ಉತ್ಪಾದನೆ ಹೆಚ್ಚಳಕ್ಕೆ ಬಿಡದಿ ಘಟಕ ಉನ್ನತೀಕರಿಸಿದ ಟೊಯೋಟಾ ಕಿರ್ಲೋಸ್ಕರ್; 90 ಕೋಟಿಗಿಂತಲೂ ಅಧಿಕ ಹೂಡಿಕೆ
ಟೊಯೋಟಾ ಕಿರ್ಲೋಸ್ಕರ್ ಕಂಪನಿ ಕರ್ನಾಟಕದ ಬಿಡದಿಯಲ್ಲಿರುವ ತನ್ನ ಉತ್ಪಾದನಾ ಘಟಕದ ಉನ್ನತೀಕರಣಕ್ಕೆ ಮುಂದಾಗಿದೆ.ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಈಗಾಗಲೇ ಪ್ರಾರಂಭಗೊಂಡಿವೆ ಕೂಡ.ಕಾರಿಗೆ ಬೇಡಿಕೆ ಸಲ್ಲಿಸಿ ಗ್ರಾಹಕರು ಕಾಯಬೇಕಾದ ಅವಧಿ ತಗ್ಗಿಸುವ ಉದ್ದೇಶದಿಂದ ಉತ್ಪಾದನೆ ಹೆಚ್ಚಿಸಲು ಕಂಪನಿ ಈ ಕ್ರಮ ಕೈಗೊಂಡಿದೆ.
ಬೆಂಗಳೂರು (ಮೇ17): ಟೊಯೋಟಾ ಕಿರ್ಲೋಸ್ಕರ್ ಕರ್ನಾಟಕದಲ್ಲಿರುವ ಉತ್ಪಾದನ ಘಟಕವನ್ನು ಮೂರನೇ ಬಾರಿಗೆ ಮೇಲ್ದೆರ್ಜೆಗೇರಿಸಲು ಮುಂದಾಗಿದೆ. ಆ ಮೂಲಕ ಉತ್ಪಾದನಾ ಸಾಮರ್ಥ್ಯವನ್ನು ಸುಮಾರು ಶೇ.30ರಷ್ಟು ಹೆಚ್ಚಿಸಿದೆ. ಈ ಮೂಲಕ ಟೋಯೋಟಾದ ಜನಪ್ರಿಯ ಮಾಡೆಲ್ ಗಳಾದ ಇನ್ನೋವಾ ಕ್ರಿಸ್ಟಾ ಹಾಗೂ ಫಾರ್ಚೂನರ್ ಗಾಗಿ ಗ್ರಾಹಕರು ಕಾಯುವ ಅವಧಿಯನ್ನು ತಗ್ಗಿಸಲು ನಿರ್ಧರಿಸಿದೆ. ಬಿಡದಿಯಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿನ ಮೂಲಸೌಕರ್ಯವನ್ನು ಉನ್ನತೀಕರಿಸಲು 90ಲಕ್ಷ ರೂ.ಗಿಂತಲೂ ಹೆಚ್ಚಿನ ಹಣ ಹೂಡಿಕೆ ಮಾಡಿದೆ. ಹಾಗೆಯೇ ಉನ್ನತೀಕರಣದ ಮೂರನೇ ಹಂತದಲ್ಲಿ 1,500 ಉದ್ಯೋಗಿಗಳನ್ನು ಕೂಡ ನೇಮಕ ಮಾಡಿಕೊಳ್ಳಲಿದೆ ಎಂದು ಹೇಳಲಾಗಿದೆ. ಬೆಂಗಳೂರಿನ ಹೊರವಲಯದ ಉತ್ಪಾದನ ಸಾಮರ್ಥ್ಯ ಹೆಚ್ಚಿಸಲು ಬಿಡದಿಯಲ್ಲಿರುವ ಒಂದನೇ ಘಟಕದಲ್ಲಿ ಮೇ ತಿಂಗಳ ಮೊದಲ ವಾರದಲ್ಲಿ ಮೂರನೇ ಹಂತದ ಉನ್ನತೀಕರಣ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ.