಹಕರಿದ್ದಾರೆ.

ರಿಲಯನ್ಸ್ ಜಿಯೋ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆ
ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಬಳಕೆದಾರರ ಸಂಖ್ಯೆ ನವೆಂಬರ್ -2024ರಲ್ಲಿ ಏರಿಕೆಯಾಗಿದೆ. ರಿಲಯನ್ಸ್‌ ಜಿಯೋಗೆ ನವೆಂಬರ್‌ನಲ್ಲಿ ಹೊಸದಾಗಿ 12 ಲಕ್ಷ ಯೂಸರ್ಸ್ ಬಂದಿದ್ದಾರೆ. ಸದ್ಯ ರಿಲಯನ್ಸ್ ಜಿಯೋ ನೆಟ್‌ವರ್ಕ್ 46.1 ಕೋಟಿ ಬಳಕೆದಾರರನ್ನು ಹೊಂದುವ ಮೂಲಕ ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಇದನ್ನೂ ಓದಿ: 26 ಸಾವಿರ ರಿಯಾಯಿತಿ, ₹9999ಕ್ಕೆ ಸ್ಮಾರ್ಟ್‌ಫೋನ್;ರಿಲಯನ್ಸ್ ಡಿಜಿಟಲ್ ಸೇಲ್‌ನಲ್ಲಿ ಭರ್ಜರಿ ಆಫರ್

38.4 ಕೋಟಿ ಬಳಕೆದಾರರನ್ನು ಹೊಂದುವ ಮೂಲಕ ಏರ್‌ಟೆಲ್ ದೇಶದ 2ನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದೆ. ನವೆಂಬರ್ 2024ರ ವರದಿ ಪ್ರಕಾರ, ಈ ತಿಂಗಳಲ್ಲಿ ಏರ್‌ಟೆಲ್‌ 11 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದೆ. ಇನ್ನು ಮೂರನೇ ಸ್ಥಾನದಲ್ಲಿ ವೊಡಾಫೋನ್ ಐಡಿಯಾ ಇದೆ. 

ವೊಡಾಫೋನ್ ಐಡಿಯಾಗೂ ಬಿಗ್ ಶಾಕ್
ಮೂರನೇ ಸ್ಥಾನದಲ್ಲಿರುವ ವೊಡಾಫೋನ್ ಐಡಿಯಾ 2024ರ ನವೆಂಬರ್ ನಲ್ಲಿ ಅತ್ಯಧಿಕ ಬಳಕೆದಾರರನ್ನು ಕಳೆದುಕೊಂಡದೆ. ವರದಿಗಳ ಪ್ರಕಾರ, 15 ಲಕ್ಷ ಬಳಕೆದಾರರು ವೊಡಾಫೋನ್ ಐಡಿಯಾ ನೆಟ್‌ವರ್ಕ್‌ ನಿಂದ ಹೊರ ಬಂದಿದ್ದಾರೆ. 20.8 ಕೋಟಿ ಬಳಕೆದಾರರನ್ನು ಹೊಂದುವ ಮೂಲಕ ವೊಡಾಫೋನ್ ಐಡಿಯಾ ಮೂರನೇ ಸ್ಥಾನದಲ್ಲಿದ್ದು, ಗ್ರಾಹಕರನ್ನು ಸೆಳೆಯಲು ಆತ್ಯಾಕರ್ಷಕ ಪ್ಲಾನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ವೊಡಾಫೋನ್ ಸಹ 5G ಸರ್ವಿಸ್ ಆರಂಭಿಸುತ್ತಿದೆ.

ಇದನ್ನೂ ಓದಿ: ಜಿಯೋ, ಏರ್‌ಟೆಲ್‌ನಿಂದ ಡೇಟಾ ಇಲ್ಲದ 90 ದಿನದ ಪ್ಲಾನ್ ಬಿಡುಗಡೆ; ಬೆಲೆ ಎಷ್ಟು? ಗ್ರಾಹಕರಿಗೆ ಲಾಭವೋ? ನಷ್ಟವೋ?