ಈ ಬಗ್ಗೆ ಟಿಕೆಎಂ ಹಿರಿಯ ಉಪಾಧ್ಯಕ್ಷ ಹಾಗೂ ಮುಖ್ಯ ಸಂವಹನ ಅಧಿಕಾರಿ ಸುದೀಪ್ ಎಸ್ ದಲ್ವಿ ಪಿಟಿಐಗೆ ಮಾಹಿತಿ ನೀಡಿದ್ದಾರೆ. ನಿರ್ದಿಷ್ಟ ವಲಯಗಳಲ್ಲಿ ಮಾರ್ಪಾಡುಗಳನ್ನು ಮಾಡಲು ಉತ್ಪಾದನಾ ಘಟಕವನ್ನು ಸುಮಾರು ಒಂದು ವಾರಗಳ ಕಾಲ ಮುಚ್ಚಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
'ಉತ್ಪಾದನಾ ಘಟಕದ ಸಾಮರ್ಥ್ಯ ಹೆಚ್ಚಿಸಲು ನಾವು 900 ಮಿಲಿಯನ್ ರೂ.ಗಿಂತ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಿದ್ದೇವೆ' ಎಂದು ಸುದೀಪ್ ಎಸ್ ದಲ್ವಿ ತಿಳಿಸಿದ್ದಾರೆ. ಮೂರನೇ ಹಂತದ ಘಟಕದಲ್ಲಿ ಪ್ರಸ್ತುತ ಉತ್ಪಾದಿಸುತ್ತಿರುವ ಪ್ರಮಾಣಕ್ಕಿಂತ ಶೇ.30ರಷ್ಟು ಹೆಚ್ಚು ಉತ್ಪಾದನೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಘಟಕದಿಂದ ವಾರ್ಷಿಕ 30,000ಕ್ಕಿಂತಲೂ ಅಧಿಕ ಯುನಿಟ್ ಗಳ ಉತ್ಪಾದನೆ ಮಾಡಲು ಟಿಕೆಎಂ ಎದುರು ನೋಡುತ್ತಿದೆ.
ಹೊಸ ಇನ್ನೋವಾ ಕ್ರಿಸ್ಟಾ ಟಾಪ್ 2 ಮಾಡೆಲ್ ಬೆಲೆ ಪ್ರಕಟ, 50 ಸಾವಿರ ರೂಗೆ ಬುಕ್ ಮಾಡಿ ಹೊಸ ಕಾರು!
ಈ ವಾಹನ ತಯಾರಿಕ ಕಂಪನಿ ಬಿಡದಿ ಘಟಕದಲ್ಲಿ ಎರಡು ಸೌಲಭ್ಯಗಳನ್ನು ಹೊಂದಿದೆ. ಇದರಿಂದ ಬೇರೆ ಬೇರೆ ಉತ್ಪಾದನೆ ಕೈಗೊಳ್ಳಲು ಸಾಧ್ಯವಾಗಿದೆ. ಟಿಕೆಎಂ ಘಟಕ 1ರಲ್ಲಿ 1999ರ ಡಿಸೆಂಬರ್ 1ರಿಂದ ಉತ್ಪಾದನೆ ಪ್ರಾರಂಭಿಸಲಾಗಿದೆ.ಪ್ರಸ್ತುತ ಇಲ್ಲಿ ಇನ್ನೋವಾ ಹೈಕ್ರಾಸ್, ಇನ್ನೋವಾ ಕ್ರಿಸ್ಟಾ, ಫಾರ್ಚೂನರ್ ಹಾಗೂ ಲೆಜೆಂಡರ್ ಉತ್ಪಾದನೆ ಮಾಡುತ್ತಿದೆ.ಇನ್ನು ಕ್ಯಾಮ್ರೆ ಹೈಬ್ರೀಡ್ ಹಾಗೂ ಹಿಲಕ್ಸ್ ಬಿಡಿ ಭಾಗಗಳ ಜೋಡಣೆಯನ್ನು ಕೂಡ ಇಲ್ಲಿ ಮಾಡಲಾಗುತ್ತದೆ. ಟಿಕೆಎಂ ಬಿಡದಿ ಘಟಕದಲ್ಲಿ ಪ್ರಸ್ತುತ ವಾರ್ಷಿಕ 3.10ಲಕ್ಷ ಯುನಿಟ್ ಗಳನ್ನು ಉತ್ಪಾದಿಸುತ್ತಿದೆ.
ಇನ್ನು ಎರಡನೇ ಘಟಕದಲ್ಲಿ ಹೈರೈಡರ್ ಹಾಗೂ ಗ್ರ್ಯಾಂಡ್ ವಿತರ ಉತ್ಪಾದಿಸಲಾಗುತ್ತದೆ. ಆದರೆ,ಘಟಕ ಈ ಬಾರಿಯ ಸಾಮರ್ಥ್ಯ ಹೆಚ್ಚಳ ಕಾರ್ಯಕ್ರದಲ್ಲಿ ಇಲ್ಲ. ಏಪ್ರಿಲ್ ನಲ್ಲಿ ಟಿಕೆಎಂ ಟಾಪ್ ಮಾಡೆಲ್ ಮಲ್ಟಿ ಪರ್ಪಸ್ ವಾಹನಗಳಾದ ಇನ್ನೋವಾ ಹೈಕ್ರಾಸ್ ಬುಕ್ಕಿಂಗ್ ಅನ್ನು ಸ್ಥಗಿತಗೊಳಿಸಿತ್ತು.ಇದಕ್ಕೆ ಕಾರಣ ಪೂರೈಕೆ ಸರಪಳಿಯಲ್ಲಿನ ಸವಾಲುಗಳು. ಕಳೆದ ವರ್ಷ ಕೂಡ ಇನ್ನೊವಾ ಕ್ರಿಸ್ಟಾದ ಡಿಸೇಲ್ ವಾಹನಗಳ ಆರ್ಡರ್ ಸ್ಥಗಿತಗೊಳಿಸಿತ್ತು. ಇದಕ್ಕೆ ಕಾರಣ ಈ ವಾಹನಕ್ಕಿದ್ದ ಅಧಿಕ ಬೇಡಿಕೆ ಹಾಗೂ ಹೆಚ್ಚಳಗೊಂಡ ಕಾಯುವಿಕೆ ಅವಧಿ.
50 ಸಾವಿರ ರೂಗೆ ಬುಕ್ ಮಾಡಿ ಹೊಚ್ಚ ಹೊಸ ಇನೋವಾ ಕ್ರಿಸ್ಟಾ ಡೀಸೆಲ್ ಕಾರು!
ಮೇ ಮೊದಲ ವಾರ ಹೊಚ್ಚ ಹೊಸ ಇನ್ನೋವಾ ಕ್ರಿಸ್ಟಾದ ಟಾಪ್ ಎರಡು ಮಾಡೆಲ್ ಕಾರಿನ ಬೆಲೆಯನ್ನು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರಕಟಿಸಿತ್ತು.ಟಾಪ್ ಮಾಡೆಲ್‌ಗಳಾದ ZX ಹಾಗೂ VX ಮಾಡೆಲ್ ಕಾರಿನ ಬೆಲೆಯನ್ನು ಘೋಷಿಸಿತ್ತು. ಎಂಪಿವಿ ವಿಭಾಗದಲ್ಲಿ ಸದ್ಯ ಇನ್ನೋವಾ ಕಾರು ಮೀರಿಸಬಲ್ಲ ಕಾರಿಲ್ಲ. ಹಲವು ಪ್ರತಿಸ್ಪರ್ಧಿ ಕಾರುಗಳಿದ್ದರೂ ಇನ್ನೋವ ಭಾರತದಲ್ಲಿ ಗ್ರಾಹಕರ ವಿಶ್ವಾಸ ಉಳಿಸಿಕೊಂಡಿದೆ. 2005ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಇನೋವಾ ಕಾರು ಬಿಡುಗಡೆಯಾಗಿದೆ. ಬಳಿಕ ಹಲವು ರೂಪಾಂತರಗಳು, ಅಪ್‌ಗ್ರೇಡ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಇನ್ನೋವಾ ಕಾರುಗಳು ಮಾರಾಟವಾಗಿದೆ.